Monday, July 28, 2025
Homeರಾಜ್ಯಒಳ ಮಿಸಲಾತಿ ಕುರಿತು ಬಿಜೆಪಿ ನಾಯಕರು ಜನರ ದಾರಿ ತಪ್ಪಿಸುತ್ತಿದ್ದಾರೆ : ಸಚಿವ ಎಚ್‌.ಸಿ. ಮಹದೇವಪ್ಪ

ಒಳ ಮಿಸಲಾತಿ ಕುರಿತು ಬಿಜೆಪಿ ನಾಯಕರು ಜನರ ದಾರಿ ತಪ್ಪಿಸುತ್ತಿದ್ದಾರೆ : ಸಚಿವ ಎಚ್‌.ಸಿ. ಮಹದೇವಪ್ಪ

BJP leaders are misleading people on internal reservation: Minister H.C. Mahadevappa

ಬೆಂಗಳೂರು, ಜು.28- ಒಳ ಮಿಸಲಾತಿಯ ವಿಚಾರವಾಗಿ ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವ ಮಾತುಗಳನ್ನಾಡುತ್ತಿದ್ದಾರೆ. ನಾಗಮೋಹನ್‌ ದಾಸ್‌‍ ಅವರ ಆಯೋಗದ ವರದಿ ಸಲ್ಲಿಕೆಯಾದ 20 ದಿನಗಳಲ್ಲೇ ರಾಜ್ಯಸರ್ಕಾರ ಒಳಮೀಸಲಾತಿ ಜಾರಿ ಮಾಡಲಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1992ರಲ್ಲಿ ಕಾಂಗ್ರೆಸ್‌‍ ಸರ್ಕಾರ ಒಳಮೀಸಲಾತಿಗಾಗಿ ನ್ಯಾಯಾಮೂರ್ತಿ ಸದಾಶಿವ ಆಯೋಗವನ್ನು ರಚನೆ ಮಾಡಿತ್ತು. ಅದರ ವರದಿ ಕೂಡ ಸಲ್ಲಿಕೆಯಾಗಿತ್ತು. ಆದರೆ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ ಮುಗಿದ ಅಧ್ಯಾಯ ಎಂದು ಹೇಳಿತ್ತು.

ಈಗ ಹೋರಾಟ ಮಾಡುವುದಾಗಿ ಹೇಳುತ್ತಿರುವ ಗೋವಿಂದ ಕಾರಜೋಳ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಎ. ನಾರಾಯಣ ಸ್ವಾಮಿ ಕೇಂದ್ರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದರು. ಈ ಇಬ್ಬರ ಅಧಿಕಾರಾವಧಿಯಲ್ಲೇ ಒಳಮೀಸಲಾತಿ ಜಾರಿಯಾಗದೆ ಸದಾಶಿವ ಅಯೋಗ ವರದಿ ತಿರಸ್ಕಾರವಾಗಿತ್ತು ಎಂದರು.

ಕಾಂಗ್ರೆಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಒಳಮೀಸಲಾತಿಯನ್ನು ಜಾರಿಗೊಳಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆ ಬಳಿಕ ಸುಪ್ರೀಂ ಕೋರ್ಟ್‌ ಒಳಮೀಸಲಾತಿ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದೆ ಎಂದು ತೀರ್ಪು ನೀಡಿದೆ. ಆದನ್ನು ಆಧರಿಸಿ ಎಂಪ್ಯಾರಿಕಲ್‌ ಡಾಟಾ ಸಂಗ್ರಹಿಸಲು ನ್ಯಾಯಾಮೂರ್ತಿ ನಾಗಮೋಹನ್‌ ದಾಸ್‌‍ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದ್ದೇವೆ. ಆಯೋಗ ವರದಿ ಸಲ್ಲಿಸಿದ 15-20 ದಿನಗಳ ಒಳಗಾಗಿ ಒಳಮೀಸಲಾತಿಯಲ್ಲೂ ಜಾರಿ ಮಾಡುತ್ತೇವೆ ಎಂದರು.

ಒಳಮೀಸಲಾತಿಯ ಬದ್ಧತೆಯನ್ನು ಚಿತ್ರದುರ್ಗದ ಸಮಾವೇಶದಲ್ಲೇ ಕಾಂಗ್ರೆಸ್‌‍ ಘೋಷಣೆ ಮಾಡಿದೆ. ಪಕ್ಷ ತನ್ನ ಮಾತಿಗೆ ಕಟಿಬದ್ಧವಾಗಿದೆ. ನುಡಿದಂತೆ ನಡೆಯುತ್ತಿದೆ. ನಾವು ಒಳಮೀಸಲಾತಿ ಜಾರಿ ಮಾಡುವ ಹಂತದಲ್ಲಿರುವಾಗ ಬಿಜೆಪಿಯವರು ಪ್ರತಿಭಟನೆ ನಡೆಸಲು ಮುಂದಾಗಿರುವುದು ರಾಜಕೀಯ ಕಾರಣಕ್ಕೆ. ಇದು ಜನರನ್ನು ಎತ್ತಿ ಕಟ್ಟುವ ದುರುದ್ದೇಶವಾಗಿದೆ ಎಂದು ಆರೋಪಿಸಿದರು.

ಬಿಜೆಪಿಯವರಿಗೆ ಪ್ರತಿಭಟನೆ ನಡೆಸುವ ನೈತಿಕ ಹಕ್ಕಿಲ್ಲ. ಈ ಹಿಂದೆ ವರದಿಯನ್ನು ತಿರಸ್ಕರಿಸಿದವರು, ಮೀಸಲಾತಿ ವಿರುದ್ಧವಾಗಿರುವವರಿಂದ ನಾವು ನೈತಿಕತೆ ಪಾಠ ಕಲಿಯಬೇಕಿಲ್ಲ ಎಂದು ತಿರುಗೇಟು ನೀಡಿದರು.

ಎಐಸಿಸಿ ಪ್ರಧಾನಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ಆಡಳಿತಾತಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಅವರು ಯಾವುದೇ ಸಾಂವಿಧಾನಿಕ ಸ್ಥಾನಮಾನ ಹೊಂದಿಲ್ಲ. ಹೀಗಾಗಿ ಸಭೆ ನಡೆಸುವ ಅಧಿಕಾರವು ಅವರಿಗಿಲ್ಲ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌, ಸಾಹುಮಹಾರಾಜ್‌ ಅವರಿಗೆ ಯಾರನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಇವರು ಅಭಿವೃದ್ಧಿಯ ವಿಚಾರದಲ್ಲಿ ಬದ್ಧತೆ ಹೊಂದಿದ್ದವರು. ಅವರ ಆಡಳಿತ ಎಲ್ಲರಿಗೂ ಸ್ಪೂರ್ತಿ. ಯತೀಂದ್ರ ಸಿದ್ದರಾಮಯ್ಯ ಅಭಿವೃದ್ದಿ ವಿಚಾರವಾಗಿ ಮಾತನಾಡಿದ್ದಾರೆ. ಯಾರಿಗೆ ಯಾರನ್ನು ಹೋಲಿಕೆ ಮಾಡಿಲ್ಲ ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಅಧಿಕಾರಾವಧಿಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯಾಗಿತ್ತು. ಆನಂತರ ಅಭಿವೃದ್ಧಿಯಾಗಿರಲಿಲ್ಲ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿದೆ. ಬಿಜೆಪಿಯವರು ಅಭಿವೃದ್ಧಿ ಮಾಡಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮಹದೇವಪ್ಪ ಸವಾಲು ಹಾಕಿದ್ದರು.

ಯತೀಂದ್ರ ಹೇಳಿಕೆಯಲ್ಲಿ ತಪ್ಪಿಲ್ಲ. ಸಿದ್ದರಾಮಯ್ಯ ಜನರ ತೆರಿಗೆ ಹಣವನ್ನು ನ್ಯಾಯೋಚ್ಚಿತವಾದ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದಾರೆ. ಯತೀಂದ್ರ ಅದನ್ನೇ ಹೇಳಿದ್ದಾರೆ ಎಂದು ಸಮರ್ಥಿಸಿಕೊಂಡರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಯಾವುದೇ ಹುದ್ದೆಯನ್ನು ನಿಭಾಯಿಸುವ ಸಾಮರ್ಥ್ಯವಿದೆ. ಅವರಿಗೆ ಉನ್ನತ ಸ್ಥಾನಮಾನಗಳು ಸಿಗಬೇಕು. ಕಾಂಗ್ರೆಸ್‌‍ನಲ್ಲಿ ಮಾತ್ರ ದಲಿತರು ಮುಖ್ಯಮಂತ್ರಿಯಾಗಲು ಸಾಧ್ಯ. ಈ ಹಿಂದೆ ಸಂಜೀವಯ್ಯ, ಸುಶೀಲ್‌ಕುಮಾರ್‌ ಶಿಂಧೆ, ಜಗನ್ನಾಥ್‌ ಪಾಡೆ, ಶ್ಯಾಮಸುಂದರ ದಾಸ್‌‍ ಸೇರಿದಂತೆ ಅನೇಕರು ಮುಖ್ಯಮಂತ್ರಿಯಾಗಿದ್ದಾರೆ. ಸಮಯ ಬಂದಾಗ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

RELATED ARTICLES

Latest News