Friday, February 28, 2025
Homeರಾಜಕೀಯ | Politicsಬಿಜೆಪಿ ಬಿಕ್ಕಟ್ಟು ಶಮನಕ್ಕೆ ಮುಂದಾದ ವರಿಷ್ಠರು

ಬಿಜೆಪಿ ಬಿಕ್ಕಟ್ಟು ಶಮನಕ್ಕೆ ಮುಂದಾದ ವರಿಷ್ಠರು

ಬೆಂಗಳೂರು,ಫೆ.10- ರಾಜ್ಯ ಬಿಜೆಪಿಯೊಳಗಿನ ಭಿನ್ನಮತ ನಿರ್ಣಾಯಕ ಘಟ್ಟ ತಲುಪಿದ್ದು, ಉಭಯ ಬಣದ ನಾಯಕರನ್ನು ಸಂಧಾನ ನಡೆಸುವ ಮೂಲಕ ಬಿಕ್ಕಟ್ಟಿಗೆ ಶಾಶ್ವತ ಪರಿಹಾರ ನೀಡಲು ಕೇಂದ್ರ ಬಿಜೆಪಿ ವರಿಷ್ಠರು ಮುಂದಾಗಿದ್ದಾರೆ.

ನವದೆಹಲಿಗೆ ತೆರಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಭಿನ್ನಮತೀಯ ನಾಯಕತ್ವ ವಹಿಸಿರುವ ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರನ್ನು ಮುಖಾಮುಖಿ ಕೂರಿಸಿ ಸಂಧಾನಕ್ಕೆ ವರಿಷ್ಠರು ಒಲವು ತೋರಿದ್ದಾರೆ ಎನ್ನಲಾಗಿದೆ. ಆದರೆ ಉಭಯ ಬಣದವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಷಾ ಅವರನ್ನು ಯಾವ ಸಂದರ್ಭದಲ್ಲಿ ಭೇಟಿಯಾಗಲಿದ್ದಾರೆ ಎಂಬುದು ನಿಗೂಢವಾಗಿಯೇ ಉಳಿದಿದೆ.

ಕೇಂದ್ರ ಸಚಿವ ವಿ.ಸೋಮಣ್ಣ ಅವರ ನಿವಾಸದ ಪೂಜೆಗೆ ಯತ್ನಾಳ್ ಹಾಗೂ ಅವರ ತಂಡ ಭಾಗಿಯಾದರೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹೊರಗುಳಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಭಾನುವಾರ ದೆಹಲಿಗೆ ತೆರಳುವ ವೇಳೆ ಸೋಮಣ್ಣ ಅವರ ನಿವಾಸದ ಪೂಜೆ ಕಾರ್ಯಕ್ರಮಕ್ಕೆ ಹೋಗುವುದಾಗಿ ವಿಜಯೇಂದ್ರ ಹೇಳಿದ್ದರು. ಆದರೆ ಅವರನ್ನು ಆಹ್ವಾನಿಸಿಲ್ಲ ಎಂದೇ ಹೇಳಲಾಗುತ್ತಿದೆ.

ಸೋಮಣ್ಣ ಮನೆಯಲ್ಲಿ ಬಹುತೇಕ ಎಲ್ಲಾ ಭಿನ್ನಮತೀಯರು ಭಾಗವಹಿಸಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ತವಕದಲ್ಲಿದ್ದಾರೆ. ಲೋಕಸಭೆ ಕಲಾಪದಲ್ಲಿ ಭಾಗಿಯಾಗಿರುವುದರಿಂದ ಸಂಜೆ ವೇಳೆಗೆ ಭೇಟಿಯಾಗುವ ಸಂಭವವಿದೆ.

ಈಗಾಗಲೇ ಯತ್ನಾಳ್ ಬಣದ ನಾಯಕರು ಹಾಗೂ ವಿಜಯೇಂದ್ರ ಅವರು ಇಬ್ಬರೂ ಸಹ ಸದ್ಯ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ಹಾಗಾಗಿ ಹೈಕಮಾಂಡ್ ಈ ಎರಡೂ ಬಣದ ನಾಯಕರನ್ನು ಕೂರಿಸಿ ಬಣ ರಾಜಕೀಯಕ್ಕೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಸದ್ಯ ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆಯೂ ಹೈಕಮಾಂಡ್ ನಾಯಕರು ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಕರ್ನಾಟಕ ಬಿಜೆಪಿಯಲ್ಲಿ ಹೊಗೆಯಾಡುತ್ತಿದ್ದ ಬಣ ಬಡಿದಾಟ, ಆಂತರಿಕ ಕಚ್ಚಾಟ, ರಾಜ್ಯಾಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಹೈಕಮಾಂಡ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಏಕೆಂದರೆ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದ ಕಾರಣ ಅವರ ಚಿತ್ತವೆಲ್ಲ ದೆಹಲಿ ಕಡೆಗೆ ಮಾತ್ರವೇ ಇತ್ತು. ಈಗ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ ಹೈಮಾಂಡ್ ನಾಯಕರು ಕರ್ನಾಟಕದ ಕಡೆಗೆ ಗಮನಹರಿಸಿದ್ದಾರೆ ಎನ್ನಲಾಗಿದೆ.

ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅವರ ಬಣದ ನಾಯಕರು ಕಳೆದ ವಾರವೂ ದೆಹಲಿಗೆ ತೆರಳಿ ವಿಜಯೇಂದ್ರ ಅವರ ವಿರುದ್ಧ ತೊಡೆ ತಟ್ಟಿದ್ದರು. ಅಲ್ಲದೆ ಕೆಲ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ವಿಚಾರ ತಿಳಿಸಿದ್ದರು. ಅಲ್ಲಿಂದ ನಮಗೆ ಉತ್ತಮ ಸ್ಪಂದನೆ ಸಿಕ್ಕಿದೆ, ಕಾದು ನೋಡಿ ಎಂದು ಗುಟ್ಟು ಕಾಯ್ದುಕೊಂಡಿದ್ದರು. ಇದೀಗ ಮತ್ತೆ ಯತ್ನಾಳ್ ಬಣ ದೆಹಲಿಗೆ ತೆರಳಿದೆ.ವಿಜಯೇಂದ್ರ ಹಾಗೂ ಯತ್ನಾಳ್ ಅವರು ಇಬ್ಬರೂ ರಾಜ್ಯಾಧ್ಯಕ್ಷ ಹುದ್ದೆಗೆ ಕಣಕ್ಕಿಳಿದಿದ್ದಾರೆ. ಈ ವಿಚಾರದ ಬಗ್ಗೆ ವರಿಷ್ಠರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕಾದರೆ ಈ ರೀತಿಯ ಕಚ್ಚಾಟಗಳು, ವೈಮನಸ್ಸುಗಳು ಇರಬಾರದು. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಬುದ್ಧಿ ಹೇಳಬಹುದು. ಅಲ್ಲದೆ ವಿಜಯೇಂದ್ರ ಬಗ್ಗೆ ಹಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ರಾಜ್ಯಾಧ್ಯಕ್ಷ ಸ್ಥಾನದಿಂದ ಅವರನ್ನು ಕೆಳಗಿಳಿಸಿ, ಹೊಸ ರಾಜ್ಯಾಧ್ಯಕ್ಷರನ್ನು ಘೋಷಿಸುವ ಸಾಧ್ಯತೆಯೂ ಇದೆ.

RELATED ARTICLES

Latest News