ಬೆಂಗಳೂರು, ಮೇ2- ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ನಾಯಕರು, ತಕ್ಷಣ ಹತ್ಯೆಗೈದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಹಿಂದೂ ಕಾರ್ಯಕರ್ತನ ಹತ್ಯೆ ಬಗ್ಗೆ ತೀವ್ರ ಆಕ್ರೋಶವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಕ್ತಪಡಿಸಿ, ದುಷ್ಕರ್ಮಿಗಳಿಗೆ ಕಾನೂನಿನ ಭಯವಿಲ್ಲ ಎಂದು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅತ್ಯಂತ ಆಘಾತವನ್ನುಂಟು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ದುಷ್ಕರ್ಮಿಗಳು ಕಾನೂನಿನ ಕಿಂಚಿತ್ತೂ ಭಯವಿಲ್ಲದಂತಾಗಿದ್ದು, ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ. ಕೂಡಲೇ ರಾಜ್ಯ ಸರ್ಕಾರ ಹತ್ಯೆಗೈದ ಅಪರಾಧಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬ ಹಿಂದೂ ಕಾರ್ಯಕರ್ತ ಶೀಘ್ರ ಗುಣಮುಖವಾಗಲಿ ಎಂದು ಪ್ರಾರ್ಥಿಸಿರುವ ಅವರು, ಮೃತ ಸುಹಾಸ್ ಶೆಟ್ಟಿ ಅವರ ಆತ್ಮಕ್ಕೆ ಸದ್ಧತಿ ಸಿಗಲಿ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.
ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಆಪೋಶನ ಮಾಡಿಕೊಂಡಿರುವ ಗೂಂಡಾಗಳು, ಸಮಾಜಘಾತುಕ ಶಕ್ತಿಗಳು ಕೊಲೆ, ಸುಲಿಗೆ, ಅತ್ಯಾಚಾರ ಹಾಗೂ ದೌರ್ಜನ್ಯಗಳಲ್ಲಿ ನಿರತವಾಗಿವೆ. ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಆರೋಪಿಸಿದ್ದಾರೆ.
ಮಂಗಳೂರಿನ ಹಿಂದೂ ಕಾರ್ಯಕರ್ತ ಸುಹಾಸ್ ಅವರ ಭೀಕರ ಕೊಲೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ಮತೀಯವಾದಿ ಹಿಂದೂ ವಿರೋಧಿ ರಕ್ಕಸರು ನಡು ರಸ್ತೆಯಲ್ಲೇ ಅಟ್ಟಹಾಸಗೈದು ಕೊಲೆಗೈಯುತ್ತಿರುವ ದೃಶ್ಯ ನಾವು ಯಾವ ನೆಲದಲ್ಲಿ ವಾಸಿಸುತ್ತಿದ್ದೇವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಈ ಅಮಾನುಷ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.
ಸುಹಾಸ್ ಬರ್ಬರವಾಗಿ ಕೊಲೆಗೀಡಾಗಿರುವ ಘಟನೆಯ ಹಿನ್ನೆಲೆ ಪೂರ್ವನಿಯೋಜಿತ ಎನ್ನುವುದು ಸುಸ್ಪಷ್ಟ ಈ ಹಿನ್ನೆಲೆಯಲ್ಲಿ ಇದು ಗುಪ್ತಚರ ಇಲಾಖೆಯ ವೈಫಲ್ಯವೋ? ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತವರ ಹೊಣೆಗೇಡಿತನ ಕಾರಣವೋ? ಎಂಬ ಬಗ್ಗೆ ಸೂಕ್ತ ತನಿಖೆ ನಡೆಯಬೇಕಿದೆ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.
ಕಾಶ್ಮೀರದಲ್ಲಿ ಹಿಂದೂಗಳ ಮಾರಣ ಹೋಮದ ಸುದ್ದಿ ಇನ್ನೂ ಹಸಿಯಾಗಿರುವಾಗಲೇ, ಹಿಂದೂ ಕಾರ್ಯಕರ್ತನನ್ನು ಕೊಚ್ಚಿಕೊಂಡಿರುವ ಮಂಗಳೂರು ಘಟನೆಯನ್ನು ಗಮನಿಸಿದರೆ ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಕಾಶ್ಮೀರ ಪರಸ್ಥಿತಿ ನಿರ್ಮಾಣ ಮಾಡಲು ಹೊರಟಂತೆ ಕಾಣುತ್ತಿದೆ. ಮೇಲಿಂದ ಮೇಲೆ ಕರ್ನಾಟಕದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಹಲ್ಲೆ, ಕೊಲೆಗಳು ನಿರಂತರವಾಗಿ ನಡೆಯುತ್ತಿದ್ದು ರಾಜ್ಯದ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.
ಹೊರಗಿನ ಶತ್ರುಗಳಿಂತ ಒಳಗಿನ ದ್ರೋಹಿಗಳು ಅಪಾಯಕಾರಿ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದ ವ್ಯಕ್ತಿಯ ಹತ್ಯೆಯಾಗಿದೆ. ಭಾರತ ಮಾತೆಗೆ ತಮ್ಮ ಬದುಕನ್ನು ಮುಡಿಪಟ್ಟವನ ಹತ್ಯೆ ನಿನ್ನೆ ಆಗಿದೆ ಕಾನೂನಿನ ದೃಷ್ಟಿಯಲ್ಲಿ ರಾಷ್ಟ್ರ ಭಕ್ತರು, ದೇಶ ದ್ರೋಹಿಗಳೂ ಸಮಾನರೇ? ಎಂದು ಅವರು ಎಕ್ಸ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.
ಒಂದು ವೇಳೆ ಹೌದೆಂದಾದರೆ ಕಾನೂನನ್ನೇ ಬದಲಾಯಿಸಬೇಕು ಎಂದು ಅವರು ಹೇಳಿದ್ದಾರೆ. ಕರಾವಳಿ ಭಾಗದ ಬಿಜೆಪಿ ಶಾಸಕರಾದ ಡಿ.ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಡಾ.ಭರತ್ ಶೆಟ್ಟಿ, ಮಾಜಿ ಸಂಸದ ನಳೀನ್‌ಕುಮಾರ್ ಕಟೀಲು, ಮಾಜಿ ಸಚಿವ ವಿ.ಸುನೀಲ್ ಕುಮಾರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಹತ್ಯೆಯನ್ನು ಖಂಡಿಸಿ ಹಂತಕರನ್ನು ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.