Wednesday, March 5, 2025
Homeರಾಜ್ಯನಮ್ಮನ್ನು TV ಯಲ್ಲಿ ತೋರಿಸುತ್ತಿಲ್ಲ : ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ

ನಮ್ಮನ್ನು TV ಯಲ್ಲಿ ತೋರಿಸುತ್ತಿಲ್ಲ : ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ

ಬೆಂಗಳೂರು,ಮಾ.4- ವಿಧಾನಸಭೆ ಕಾರ್ಯಕಲಾಪಗಳ ನೇರಪ್ರಸಾರದಲ್ಲಿ ಪ್ರತಿಪಕ್ಷಗಳ ಶಾಸಕರು ಮಾತನಾಡುವ ವಿಚಾರ ಪ್ರಸ್ತಾಪವಾಗುತ್ತಿಲ್ಲ ಎಂದು ಬಿಜೆಪಿ ಶಾಸಕರು ಮಾಡಿದ ಆಕ್ಷೇಪ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಎಡೆಮಾಡಿಕೊಟ್ಟು ಸದನವನ್ನು 10 ನಿಮಿಷ ಮುಂದೂಡಿದ ಪ್ರಸಂಗ ವಿಧಾನಸಭೆಯಲ್ಲಿ ಜರುಗಿತು. ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ರವರು ಕೆಪಿಎಸ್‌‍ಸಿ ನೇಮಕಾತಿ ವಿಚಾರ ಕುರಿತು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಿದ್ದ ಸಂದರ್ಭದಲ್ಲಿ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಲು ಎದ್ದುನಿಂತರು.

ಆ ಸಂದರ್ಭದಲ್ಲಿ ವಿರೋಧಪಕ್ಷದ ಉಪನಾಯಕ ಅರವಿಂದ್‌ ಬೆಲ್ಲದ್‌ ಮಾತನಾಡಿ, ಸದನದಲ್ಲಿನ ಕಾರ್ಯಕಲಾಪಗಳು ನೇರ ಪ್ರಸಾರವಾಗುತ್ತಿವೆ. ಆದರೆ ನಮ ನಾಯಕರು ಮಾತನಾಡುವ
ವಿಚಾರ ಸದನದ ಸಭಾಂಗಣದಲ್ಲಿ ಅಳವಡಿಸಿರುವ ಟಿವಿಗಳಲ್ಲಿ ಬರುತ್ತಿಲ್ಲ. ನೀವು ಪ್ರಸಾರ ಮಾಡದಂತೆ ಸೂಚನೆ ಕೊಟ್ಟಿದ್ದೀರ. ಈ ವಿಚಾರವನ್ನು ನಾವು ಸದನದ ಕಾರ್ಯಕಲಾಪಗಳ ಸಲಹಾ ಸಮಿತಿ ಸಭೆಯಲ್ಲೂ ಪ್ರಸ್ತಾಪ ಮಾಡಿದ್ದೆವು ಎಂದು ಹೇಳಿದರು.

ಅಲ್ಲದೆ ಈ ಹಿಂದೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸದನದ ಕಾರ್ಯಕಲಾಪಗಳ ನೇರ ಪ್ರಸಾರ ಮಾಡುತ್ತಿತ್ತು. ಈಗ ಅದನ್ನು ಕಾಂಗ್ರೆಸ್‌‍ ಕಾರ್ಯಕರ್ತರಿಗೆ ಏಕೆ ಕೊಟ್ಟಿದ್ದೀರಿ?, ಅಲ್ಲದೆ ಕೆಲ ಸಚಿವರು ಅನಾವಶ್ಯಕವಾಗಿ ಎದ್ದು ನಿಲ್ಲುತ್ತಾರೆ. ಅದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು. ಸುನಿಲ್‌ಕುಮಾರ್‌ ಮಾತನಾಡಿ, ಯಾವ ನಟ್ಟು, ಬೋಲ್ಟು ಲೂಸ್‌‍ ಆಗಿದೆ ಹೇಳಿ. ಅದನ್ನು ಸರಿಪಡಿಸಬೇಕಲ್ಲವೇ? ಎಂದು ಪ್ರಶ್ನಿಸಿದರು.

ಈ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್‌‍ ಶಾಸಕರ ನಡುವಿನ ಮಾತಿನ ಚಕಮಕಿ, ಆರೋಪ ಮತ್ತು ಪ್ರತ್ಯಾರೋಪಕ್ಕೆ ಎಡೆಮಾಡಿಕೊಟ್ಟಿತು. ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ಯು.ಟಿ.ಖಾದರ್‌, ತಾಂತ್ರಿಕ ಸಮಸ್ಯೆಯಾಗಿರಬೇಕು. ಅದನ್ನು ಸರಿಪಡಿಸಲು ಸೂಚಿಸಲಾಗಿದೆ ಎಂದರು. ಅಷ್ಟಕ್ಕೇ ಸುಮನಾಗದ ಬಿಜೆಪಿ ಶಾಸಕರು ಎದ್ದುನಿಂತು ಮಾತನಾಡುತ್ತಿದ್ದರು. ಪ್ರತಿಯಾಗಿ ಕಾಂಗ್ರೆಸ್‌‍ ಶಾಸಕರು ಮಾತನಾಡುತ್ತಿದ್ದಾಗ ಸದನದಲ್ಲಿ ಗದ್ದಲದ ವಾತಾವರಣ ಉಂಟಾಯಿತು.

ಬಿಜೆಪಿ ಶಾಸಕ ಸುನಿಲ್‌ಕುಮಾರ್‌ ಮಾತನಾಡಿ, ಉಂಟಾಗಿರುವ ತಾಂತ್ರಿಕ ಸಮಸ್ಯೆ ಸರಿಪಡಿಸುವವರೆಗೂ ಮುಂದೂಡಿ, ಅದಾದ ನಂತರ ಚರ್ಚೆ ಮಾಡೋಣ ಎಂದು ಸಲಹೆ ಮಾಡಿದರು.
ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಂಸತ್ತಿನಲ್ಲಿ ಏನು ನಡೆಯುತ್ತಿದೆ. ಹೇಳಿ. ನೀವು ಮಾತನಾಡುತ್ತಿರುವುದು ದಾಖಲೆಗೆ ಹೋಗುತ್ತಿದೆ. ಮಾಧ್ಯಮದವರೂ ಇದ್ದಾರೆ. ಇನ್ನೇನು ಬೇಕು. ಸದನದಲ್ಲಿ ಜವಾಬ್ದಾರಿಯಿಂದ ಮಾತನಾಡಿ ಎಂದು ಆಕ್ಷೇಪಿಸಿದರು. ಬಿಜೆಪಿ ಶಾಸಕ ಭೈರತಿ ಬಸವರಾಜು ಮಾತನಾಡಿ, ಆಡಳಿತ ಪಕ್ಷದವರು ಮಾತನಾಡುವಾಗ ಟಿವಿ ಪರದೆ ಮೇಲೆ ಕಾಣುತ್ತದೆ. ಸಭಾಧ್ಯಕ್ಷರು ಮಾತನಾಡುವಾಗಲೂ ಕಾಣುತ್ತದೆ. ಆದರೆ ನಾವು ಮಾತನಾಡುವಾಗ ಮಾತ್ರ ಕಾಣುವುದಿಲ್ಲ ಎಂದರು.

ಬಿಜೆಪಿ ಶಾಸಕ ಹರೀಶ್‌ ಪೂಂಜಾ ಮಾತನಾಡಿ, ನಿಷ್ಪಕ್ಷಪಾತವಾಗಿ ಸದನದ ಕಾರ್ಯಕಲಾಪಗಳ ನೇರ ಪ್ರಸಾರವಾಗಬೇಕು. ಏಕಪಕ್ಷೀಯವಾಗಿ ಮಾಡಬೇಡಿ ಎಂದರು. ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್‌ ಯತ್ನಾಳ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಕೂಡ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದರು. ಪ್ರತಿಯಾಗಿ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಸೇರಿದಂತೆ ಆಡಳಿತ ಪಕ್ಷದ ಹಲವು ಸದಸ್ಯರು ಮಾತನಾಡಲು ಮುಂದಾದರು.

ಒಂದು ಹಂತದಲ್ಲಿ ವಿರೋಧಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರು ಇದ್ದೇವೆ. 15 ನಿಮಿಷದಿಂದ ಗಲಾಟೆ ನಡೆಯುತ್ತಿದೆ ಎನ್ನುತ್ತಿದ್ದಂತೆ ಕಾಂಗ್ರೆಸ್‌‍ ಶಾಸಕ ಕೆ.ಎಂ.ಶಿವಲಿವಲಿಂಗೇಗೌಡ ಮಾತನಾಡಿ, ಸದನದ ಸಮಯವನ್ನು ಏಕೆ ವ್ಯಯ ಮಾಡುತ್ತೀರಿ?, ಕಲಾಪ ನಡೆಯಲು ಬಿಡಿ ಎಂದರು. ಆಗ ಬಿಜೆಪಿಯ ಹಲವು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು ನಿಲುವಳಿ ಸೂಚನೆಯ ವಿಚಾರ ಗಂಭೀರವಾಗಿ ಚರ್ಚೆಯಾಗುತ್ತಿವೆ. ಸದನದ ಕಾರ್ಯಕಲಾಪಗಳ ನೇರಪ್ರಸಾರವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮಾಡುತ್ತಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸಲು ಹೇಳಿ 10 ನಿಮಿಷ ಕಳೆಯಿತು. ಆದರೂ ಆಗಿಲ್ಲ. ಹೀಗಾಗಿ ಸದನವನ್ನು 10 ನಿಮಿಷ ಮುಂದೂಡೋಣ, ತಾಂತ್ರಿಕ ಸಮಸ್ಯೆ ಏನಾಗಿದೆ ಎಂಬುದನ್ನು ತಂತ್ರಜ್ಞರೊಂದಿಗೆ ಚರ್ಚಿಸಿ ಸರಿಪಡಿಸೋಣ, ನೀವೂ ಬನ್ನಿ ಎಂದು ಆಕ್ಷೇಪಿಸಿ ಕಲಾಪವನ್ನು 10 ನಿಮಿಷ ಮುಂದೂಡಿದರು.

RELATED ARTICLES

Latest News