ನವದೆಹಲಿ,ಜ.5- ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ತಾವು ಗೆದ್ದರೆ ಕಲ್ಕಾಜೀ ವಿಧಾನಸಭಾ ಕ್ಷೇತ್ರದ ರಸ್ತೆಗಳನ್ನು ಕಾಂಗ್ರೆಸ್ ನಾಯಕಿ, ಸಂಸದೆ ಪ್ರಿಯಾಂಕ ಗಾಂಧಿ ಅವರ ಕೆನ್ನೆಯಂತೆ ಮಾಡುತ್ತೇನೆಂದು ಬಿಜೆಪಿ ಅಭ್ಯರ್ಥಿ ರಮೇಶ್ ಬಿಂಧೂರಿ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ.
ರಮೇಶ್ ಬಿಂಧೂರಿ ಅವರ ಈ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದ್ದು, ಬಿಜೆಪಿಯು ಮಹಿಳಾ ವಿರೋಧಿ ಪಕ್ಷ ಎಂಬುದಕ್ಕೆ ಇದಕ್ಕಿಂತ ಬೇರೆ ಏನು ಸಾಕ್ಷಿ ಬೇಕು ಎಂದು ಪ್ರಶ್ನೆ ಮಾಡಿದೆ.
ಒಬ್ಬ ಮಾಜಿ ಸಂಸದರ ಈ ಹೇಳಿಕೆ ನಾಚಿಗೇಡಿತನ. ಅಲ್ಲದೆ ಇದು ಮಹಿಳೆಯರ ವಿಷಯದಲ್ಲಿ ಅವರ ಕೊಳಕು ಮನಸ್ಥಿತಿಯನ್ನು ಬಿಂಬಿಸಿದೆ. ಇದು ರಮೇಶ್ ಬಿಂಧೂರಿಯವರ ಹೇಳಿಕೆ ಮಾತ್ರವಲ್ಲದೆ ಬಿಜೆಪಿಯ ಮುಖವಾಡವೂ ಬಯಲಾಗಿದೆ ಎಂದು ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ.
ಆದರೆ ಇಷ್ಟೆಲ್ಲ ವಿವಾದವಾದರೂ ರಮೇಶ್ ಬಿಂಧೂರಿ ತಮ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಹಿಂದೆ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಬಾಲಿವುಡ್ ನಟಿ ಹೇಮಾಮಾಲಿನಿ ಕೆನ್ನೆ ತರ ಮಾಡುತ್ತೇನೆ ಎಂದಿದ್ದರು. ಆಗಿಲ್ಲದ ವಿವಾದ ಈಗೇಕೆ ಎಂದು ಪ್ರಶ್ನಿಸಿದರು.
ಅಂದು ಲಾಲೂ ಹೇಳಿಕೆಯನ್ನು ಕಾಂಗ್ರೆಸ್ ವಿರೋಧ ಮಾಡಿತ್ತೇ? ನನ್ನ ಹೇಳಿಕೆ ಮಹಿಳಾ ವಿರೋಧಿ ಎನ್ನುವುದಾದರೆ ಲಾಲೂ ಜೊತೆ ಇವರು ಮೈತ್ರಿ ಮಾಡಿಕೊಂಡಿಲ್ಲವೇ? ಆರ್ಜೆಡಿ ಮಹಿಳಾ ವಿರೋಧ ಪಕ್ಷವೇ ಎಂದು ಪ್ರಶ್ನಿಸಿದ್ದಾರೆ.