Monday, September 8, 2025
Homeರಾಜಕೀಯ | Politicsಬಿಜೆಪಿ ನಾಯಕರಿಂದಲೇ ಮತಯಂತ್ರಗಳಿಗೆ ವಿರೋಧ : ಪ್ರಿಯಾಂಕ್‌ ಖರ್ಗೆ

ಬಿಜೆಪಿ ನಾಯಕರಿಂದಲೇ ಮತಯಂತ್ರಗಳಿಗೆ ವಿರೋಧ : ಪ್ರಿಯಾಂಕ್‌ ಖರ್ಗೆ

BJP leaders oppose EVMs: Priyank Kharge

ಬೆಂಗಳೂರು, ಸೆ.8- ಸ್ಥಳೀಯ ಸಂಸ್ಥೆಗಳಲ್ಲಿ ಮತಯಂತ್ರಗಳ ಬದಲಿಗೆ, ಮತಪತ್ರಗಳನ್ನು ಬಳಕೆ ಮಾಡಲು ನಿರ್ಧರಿಸಿರುವ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ನಾಯಕರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ಡಬಲ್‌ ಸ್ಟ್ಯಾಂಡರ್ಡ್‌ ರಾಜಕೀಯಕ್ಕೆ ಮಿತಿ ಇಲ್ಲ, ಕೊನೆ ಇಲ್ಲ. ಬ್ಯಾಲೆಟ್‌ ಪೇಪರ್‌ ಮಾದರಿಯ ಚುನಾವಣಾ ಕ್ರಮವನ್ನು ವಿರೋಧಿಸುತ್ತಿರುವ ಬಿಜೆಪಿಯೇ ಹಿಂದೆ ಇವಿಎಂ ವಿರೋಧಿಸಿ ಬ್ಯಾಲೆಟ್‌ ಪೇಪರ್‌ ಪರ ವಹಿಸಿತ್ತು ಎಂಬ ವಿಷಯವನ್ನು ಮರೆತಿರುವಂತಿದೆ.

ಬಿಜೆಪಿಗರಿಗೆ ಇರುವುದು ಬರೀ ಮರೆವಲ್ಲ, ಜಾಣ ಮರೆವು. ಬಿಜೆಪಿಯ ಮುಖಂಡರಾದ ಸುಬ್ರಮಣ್ಯಸ್ವಾಮಿ ಮತ್ತು ಕಲ್ಯಾಣರಾಮನ್‌, ಇವಿಎಂ ಯಂತ್ರಗಳು ಸಂವಿಧಾನ ವಿರೋಧಿ ಮಾತ್ರವಲ್ಲ ದುರ್ಬಳಕೆಗೆ ದಾರಿ ಮಾಡಿಕೊಡುತ್ತವೆ ಎಂದು ಪುಸ್ತಕ ಬರೆದಿದ್ದರು. ಬಿಜೆಪಿಯ ರಾಜ್ಯಸಭೆ ಮಾಜಿ ಸದಸ್ಯ ಹಾಗೂ ವಕ್ತಾರ ಜಿ.ವಿ.ಎಲ್‌.ನರಸಿಂಹರಾವ್‌, ಇವಿಎಂಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ-ಡೆಮಾಕ್ರಸಿ ಅಟ್‌ ರಿಸ್ಕ್‌ ಎಂಬ ಪುಸ್ತಕ ಬರೆದಿದ್ದರು.

ಇವಿಎಂಗಳನ್ನು ಕಟುವಾಗಿ ವಿರೋಧಿಸಿದ ಬಿಜೆಪಿಯ ಉನ್ನತ ನಾಯಕ ಎಲ್‌‍.ಕೆ.ಅಡ್ವಾಣಿ ಡೆಮಾಕ್ರಸಿ ಅಟ್‌ ರಿಸ್ಕ್‌ ಪುಸ್ತಕಕ್ಕೆ ಮುನ್ನುಡಿ ಬರೆದಿದ್ದರು. ಈ ಎಲ್ಲಾ ವಿಚಾರಗಳನ್ನು ಬಿಜೆಪಿ ನಾಯಕರಿಗೆ ನೆನಪಿಸಲು ಬಯಸುತ್ತೇನೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.
ಇವಿಎಂ ಕುರಿತು ಬಿಜೆಪಿ ನಾಯಕರಿಗೆ ಹುಟ್ಟಿದ ಈ ಅನುಮಾನಗಳನ್ನು ಬಗೆಹರಿಸುವ ಸಲುವಾಗಿಯೇ ಜಗತ್ತಿನ ನಾಲ್ಕನೇ ತಂತ್ರಜ್ಞಾನದ ಕೇಂದ್ರವೆನಿಸಿಕೊಂಡಿರುವ ಬೆಂಗಳೂರಿನಲ್ಲಿ ಎಥಿಕಲ್‌ಇವಿಎಂ ಹ್ಯಾಕಥಾನ್‌ ನಡೆಸುವಂತೆ ಚುನಾವಣಾ ಆಯೋಗಕ್ಕೆ ಈ ಹಿಂದೆ ನಾನು ಪತ್ರ ಬರೆದಿದ್ದೆ. ಇದುವರೆಗೂ ನನ್ನ ಪತ್ರಕ್ಕೆ ಆಯೋಗ ಉತ್ತರ ನೀಡಿಲ್ಲ. ಎಥಿಕಲ್‌ ಹ್ಯಾಕಥಾನ್‌ ನಡೆಸುವ ಧೈರ್ಯವನ್ನೂ ತೋರಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

ಇದು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಪ್ರಶ್ನೆಯೋ ? ಇವಿಎಂಗಳ ಬಗೆಗಿನ ಆವಿಶ್ವಾಸವೊ ? ಚುನಾವಣಾ ಆಯೋಗದ ವಕ್ತಾರರಾದ ಬಿಜೆಪಿಯವರು ಉತ್ತರ ನೀಡುವರೇ? ಮುಂದುವರೆದ ರಾಷ್ಟ್ರಗಳು ಇವಿಎಂ ಬಿಟ್ಟು ಬ್ಯಾಲೆಟ್‌ ಮಾದರಿಯ ಚುನಾವಣೆಗೆ ಮರಳಿರುವಾಗ ರಾಜ್ಯದ ಬಿಜೆಪಿ ನಾಯಕರಿಗೇಕೆ ಬ್ಯಾಲೆಟ್‌ ಬಗ್ಗೆ ಅಸಹನೆ? ಅಪನಂಬಿಕೆ ಎಂದು ಕಿಡಿಕಾರಿದ್ದಾರೆ.

RELATED ARTICLES

Latest News