Friday, July 4, 2025
Homeರಾಜ್ಯಬಿಜೆಪಿ ನಾಯಕರಿಗೆ ಪ್ರಹ್ಲಾದ್‌ ಜೋಷಿ ಶಿಸ್ತಿನ ಪಾಠ

ಬಿಜೆಪಿ ನಾಯಕರಿಗೆ ಪ್ರಹ್ಲಾದ್‌ ಜೋಷಿ ಶಿಸ್ತಿನ ಪಾಠ

BJP leaders get discipline lesson from Prahlad Joshi

ಬೆಂಗಳೂರು,ಜು.4- ಪಕ್ಷದ ಶಿಸ್ತು ಉಲ್ಲಂಘಿಸಿ ಯಾರೊಬ್ಬರೂ ಬಹಿರಂಗ ಹೇಳಿಕೆ ನೀಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರು ಬಿಜೆಪಿ ನಾಯಕರಿಗೆ ಶಿಸ್ತಿನ ಪಾಠ ಮಾಡಿದ್ದಾರೆ. ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಾಗಲಕೋಟೆ ಮತ್ತು ದಾವಣಗೆರೆ ಜಿಲ್ಲಾ ಘಟಕದಲ್ಲಿ ಉಂಟಾಗಿರುವ ಬಿಕ್ಕಟ್ಟು ಪರಿಹಾರ ಕುರಿತಂತೆ ಪ್ರಮುಖರ ಜೊತೆ ಸಭೆ ನಡೆಸಿದರು.

ಮೊದಲು ಬಾಗಲಕೋಟೆ ಜಿಲ್ಲಾ ಬಿಜೆಪಿ ಘಟಕದ ನಾಯಕರ ಜೊತೆ ಜೋಷಿಯವರು ಸಭೆ ನಡೆಸಿದರು. ಮೊದಲು ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಬೆಂಬಲಿಗರ ಜೊತೆ ಮಾಹಿತಿ ಪಡೆದುಕೊಂಡರು. ನಂತರ ವಿಧಾನಪರಿಷತ್‌ ಸದಸ್ಯ ಟಿ.ಎಚ್‌.ಪೂಜಾರ್‌ ಹಾಗೂ ಬೆಂಬಲಿಗರ ಜೊತೆ ಪ್ರತ್ಯೇಕ ಸಭೆ ನಡೆಸಿ ಅಭಿಪ್ರಾಯ ಪಡೆದುಕೊಂಡರು.

ಬಾಗಲಕೋಟೆ ಜಿಲ್ಲಾ ಬಿಜೆಪಿಯಲ್ಲಿ ಚರಂತಿಮಠ ಮತ್ತು ಪೂಜಾರ್‌ ನಡುವೆ ಉಂಟಾಗಿರುವ ಬಿಕ್ಕಟ್ಟನ್ನು ಪರಿಹರಿಸಲು ಈ ಸಭೆ ನಡೆಸಲಾಯಿತು. ನಂತರ ಮಧ್ಯಾಹ್ನ ಜೋಷಿ ಅವರು ದಾವಣಗೆರೆ ಜಿಲ್ಲಾ ಘಟಕದ ಪ್ರಮುಖರ ಜೊತೆ ಸಭೆ ನಡೆಸಿ ಪಕ್ಷದೊಳಗೆ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನ ಮಾಡಿದರು. ಮಾಜಿ ಸಚಿವರಾದ ಎಸ್‌‍.ಎ.ರವೀಂದ್ರನಾಥ್‌, ಎಂ.ಪಿ.ರೇಣಕಾಚಾರ್ಯ, ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸೇರಿದಂತೆ ಹಲವು ಪ್ರಮುಖರು ಭಾಗಿಯಾಗಿದ್ದರು.

ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಪಕ್ಷಕ್ಕೆ ಉಂಟಾದ ಹಿನ್ನಡೆಗೆ ಕಾರಣ ಏನೆಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು.
ದಾವಣಗೆರೆ ಬಿಜೆಪಿಯ ಭದ್ರಕೋಟೆಯಾಗಿತ್ತು. ಸತತ ನಾಲ್ಕು ಬಾರಿ ನಮ ಅಭ್ಯರ್ಥಿ ಗೆದ್ದಿದ್ದರು. ಈ ಬಾರಿ ಕೆಲವೇ ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ನಾಯಕರಲ್ಲಿ ಪರಸ್ಪರ ಉಂಟಾದ ಗೊಂದಲ, ಅಪನಂಬಿಕೆಯೇ ಸೋಲಿಗೆ ಕಾರಣ ಎಂದು ಜೋಷಿ ಹೇಳಿದ್ದಾರೆ.

ಇನ್ನು ಮುಂದೆ ಯಾರೊಬ್ಬರೂ ಪಕ್ಷದ ಅನುಮತಿ ಇಲ್ಲದೆ ಮಾತನಾಡಬಾರದು. ನಿಮ ಹೇಳಿಕೆಗಳು ಪಕ್ಷದಲ್ಲಿ ಬೆಂಬಲ ಸೃಷ್ಟಿಸುತ್ತವೆ. ಯಾರಿಗೆ ಯಾವ ಜವಾಬ್ದಾರಿ ಇರುತ್ತದೆಯೋ ಅದನ್ನು ಅರಿತು ಮಾತನಾಡಿ. ಅನಗತ್ಯವಾಗಿ ಗೊಂದಲ ಸೃಷ್ಟಿಸಬೇಡಿ ಎಂದು ಸಲಹೆ ಮಾಡಿದ್ದಾರೆಂದು ಗೊತ್ತಾಗಿದೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ಈ ರೀತಿ ಪದೇ ಪದೇ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ನೀಡಿದ್ದರಿಂದಲೇ ಪಕ್ಷವು ಅವರನ್ನು ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಿತು. ವರಿಷ್ಠರು ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಯಾರಿಗೆ ಯಾವ ಸಂದರ್ಭದಲ್ಲಿ ಲಗಾಮು ಹಾಕಬೇಕು ಎಂಬುದು ಗೊತ್ತಿದೆ. ಅನಗತ್ಯವಾಗಿ ಮಾತನಾಡಿ ನಿಮ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಸೂಚ್ಯವಾಗಿ ಜೋಷಿ ಹೇಳಿದ್ದಾರೆಂದು ತಿಳಿದುಬಂದಿದೆ.

RELATED ARTICLES

Latest News