ಬೆಂಗಳೂರು,ಏ.29- ರಾಜ್ಯಾದ್ಯಂತ ಭಾರೀ ವಿವಾದದ ಬಿರುಗಾಳಿಯನ್ನೇ ಸೃಷ್ಟಿಸಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಸೇರಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಕುರಿತು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರಿಗೆ ಹಾಸನದ ಪ್ರಮುಖರೊಬ್ಬರು ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
2023 ಡಿಸೆಂಬರ್ 8ರಂದು ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರಗೆ ಹೊಳೆನರಸೀಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ದೇವರಾಜ ಗೌಡ ಎಂಬುವರು ಪ್ರಜ್ವಲ್ ರೇವಣ್ಣನವರಿಗೆ ಸಂಬಂಧಿಸಿದ ಎನ್ನಲಾದ ಅಶ್ಲೀಲ ವಿಡಿಯೋಗಳ ಕುರಿತು ಗಮನ ಸೆಳೆದಿದ್ದರು.
ವಿಜಯೇಂದ್ರರಿಗೆ ಎರಡು ಪುಟಗಳ ಪತ್ರ ಬರೆದಿದ್ದ ದೇವರಾಜ ಗೌಡ ಹಾಸನದಲ್ಲಿ ಪ್ರಜ್ವಲ್ ರೇವಣ್ಣನವರಿಗೆ ಸೇರಿದ ಸುಮಾರು 3 ಸಾವಿರ ಅಶ್ಲೀಲ ವಿಡಿಯೋಗಳು ಜಿಲ್ಲೆಯಾದ್ಯಂತ ಹರಿದಾಡುತ್ತಿವೆ. ಸರ್ಕಾರಿ ಅಧಿಕಾರಿಗಳು, ಯುವತಿಯರು, ಮನೆಗೆಲೆಸದವರು ಸೇರಿದಂತೆ ಅನೇಕರು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ.
ಪೆನ್‌ಡ್ರೈವ್ ಈಚೆ ಬರುತ್ತಿದ್ದಂತೆ ಇದೀಗ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸಂತ್ರಸ್ತರು ಪ್ರಜ್ವಲ್ ರೇವಣ್ಣಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಇದರ ಬಗ್ಗೆ ನೀವು ಗಮನಹರಿಸಬೇಕೆಂದು ದೇವರಾಜ ಗೌಡ ಪತ್ರದಲ್ಲಿ ಮನವಿ ಮಾಡಿದ್ದರು.
ಪ್ರಜ್ವಲ್ ರೇವಣ್ಣ ಇದರಲ್ಲಿ ಶಾಮೀಲಾಗಿರುವುದು ಕಂಡುಬಂದಿದೆ. ಮಹಿಳೆಯರನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಂಡಿರುವ ಬಗ್ಗೆ ಜಿಲ್ಲೆಯಾದ್ಯಂತ ಗುಸುಗುಸು ಹಬ್ಬಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕುಟುಂಬದ ವಿರುದ್ಧ ಹಲವು ಆರೋಪಗಳು ಕೇಳಿಬಂದಿವೆ. ನನಗೆ ತಿಳಿದಿರುವ ಮಾಹಿತಿ ಪ್ರಕಾರ 2976 ವಿಡಿಯೋಗಳಿವೆ.
ಕೆಲವು ವಿಡಿಯೋಗಳನ್ನು ಮಹಿಳೆಯರಿಗೆ ತೋರಿಸಿ ಬ್ಲಾಕ್‌ಮೇಲ್ ಮಾಡಿ ಲೈಂಗಿಕ ಚಟುವಟಿಕೆಗಳಿಗೆ ಪ್ರಜ್ವಲ್ ರೇವಣ್ಣ ಬಳಸಿಕೊಂಡಿದ್ದಾರೆ ಎಂಬ ಆರೋಪವಿದೆ. ಈಗಾಗಲೇ ಪೆನ್‌ಡ್ರೈವ್‌ನ್ನು ಹಾಸನ ಜಿಲ್ಲೆಯ ಕೆಲವು ಕಾಂಗ್ರೆಸ್ ನಾಯಕರು ಎಐಸಿಸಿ ಅಧ್ಯಕ್ಷರಿಗೆ ತಲುಪಿಸಿದ್ದಾರೆ ಎಂಬ ಮಾಹಿತಿ ಇದೆ. ನಾವು ಇಂಥ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕೆಂದು ಪತ್ರದಲ್ಲಿ ಹೇಳಿದ್ದರು.
ಜೆಡಿಎಸ್ ಜೊತೆ ನಾವು ಮೈತ್ರಿ ಮಾಡಿಕೊಂಡಿರುವುದರಿಂದ ಹಾಸನದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಬೆಂಬಲಿಸಿದರೆ ಬಿಜೆಪಿಗೆ ಹೊಡೆತ ಬೀಳಲಿದೆ. ಏಕೆಂದರೆ ಕಾಂಗ್ರೆಸ್ ನಾಯಕರ ಕೈಗೆ ಈಗಾಗಲೇ ಪೆನ್‌ಡ್ರೈವ್‌ಗಳು ಕೈ ಸೇರಿದ್ದು, ಮತದಾನ ನಡೆಯುವ ಮುನ್ನ ಅಂದರೆ ಒಂದು ವಾರದೊಳಗೆ ಇವುಗಳನ್ನು ಮನೆಗೆ ಮನೆಗೆ ತಲುಪಿಸಲು ವ್ಯವಸ್ಥಿತವಾದ ತಂತ್ರ ಹೆಣಯಲಾಗಿದೆ.
ಮಹಿಳೆಯರನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಂಡಿರುವ ಅಭ್ಯರ್ಥಿಗೆ ಬಿಜೆಪಿ ಬೆಂಬಲ ನೀಡಿದರೆ ಜಿಲ್ಲೆಯಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಇದರ ಬಗ್ಗೆ ನೀವು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕೆಂದು ದೇವರಾಜ ಗೌಡ ಅವರು ವಿಜಯೇಂದ್ರಿಗೆ ಪತ್ರದಲ್ಲಿ ಮನವಿ ಮಾಡಿದ್ದರು ಎಂಬುದು ಬಹಿರಂಗಗೊಂಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು, ಮೇಲ್ನೋಟಕ್ಕೆ ಇದು ವ್ಯವಸ್ಥಿತ, ಪೂರ್ವನಿಯೋಜಿತ ಕೃತ್ಯದಂತೆ ಕಾಣುತ್ತಿದೆ. ಚುನಾವಣೆ ನಡೆಯುವ ವೇಳೆ ಅದರಲ್ಲೂ ಮತದಾನಕ್ಕೆ ನಾಲ್ಕೈದು ದಿನ ಇರುವಾಗ ಪೆನ್‌ಡ್ರೈವ್‌ಗಳು ಹೊರಬಂದಿರುವ ಉದ್ದೇಶವಾದರೂ ಏನು ಪ್ರಶ್ನಿಸಿದ್ದರು.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದು, ಪಕ್ಷದ ಪ್ರಮುಖ ನಾಯಕರನ್ನು ಹೊರತುಪಡಿಸಿ ಬೇರೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದೆ.