ಬೆಂಗಳೂರು, ಏ.19– ಬಿಜೆಪಿಯ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಇಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಬಿ.ವೈ.ವಿಜಯೇಂದ್ರ ಅವರ ಸಹೋದರರಾಗಿರುವ ರಾಘವೇಂದ್ರ ಅವರು ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ್ದು ಮಹತ್ವ ಪಡೆದು ಕೊಂಡಿತ್ತು.
ನಿನ್ನೆ ಬಿಜೆಪಿಯ ಶಾಸಕ ಬಿ.ಪಿ.ಹರೀಶ್ ಹಾಗೂ ದಾವಣಗೆರೆಯ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಡಿ.ಕೆ.ಶಿವಕುಮಾರ್ ಅವರ ಮನೆಗೆ ಭೇಟಿ ನೀಡಿ ರಹಸ್ಯ ಚರ್ಚೆ ನಡೆಸಿದ್ದರು. ಅದರ ಬೆನ್ನಲ್ಲೇ ರಾಘವೇಂದ್ರ ಭೇಟಿ ಮಹತ್ವ ಪಡೆದುಕೊಂಡಿತ್ತು.
ಈ ಕುರಿತು ಸ್ಪಷ್ಟನೆ ನೀಡಿರುವ ರಾಘವೇಂದ್ರ, ಮಗನ ಮದುವೆ ಇದೆ. ಅದಕ್ಕೆ ಆಮಂತ್ರಣ ನೀಡಲು ಬಂದಿದ್ದೆ. ಜೊತೆಗೆ ಕ್ಷೇತ್ರದ ಅಭಿವೃದ್ಧಿ ವಿಚಾರ ಕುರಿತು ಚರ್ಚೆ ಮಾಡಿದ್ದೇನೆ. ಭೇಟಿಗೆ ಉಪಮುಖ್ಯಮಂತ್ರಿಯವರು ಸಮಯ ನೀಡಿದ್ದರು, ಅದರಂತೆ ಇಂದು ಭೇಟಿ ಮಾಡಿದ್ದೇನೆ. ಮದುವೆಗೆ ಬರುವುದಾಗಿ ಭರವಸೆ ನೀಡಿದ್ದಾರೆ ಎಂದರು.
ವೈಯಕ್ತಿಕ ವಿಚಾರಕ್ಕೆ ಮಾತ್ರ ನಾನು ಭೇಟಿ ಮಾಡಿದ್ದೇನೆ. ಅದನ್ನು ಹೊರತು ಪಡಿಸಿ ಬೇರೆ ಏನು ಇಲ್ಲ. ಅಧಿಕಾರದಲ್ಲಿದ್ದಾಗ, ಸರ್ಕಾರ ಇದ್ದಾಗ ಪಕ್ಷ ಬೇಧ ಮರೆತು ಭೇಟಿ ಮಾಡುವುದು ಸಾಮಾನ್ಯ, ಅದರಂತೆ ಬಿಜೆಪಿಯ ಶಾಸಕ ಬಿ.ಪಿ.ಹರೀಶ್ ಹಾಗೂ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್ ಭೇಟಿ ಮಾಡಿದ್ದಾರೆ. ಅದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದರು.