Saturday, July 26, 2025
Homeರಾಜ್ಯಆಂಧ್ರದಲ್ಲಿ ಬಿಜೆಪಿ ಮುಖಂಡ-ಪುತ್ರನ ಕೊಲೆ : ದುಷ್ಕರ್ಮಿಗಳಿಗಾಗಿ ತೀವ್ರಗೊಂಡ ಶೋಧ

ಆಂಧ್ರದಲ್ಲಿ ಬಿಜೆಪಿ ಮುಖಂಡ-ಪುತ್ರನ ಕೊಲೆ : ದುಷ್ಕರ್ಮಿಗಳಿಗಾಗಿ ತೀವ್ರಗೊಂಡ ಶೋಧ

BJP leader-son murder in Andhra Pradesh: Search intensified for culprits

ಬೆಂಗಳೂರು,ಜು.24- ಮಹದೇವಪುರದ ಬಿಜೆಪಿ ಮುಖಂಡ ಮತ್ತು ಅವರ ಮಗನನ್ನು ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯಲ್ಲಿ ದೃಷ್ಕರ್ಮಿಗಳು ಅಪಹರಿಸಿ ಇಬ್ಬರನ್ನೂ ಭೀಕರವಾಗಿ ಕೊಲೆ ಮಾಡಿದ್ದಾರೆ.

ಬೆಂಗಳೂರಿನ ಕಾಡುಗೋಡಿ ನಿವಾಸಿ ವೀರಸ್ವಾಮಿ ರೆಡ್ಡಿ ಹಾಗೂ ಅವರ ಮಗ ಪ್ರಶಾಂತ ರೆಡ್ಡಿ ಕೊಲೆಯಾದ ದುರ್ದೈವಿಗಳು. ಪ್ರಶಾಂತ್‌ ಮತ್ತು ವೀರಸ್ವಾಮಿರೆಡ್ಡಿ ಇಬ್ಬರೂ ಆಂಧ್ರದ ಮಾರ್ಬಲ್‌ ಉದ್ಯಮಿ ಮಾಧವರೆಡ್ಡಿ ಮತ್ತು ಅನಿಲ್‌ ರೆಡ್ಡಿ ಮೇಲೆ ಚೆಕ್‌ಬೌನ್‌್ಸದೂರು ದಾಖಲಿಸಿದ್ದರು.

ಈ ಸಂಬಂಧ ಕಳೆದ ಜು.22ರಂದು ವಿಮಾನದ ಮೂಲಕ ಅಪ್ಪ-ಮಗ ಇಬ್ಬರೂ ಆಂಧ್ರಪ್ರದೇಶಕ್ಕೆ ತೆರಳಿದ್ದರು. ನಂತರ ಪಲ್ನಾಡು ಜಿಲ್ಲಾ ನ್ಯಾಯಾಲಯಕ್ಕೆ ತೆರಳಿ ವಿಚಾರಣೆಯಲ್ಲಿ ಪಾಲ್ಗೊಂಡಿದ್ದರು.
ಬಳಿಕ ಅಂದು ಮಧ್ಯಾಹ್ನ 12 ಗಂಟೆ ಸಮಯದಲ್ಲಿ ನ್ಯಾಯಾಲಯದ ಹೊರಗೆ ನಿಂತಿದ್ದಾಗ ಸ್ಕಾರ್ಪಿಯೋ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಇವರ ಬಳಿ ಬಂದು ಕಾರು ನಿಲ್ಲಿಸಿ ಏಕಾಏಕಿ ಅವರನ್ನು ಗಾಡಿಯಲ್ಲಿ ಬಲವಂತವಾಗಿ ಕೂರಿಸಿಕೊಂಡಿದ್ದಾರೆ.

ನ್ಯಾಯಾಲಯದ ಆವರಣದಿಂದ ಅವರನ್ನು ಕರೆದುಕೊಂಡು ಹೋದ ಕೆಲವೇ ಸಮಯದಲ್ಲಿ ಅಂದರೆ ಸಂಜೆ ವೇಳೆಗೆ ಬಾಪಟ್ಲ ಜಿಲ್ಲೆಯ ಪೋತಮಗಲೂರಿನ ಹೆದ್ದಾರಿ ಪಕ್ಕದಲ್ಲಿ ತಂದೆ-ಮಗನ ಶವಗಳು ಪತ್ತೆಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ದಾವಿಸಿದ ಸ್ಥಳೀಯ ಪೊಲೀಸರು ಇಬ್ಬರ ಶವಗಳನ್ನು ಆಸ್ಪತ್ರೆಗೆ ರವಾನಿಸಿ, ಮೃತರ ಬಗ್ಗೆ ಮಾಹಿತಿ ಕಲೆಹಾಕಿದಾಗ ಇವರು ಬೆಂಗಳೂರು ಮೂಲದವರು ಎಂದು ತಿಳಿದು ಇಲ್ಲಿನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಎಚ್ಚೆತ್ತುಕೊಂಡ ಎರಡೂ ಜಿಲ್ಲೆಗಳ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ರಾಜಿ ಮಾಡುವ ನೆಪದಲ್ಲಿ ಅವರನ್ನು ಕರೆಸಿಕೊಂಡು ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಇವರನ್ನು ಪೂರ್ವ ನಿಯೋಜನೆಯಂತೆ ಆಂಧ್ರಕ್ಕೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಪ್ರಸ್ತುತ ಘಟನೆ ಕುರಿತಂತೆ ಕೆಲವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದ್ದು, ಇಂದು ಬೆಳಗ್ಗೆ ಕಾಡುಗೋಡಿಗೆ ತರಲಾಗಿದೆ.

ಹಲವಾರು ಬಿಜೆಪಿ ಮುಖಂಡರು ಹಾಗೂ ಸ್ಥಳೀಯರು ವೀರಸ್ವಾಮಿ ಅವರ ಮನೆ ಮುಂದೆ ಜಮಾಯಿಸಿದ್ದಾರೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.ಹಣಕಾಸಿನ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಆಂಧ್ರ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿದ್ದ ವೀರಸ್ವಾಮಿ ರೆಡ್ಡಿ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದರು. ಇನ್ನು ಅವರ ಪುತ್ರ ಪ್ರಶಾಂತ್‌ ರೆಡ್ಡಿ ಕೂಡ ಮಹದೇವಪುರ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷರಾಗಿದ್ದರು. ಪ್ರಸ್ತುತ ರಾಜ್ಯ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದರು.

RELATED ARTICLES

Latest News