ಬೆಂಗಳೂರು,ಆ.16– ಶ್ರೀ ಕ್ಷೇತ್ರ ಧರ್ಮಸ್ಥಳ ಕುರಿತು ನಡೆಯುತ್ತಿರುವ ಅಪಪ್ರಚಾರ, ಅವ ಹೇಳನ ಖಂಡಿಸಿ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ಅಭಿಯಾನಕ್ಕೆ ಚಾಲನೆ ದೊರಕಿತು.
ನೆಲಮಂಗಲ ಟೋಲ್ ಬಳಿಯಿಂದ ಸುಮಾರು 400ಕ್ಕೂ ಹೆಚ್ಚು ವಾಹನಗಳಲ್ಲಿ ಬೆಳಗ್ಗೆ 6.30ಕ್ಕೆ ಯಲಹಂಕ ಕ್ಷೇತ್ರದ ಭಕ್ತರ ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಅವರು ಶ್ರೀ ಕ್ಷೇತ್ರಕ್ಕೆ ಪ್ರಯಾಣ ಆರಂಭಿಸಿದ್ದಾರೆ. ಸಂಜೆ ಧರ್ಮಸ್ಥಳದ ಮಂಜುನಾಥನ ವಿಶೇಷ ದರ್ಶನ ಪಡೆದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂಬ ಬೇಡಿಕೆಯೊಂದಿಗೆ ಸಂಕಲ್ಪ ಮಾಡಲಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಧರ್ಮಸ್ಥಳಕ್ಕೆ ಹೋಗುತ್ತಿದ್ದೇವೆ. ಸಂಜೆ ಮಂಜುನಾಥ ಸ್ವಾಮಿ ದರ್ಶನ ಪಡೆದು ಸಂಕಲ್ಪ ಮಾಡುತ್ತೇವೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದು ಸಂಕಲ್ಪ ಮಾಡುತ್ತೇವೆ ಎಂದರು.
ಬೆಂಗಳೂರಿನಿಂದ ಹೊರಟ ಬೃಹತ್ ರ್ಯಾಲಿಗೆ ಬೂವನಹಳ್ಳಿ ಬೈಪಾಸ್ನಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರು.. ಸ್ವಾಗತ ಕೋರುತ್ತಿದ್ದಂತೆ ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಘೋಷ ವಾಕ್ಯವನ್ನು ಕಾರ್ಯಕರ್ತರು ಕೂಗಿದರು.
ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್ಗೇಟ್‌ನಿಂದ ಯಾತ್ರೆ ಆರಂಭಗೊಂಡು ಹಾಸನದಿಂದ ಸಕಲೇಶಪುರದ ಮೂಲಕ ಶಿರಾಡಿಘಾಟ್ ರಸ್ತೆ ಮಾರ್ಗವಾಗಿ ರ್ಯಾಲಿ ಧರ್ಮಸ್ಥಳಕ್ಕೆ ತೆರಳಲಿದೆ. ರ್ಯಾಲಿಯಲ್ಲಿ ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದರು.ಹಿಂದೂ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ಕರ್ನಾಟಕದಾದ್ಯಂತ ದೇವಾಲಯದ ಪಾವಿತ್ರ್ಯವನ್ನು ರಕ್ಷಿಸಲು ಧರ್ಮಸ್ಥಳದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳುವುದು ರ್ಯಾಲಿಯ ಪ್ರಮುಖ ಉದ್ದೇಶವಾಗಿದೆ.
ಬಿಜೆಪಿ ನಾಯಕರು ಧರ್ಮಾಧಿಕಾರಿ ಅವರನ್ನು ಭೇಟಿ ಮಾಡಿ ದೇವಾಲಯ ಪಟ್ಟಣದ ಸುತ್ತಮುತ್ತಲಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದ ನೈತಿಕ ಬೆಂಬಲವನ್ನು ವ್ಯಕ್ತಪಡಿಸುವ ನಿರೀಕ್ಷೆಯಿದೆ. ಪ್ರತಿಯೊಂದು ವಾಹನದಲ್ಲಿ ಕೇಸರಿ ಧ್ವಜಗಳಿದ್ದವು.ಒಂದು ವಾಹನದ ಒಳಗೆ ನಾಲ್ಕರಿಂದ ಐದು ಜನರು ಇರುತ್ತಾರೆ, ಪ್ರತಿ ವಾಹನದಲ್ಲಿ ಕೇಸರಿ ಬಣ್ಣದ ಸ್ಟಿಕ್ಕರ್ಗಳನ್ನು ಅಂಟಿಸಿದ್ದರು. ಪ್ರತಿ ವಾಹನದ ಮೇಲೆ ಱಱಧರ್ಮಸ್ಥಳವನ್ನು ಉಳಿಸಿ, ನಾವು ಧರ್ಮಸ್ಥಳದೊಂದಿಗೆ ಇದ್ದೇವೆ,ೞೞ ಮತ್ತು ಱಱಧರ್ಮಸ್ಥಳ ಚಲೋ ಎಂಬ ಸಂದೇಶಗಳೊಂದಿಗೆ ಮೂರು ಕೇಸರಿ ಬಣ್ಣದ ಸ್ಟಿಕ್ಕರ್ಗಳು ಇರುತ್ತವೆ. ವಾಹನಗಳಿಗೆ ಸರಣಿ ಸಂಖ್ಯೆಗಳನ್ನು ನೀಡಲಾಗಿತ್ತು. ಆಂಬ್ಯುಲೆನ್ಸ್ ಗಳು ಮತ್ತು ಮೆಕ್ಯಾನಿಕ್‌ಗಳು ರ್ಯಾಲಿಯೊಂದಿಗೆ ಬಂದಿದ್ದರು.
ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆಯಲ್ಲಿ ಕಳೇಬರ ಸಿಗದ ಬೆನ್ನಲ್ಲೆ ದೇಗುಲಕ್ಕೆ ಅಪಪ್ರಚಾರ ಎಸಗಲಾಗುತ್ತಿದೆ ಎಂದು ದೇಗುಲದ ಭಕ್ತರ ಆಕ್ರೋಶ ಹೆಚ್ಚಾಗಿದೆ. ಮತ್ತೊಂದು ಕಡೆ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದಿದ್ದರೆ, ಇನ್ನೊಂದು ಕಡೆ ಹಿಂದೂ ಸಂಘಟನೆಗಳು ಬೆಂಗಳೂರಿನಲ್ಲಿ ಹೋರಾಟಕ್ಕೆ ಸಮಯ ನಿಗಧಿಪಡಿಸಿಕೊಂಡಿವೆ.
ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗವೂ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದದಲ್ಲಿದ್ದು, ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಿದ್ದಾರೆ.ಉಡುಪಿ, ಮಂಗಳೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ 30-35 ಶಾಸಕರು ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ನಾಳೆ ದೇವಾಲಯ ಭೇಟಿಯ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು : ಎನ್. ರವಿಕುಮಾರ್
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ತಡೆಯಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸ್ವಾರ್ಥಪರ ಗುಂಪುಗಳು ನಡೆಸುತ್ತಿರುವ ಈ ನಿರಾಧಾರ ಅಪಪ್ರಚಾರದಿಂದ ಕರ್ನಾಟಕದ ಕೋಟ್ಯಾಂತರ ಧರ್ಮಸ್ಥಳ ಭಕ್ತರ ಧಾರ್ಮಿಕ ಭಾವನೆಗಳು ತೀವ್ರವಾಗಿ ಗಾಯಗೊಂಡಿವೆ. ಜನರಲ್ಲಿ ಈಗಾಗಲೇ ಆಕ್ರೋಶ ಮತ್ತು ಅಸಮಾಧಾನ ತೀವ್ರವಾಗಿದೆ ಎಂದು ಎಚ್ಚರಿಸಿದ್ದಾರೆ.
ದುರಾದೃಷ್ಟವಶಾತ್, ಧರ್ಮಸ್ಥಳದ ಭಕ್ತರು ಮತ್ತು ಸ್ವಯಂಘೋಷಿತ ಸಮಾಜ ಸುಧಾರಕರ ನಡುವೆ ಘರ್ಷಣೆ ಉಂಟಾದರೆ ಅದರ ಪರಿಣಾಮಗಳು ಊಹಿಸಲಾಗದಷ್ಟು ಭಯಾನಕವಾಗಿರುತ್ತವೆ. ಇಂತಹ ಭೀಕರ ಪರಿಸ್ಥಿತಿ ಉಂಟಾದರೆ ಸರ್ಕಾರವೇ ಅದಕ್ಕೆ ಹೊಣೆ ಹೊರಬೇಕೆಂದು ಆಗ್ರಹಿಸಿದ್ದಾರೆ.
ಸೌಜನ್ಯಾ ಪ್ರಕರಣಕ್ಕೆ ನ್ಯಾಯ ದೊರೆಯುವ ನಿರೀಕ್ಷೆಯೊಂದಿಗೆ ಬಿಜೆಪಿಯು ಎಚ್ಚರಿಕೆಯಿಂದ ಕೂಡಿದ ಆತವಿಶ್ವಾಸದಿಂದಲೇ ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿತ್ತು ಎಂದು ಹೇಳಿದ್ದಾರೆ.
ತನಿಖೆ ಪ್ರತಿದಿನವೂ ಅನಾವಶ್ಯಕ ಮತ್ತು ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಮುಖವಾಡ ಧರಿಸಿದ ವ್ಯಕ್ತಿಯ ಗುರುತನ್ನು ಪೋಲೀಸರು ಇನ್ನೂ ಬಹಿರಂಗಪಡಿಸಿಲ್ಲ, ಅವನನ್ನು ಯಾವುದೇ ಪರೀಕ್ಷೆಗೆ ಒಳಪಡಿಸಿರುವುದೂ ಇಲ್ಲ. ಈ ತನಿಖೆ ದಿನದಿಂದ ದಿನಕ್ಕೆ ರಹಸ್ಯದಿಂದ ಕೂಡಿರುವ ಮರ್ಮದಂತೆ ಗೋಚರಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಅಸ್ಪಷ್ಟತೆ ಅಂಗೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
ಎಸ್‌ಐಟಿ ತನಿಖೆಯ ಮಧ್ಯಂತರ ವರದಿಯನ್ನು ಎರಡೂ ಸದನಗಳಲ್ಲಿ ಮಂಡಿಸುವಂತೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್‌ಅವರಿಗೆ ಮನವಿ ಮಾಡಿದ್ದಾರೆ. ರಾಜ್ಯಾದ್ಯಂತ ತೀವ್ರವಾಗಿ ವ್ಯಕ್ತವಾಗುತ್ತಿರುವ ಜನರ ಆಕ್ರೋಶವನ್ನು ಶಮನಗೊಳಿಸಲು ಮಧ್ಯಂತರ ವರದಿ ನೀಡುವುದು ಅಗತ್ಯವಾಗಿದೆ. ಜೊತೆಗೆ, ತನಿಖೆಯನ್ನು ಪೂರ್ಣಗೊಳಿಸಲು ಎಸ್‌ಐಟಿಗೆ ಸರ್ಕಾರವು ಸ್ಪಷ್ಟ ಗಡುವನ್ನು ನಿಗದಿಪಡಿಸಬೇಕು. ಇದು ಅನಂತ ಕಾಲ ಮುಂದುವರಿಯುವಂತಿಲ್ಲ ಎಂದು ರವಿಕುಮಾರ್ ಪತ್ರಿಕಾ ಪ್ರಟಣೆಯಲ್ಲಿ ತಿಳಿಸಿದ್ದಾರೆ.
- “ಸಿದ್ದರಾಮಯ್ಯನವರೇ, ಗುಲಾಮಿ ಸಂಸ್ಕೃತಿಯ ಕಾಂಗ್ರೆಸ್ ನೆರಳಿನಲ್ಲಿ ನಿಂತು RSS ಕುರಿತು ಮಾತನಾಡುವ ಅರ್ಹತೆ ನಿಮಗಿಲ್ಲ”
- ವಿಶ್ವದ ಅತ್ಯಂತ ದುಬಾರಿ ನಿಸಾರ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಗೆ ಜೋಡಿಸುವಲ್ಲಿ ಇಸ್ರೋ -ನಾಸಾ ಯಶಸ್ವಿ
- ಭಾರತ- ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ : ಮತೊಮ್ಮೆ ಕನವರಿಸಿದ ಟ್ರಂಪ್
- ಶ್ರೀ ಕ್ಷೇತ್ರದ ಕುರಿತು ಅಪಪ್ರಚಾರ ಖಂಡಿಸಿ ಬಿಜೆಪಿಯಿಂದ ‘ಧರ್ಮಸ್ಥಳ ಚಲೋ’ ಅಭಿಯಾನ
- ಧರ್ಮಸ್ಥಳ ಅನಾಮಿಕನ ಪ್ರಕರಣ : ಎಸ್ಐಟಿಯಿಂದ ಮಧ್ಯಂತರ ವರದಿ