Saturday, November 23, 2024
Homeರಾಜ್ಯಜೆಡಿಎಸ್ ಜೊತೆ ಮೈತ್ರಿಯಲ್ಲಿ ಅಪಸ್ವರದ ವರದಿಗಳ ಬೆನ್ನಲ್ಲೇ ಬಿಜೆಪಿ ಅಲರ್ಟ್

ಜೆಡಿಎಸ್ ಜೊತೆ ಮೈತ್ರಿಯಲ್ಲಿ ಅಪಸ್ವರದ ವರದಿಗಳ ಬೆನ್ನಲ್ಲೇ ಬಿಜೆಪಿ ಅಲರ್ಟ್

ಬೆಂಗಳೂರು,ಮಾ.20- ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಡುವೆ ಅಪಸ್ವರ ಎದ್ದಿದೆ ಎಂಬ ವರದಿಗಳ ಬೆನ್ನಲ್ಲೇ ಆ ವಿಚಾರವಾಗಿ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ. ಜೆಡಿಎಸ್ ಮುನಿಸು ಶಮನಗೊಳಿಸಲು ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಮೈತ್ರಿ ವಿಚಾರವಾಗಿ ಯಾವುದೇ ಗೊಂದಲ ಬೇಡ. ಎಲ್ಲವನ್ನೂ ಕುಳಿತು ಮಾತನಾಡಿ ಬಗೆಹರಿಸೋಣ. ಅನಗತ್ಯ ಗೊಂದಲಕ್ಕೆ ಅವಕಾಶ ಮಾಡಿಕೊಡುವುದು ಬೇಡ. ನಿಮ್ಮ ಹೃದಯದ ಚಿಕಿತ್ಸೆ ಸುಸೂತ್ರವಾಗಿ ನೆರವೇರಲಿ. ನಿಮ್ಮ ಆರೋಗ್ಯ ಸುಧಾರಿಸಿದ ನಂತರ ಮಾತುಕತೆ ನಡೆಸೋಣ. ಸದ್ಯದ ಮಟ್ಟಿಗೆ ನಿಮ್ಮ ಆರೋಗ್ಯವೇ ಮೊದಲ ಆದ್ಯತೆ ಆಗಿರಲಿ ಎಂದಿದ್ದಾರೆ.

ನೀವು ಗುಣಮುಖರಾದ ಬಳಿಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಪ್ರಧಾನಿ ನರೇಂದ್ರಮೋದಿ ಅವರನ್ನು ಒಂದೇ ವೇದಿಕೆಯಲ್ಲಿ ಬರುವಂತೆ ಮಾಡಿ ಕಾರ್ಯಕ್ರಮ ಮಾಡೋಣ ಎಂದು ಬಿಜೆಪಿ ಹೈಕಮಾಂಡ್ ಭರವಸೆ ನೀಡಿದೆ ಎಂದು ಮೂಲಗಳು ತಿಳಿಸುವೆ. ಸೋಮವಾರ ಪಕ್ಷದ ಸಭೆ ನಡೆಸಿದ್ದ ಕುಮಾರಸ್ವಾಮಿ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಬಿಜೆಪಿ ನಾಯಕರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.

ಕಲಬುರಗಿ ಹಾಗೂ ಶಿವಮೊಗ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಅಭಿಯಾನ ನಡೆದರೂ ಆ ಜಿಲ್ಲೆಗಳ ಜೆಡಿಎಸ್ ನಾಯಕರ ಬಳಿ ಸೌಜನ್ಯಕ್ಕೂ ಮಾತುಕತೆ ನಡೆಸಿಲ್ಲ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೂ ಆಹ್ವಾನ ನೀಡಿಲ್ಲ. ಅಲ್ಲದೆ ಕೇವಲ ಎರಡು ಸೀಟಿಗಾಗಿ ಬಿಜೆಪಿ ಜೊತೆ ಇಷ್ಟೆಲ್ಲ ಹೊಂದಾಣಿಕೆ ಮಾಡುವ ಅಗತ್ಯವಿದೆಯೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಅಲರ್ಟ್ ಆಗಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆಯೂ ಮಂಗಳವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ್ದ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಾರದರ್ಶಕ ಚುನಾವಣೆ ನಡೆಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಅರೆಸೇನಾ ಪಡೆಗಳನ್ನು ಚುನಾವಣಾ ಭದ್ರತೆಗಾಗಿ ಕಳುಹಿಸಬೇಕು ಎಂದು ಆಗ್ರಹಿಸಿದ್ದರು. ಬಳಿಕ ಹೃದಯದ ಚಿಕಿತ್ಸೆಗಾಗಿ ಚೆನ್ನೈಗೆ ತೆರಳಿದ್ದರು.

RELATED ARTICLES

Latest News