ಬೆಂಗಳೂರು,ಡಿ.25– ಅತ್ಯಾಚಾರ ಆರೋಪದಲ್ಲಿ ಜೈಲುಪಾಲಾಗಿ ಇತ್ತೀಚೆಗೆಷ್ಟೇ ಬಿಡುಗಡೆಯಾಗಿದ್ದ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಮೇಲೆ ಕೆಲವು ಕಿಡಿಗೇಡಿಗಳು ಮೊಟ್ಟೆ ಎಸೆದಿರುವ ಘಟನೆ ನಡೆದಿದೆ.
ಪ್ರಕರಣವು ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ನನ್ನ ಮೇಲೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂದು ಮುನಿರತ್ನ ಆರೋಪಿಸಿದ್ದಾರೆ. ಆರ್ಆರ್ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಲಕ್ಷ್ಮಿದೇವಿ ನಗರ ವಾರ್ಡ್ನ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ ಶತಮಾನೋತ್ಸವ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುನಿರತ್ನ ತೆರಳುತ್ತಿದ್ದ ವೇಳೆ ನಂದಿನಿ ಲೇಔಟ್ ಬಳಿ ಕೆಲವು ಕಿಡಿಗೇಡಿಗಳು ಅವರ ಮೇಲೆ ಮೊಟ್ಟೆ ಎಸೆದಿದ್ದಾರೆ. ಸದ್ಯ ಅವರಿಗೆ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಈ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮುನಿರತ್ನ ಬೆಂಬಲಿಗರು ಕಂಠೀರವ ಸ್ಟುಡಿಯೋ ಬಳಿ ಜಮಾಯಿಸಿ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಯಿತು. ಮುನಿರತ್ನ ಮೇಲೆ ಮೊಟ್ಟೆ ಎಸೆದ ಪ್ರತೀಕಾರಕ್ಕೆ ಅವರ ಬೆಂಬಲಿಗರು ಕಾಂಗ್ರೆಸ್ ಕಾರ್ಯಕರ್ತರಿಗೆ ಸೇರಿದ ಕಾರನ್ನು ಜಖಂಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.
ಪರಸ್ಪರ ಕಲ್ಲು ತೂರಾಟ, ನೂಕಾಟ ನಡೆಸಿದ ಪರಿಣಾಮ ಎರಡರಿಂದ ಮೂರು ಕಾರುಗಳು ಜಖಂ ಆಗಿದ್ದು ಕೆಲವರಿಗೆ ಸಣ್ಣಪುಟ್ಟ ಗಾಯಗಳು ಆಗಿವೆ.
ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನಂದಿನಿ ಲೇಔಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಉಭಯ ಪಕ್ಷಗಳ ಕಾರ್ಯಕರ್ತರ ಗದ್ದಲದಿಂದಾಗಿ ಕಂಠೀರವ ಸ್ಟುಡಿಯೋ ಮುಂಭಾಗ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಎರಡೂ ಪಕ್ಷಗಳಿಗೆ ಸೇರಿದ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆ್ಯಸಿಡ್ ದಾಳಿಗೆ ಯತ್ನ: ಘಟನೆಗೆ ಕುರಿತಂತೆ ಪ್ರತಿಕ್ರಿಯಿಸಿರುವ ಮುನಿರತ್ನ, ಸ್ಥಳೀಯ ಕಾಂಗ್ರೆಸ್ ನಾಯಕಿ ಕುಸುಮ ಅವರನ್ನು ಶಾಸಕಿಯನ್ನಾಗಿ ಮಾಡಲು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್ ಅವರ ಬೆಂಬಲಿಗರಿಂದ ನನ್ನ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಮೊಟ್ಟೆಯೊಳಗೆ ಆ್ಯಸಿಡ್ ಹಾಕಿ ಎಸೆದಿದ್ದಾರೆ. ಇದಕ್ಕೆ ಈ ಇಬ್ಬರ ಸಹೋದರರು ಮತ್ತವರ ಬೆಂಬಲಿಗರೇ ನೇರ ಕಾರಣ.
ಹೇಗಾದರೂ ಮಾಡಿ ಡಿ.ಕೆ.ಸುರೇಶ್ ಅವರಿಗೆ ಕುಸುಮ ಅವರನ್ನು ಶಾಸಕಿಯನ್ನಾಗಿ ಮಾಡುವ ಆಸೆ ಇದೆ. ಹೀಗಾಗಿ ದಾಳಿ ನಡೆದಿದೆ. ಇದಕ್ಕೆ ಕುಸುಮ ಮತ್ತು ಅವರ ತಂದೆ ಹನುಮಂತರಾಯಪ್ಪ ಅವರ ಬೆಂಬಲವೂ ಇದೆ ಎಂದು ಆರೋಪ ಮಾಡಿದ್ದಾರೆ.
ಖಂಡನೆ: ಘಟನೆ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. ನಮ ಶಾಸಕರ ಮೇಲೆ ಹಲ್ಲೆ ನಡೆಸಲಾಗಿದೆ. ನಾನು ಅವರ ಜೊತೆ ಮಾತನಾಡುತ್ತೇನೆ. ಅಧಿಕಾರ ಇದೆ ಎಂದು ಯಾವುದೇ ಜನಪ್ರತಿನಿಧಿಯನ್ನು ಅವಮಾನಿಸಬಾರದು. ಇದು ಕೇವಲ ಮುನಿರತ್ನ ಅವರಿಗೆ ಮಾಡಿದ ಅವಮಾನವಲ್ಲ. ಇಡೀ ಕ್ಷೇತ್ರಕ್ಕೆ ಮಾಡಿದ ಅಪಮಾನ ಎಂದು ಖಂಡಿಸಿದ್ದಾರೆ.
ಈ ನಡುವೆ ಘಟನೆಯನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮುನಿರತ್ನ ಅವರ ಮೇಲೆ ಆರೋಪ ಇರಬಹುದು. ಆದರೆ ತನಿಖೆ ನಡೆಯುತ್ತದೆ. ಪ್ರಕರಣ ನ್ಯಾಯಾಲಯದಲ್ಲೂ ಇದೆ. ಅವರು ಶಾಸಕರು, ಅವರ ಕ್ಷೇತ್ರಕ್ಕೆ ಹೋಗಬಾರದು ಎಂದು ಕೋರ್ಟ್ ಹೇಳಿದೆಯೇ? ಹಲ್ಲೆ ಮಾಡುವುದು, ಮೊಟ್ಟೆ ಎಸೆಯುವುದು ಸರಿಯಲ್ಲ. ಕಾಂಗ್ರೆಸ್ ಕಾನೂನು ಕೈಗೆತ್ತಿಕೊಳ್ಳೋದು ಸರಿಯಲ್ಲ ಎಂದು ಹೇಳಿದ್ದಾರೆ.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಶಾಸಕ ಮುನಿರತ್ನ ಮೇಲೆ ಹಲ್ಲೆಯಾಗಿದೆ. ಗೂಂಡಾಗಳ ಮೂಲಕ ಕೆಲವರು ಹಲ್ಲೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.