ಬೆಂಗಳೂರು,ಆ.26- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬ ನಡೆಸುತ್ತಿರುವ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಕೆಐಎಡಿಬಿ ಜಮೀನು ಮಾಡಿರುವುದಕ್ಕೆ ಬಿಜೆಪಿ ರಾಜ್ಯಸಭಾ ಸದಸ್ಯ ಲಹರ್ಸಿಂಗ್ ಸಿರೋಯ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲಿ ಹಂಚಿಕೆ ಮಾಡಿದ್ದ 45.94 ಎಕರೆ ಪೈಕಿ ಐದು ಎಕರೆ ಜಮೀನನ್ನು ಪರಿಶಿಷ್ಟ ಜಾತಿ ಕೋಟಾದಲ್ಲಿ ಈ ಟ್ರಸ್ಟ್ಗೆ ಮಂಜೂರು ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ತಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಲಹರ್ಸಿಂಗ್ ಸಿರೋಯ ಅವರು, ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲಿ ಖರ್ಗೆ ಕುಟುಂಬದ ಟ್ರಸ್ಟ್ಗೆ ಐದು ಎಕರೆ ಜಮೀನು ಮಂಜೂರು ಮಾಡಿರುವುದು ದಾಖಲೆ ಆಧಾರದಲ್ಲಿ ಸುದ್ದಿ ವಾಹಿನಿಯೊಂದರ ವರದಿಯಿಂದ ಬೆಳಕಿಗೆ ಬಂದಿದೆ.
ಬೆಂಗಳೂರು ಸಮೀಪದ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲಿ ನಾಗರಿಕ ಸೌಲಭ್ಯಗಳಿಗೆ ಕಾದಿಟ್ಟ ಈ ಜಮೀನನ್ನು ಪರಿಶಿಷ್ಟ ಜಾತಿ ಕೋಟಾದಲ್ಲಿ ಮಂಜೂರು ಮಾಡಲಾಗಿದೆ. ಕುತೂಹಲಕಾರಿ ಅಂಶವೆಂದರೆ, ಟ್ರಸ್ಟ್ನಲ್ಲಿ ಸ್ವತಃ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ರಾಧಾಬಾಯಿ ಖರ್ಗೆ, ಅಳಿಯ ರಾಧಾಕೃಷ್ಣ, ಅವರ ಮಗ ಹಾಗೂ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ, ಮತ್ತೊಬ್ಬ ಪುತ್ರ ರಾಹುಲ್ ಖರ್ಗೆ ಟ್ರಸ್ಟಿಗಳಾಗಿದ್ದಾರೆ. ಇದು ಸ್ವಹಿತಾಸಕಿ ಸಂಘರ್ಷ, ಸ್ವಜನಪಕ್ಷಪಾತ, ಅಧಿಕಾರದ ದುರ್ಬಬಳಕೆ ಅಲ್ಲವೆ? ಎಂಬ ಪ್ರಶ್ನೆಗಳನ್ನು ಹುಟ್ಟಿಹಾಕಿದೆ.
ಸಚಿವ ಎಂ.ಬಿ.ಪಾಟೀಲ ಈ ಭೂಮಿ ಮಂಜೂರು ಮಾಡಲು ಒಪ್ಪಿಗೆ ನೀಡಿದ್ದಾದರೂ ಹೇಗೆ? ಖರ್ಗೆ ಕುಟುಂಬ ಯಾವಾಗ ಏರೋಸ್ಪೇಸ್ ಉದ್ಯಮಿಗಳಾದರು? ಈ ಅಕ್ರಮ ಹಂಚಿಕೆ ವಿಷಯ ಆರ್ಟಿಐ ಕಾರ್ಯಕರ್ತನ ಮೂಲಕ ರಾಜ್ಯಪಾಲರ ಕಚೇರಿಗೂ ತಲುಪಿದೆ ಎಂದು ಹೇಳಿದ್ದಾರೆ.
ಮೈಸೂರಿನ ವಿವಾದಿತ ಮುಡಾ ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯನವರು ಬಿಟ್ಟುಕೊಡುವಂತಹ ಪರಿಸ್ಥಿತಿ ತಲೆದೋರಿದೆ. ಅದೇ ರೀತಿ ಮಲ್ಲಿಕಾರ್ಜುನ ಖರ್ಗೆ ಮತ್ತವರ ಕುಟುಂಬ ಅಂತಿಮವಾಗಿ ಈ ಜಮೀನು ಬಿಟ್ಟು ಕೊಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ.