Friday, August 8, 2025
Homeರಾಜ್ಯ"ಕೆಆರ್‌ಎಸ್‌‍ ಅಣೆಕಟ್ಟು ನಿರ್ಮಾಣಕ್ಕೆ ಟಿಪ್ಪುಸುಲ್ತಾನ್‌ ಅಡಿಗಲ್ಲು ಹಾಕಿದ್ದು" ಎಂದ ಸಚಿವ ಮಹದೇವಪ್ಪ ವಿರುದ್ಧ ಬಿಜೆಪಿ ಆಕ್ರೋಶ

“ಕೆಆರ್‌ಎಸ್‌‍ ಅಣೆಕಟ್ಟು ನಿರ್ಮಾಣಕ್ಕೆ ಟಿಪ್ಪುಸುಲ್ತಾನ್‌ ಅಡಿಗಲ್ಲು ಹಾಕಿದ್ದು” ಎಂದ ಸಚಿವ ಮಹದೇವಪ್ಪ ವಿರುದ್ಧ ಬಿಜೆಪಿ ಆಕ್ರೋಶ

BJP outraged over Minister Mahadevappa's statement

ಬೆಂಗಳೂರು,ಆ.4- ಕೆಆರ್‌ಎಸ್‌‍ ಅಣೆಕಟ್ಟು ನಿರ್ಮಾಣಕ್ಕೆ ಟಿಪ್ಪುಸುಲ್ತಾನ್‌ ಅಡಿಗಲ್ಲು ಹಾಕಿದ್ದು ಎಂಬ ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿಕೆಗೆ ಬಿಜೆಪಿ ನಾಯಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಹೇಳಿಕೆಯನ್ನು ಹಿಂಪಡೆಯದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಮತ್ತಿತರರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದು, ಮಹದೇವಪ್ಪ ಹೇಳಿಕೆಗೆ ಕಿಡಿಕಾರಿದ್ದಾರೆ.
ಬಿ.ವೈ.ವಿಜಯೇಂದ್ರ ಪೋಸ್ಟ್‌ ಮಾಡಿ, ಇಡೀ ದೇಶದಲ್ಲೇ ಅತ್ಯಂತ ಶ್ರೇಷ್ಠ ಆಡಳಿತ ನೀಡಿ ವಿಶ್ವಮಾನ್ಯರಾದ ಮೈಸೂರು ರಾಜವಂಶಸ್ಥರು ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಚರಿತ್ರೆಯನ್ನು ಸಾಧ್ಯವಾದರೆ ಗೌರವಿಸಿ, ಅಪಮಾನಿಸಿ ಜನರಿಂದ ಛೀಮಾರಿ ಹಾಕಿಸಿಕೊಳ್ಳಬೇಡಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮೊದಲಿನಿಂದಲೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜಮನೆತನದ ಬಗ್ಗೆ ಅಸಡ್ಡೆಯಿಂದ ನಡೆದುಕೊಂಡಿದ್ದಾರೆ, ಮೊನ್ನೆಯಷ್ಟೇ ನಾಲ್ವಡಿ ಅವರಿಗಿಂತಲೂ ತಮ ತಂದೆಯೇ ಮಿಗಿಲು ಎಂದು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಹೇಳಿಕೊಂಡಿದ್ದಾರೆ, ಇದೀಗ ಮುಖ್ಯಮಂತ್ರಿಗಳ ಹಿಂಬಾಲಕ ಸಚಿವ ಹೆಚ್‌. ಸಿ. ಮಹದೇವಪ್ಪನವರು ಕನ್ನಂಬಾಡಿ ಕಟ್ಟೆಗೆ ಮೊದಲು ಅಡಿಪಾಯ ಹಾಕಿದ್ದು ಟಿಪ್ಪು ಎಂದು ಹೇಳುವ ಮೂಲಕ ಕನ್ನಂಬಾಡಿ ಕಟ್ಟೆ (ಕೃಷ್ಣರಾಜ ಸಾಗರ)ನಿರ್ಮಾಣದ ಹಿಂದಿನ ತ್ಯಾಗ- ಪರಶ್ರಮದ ಇತಿಹಾಸ ಹಾಗೂ ನಾಲ್ವಡಿಯವರ ಕೊಡುಗೆಯನ್ನು ಅಪಮಾನಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮಾನ್ಯ ಹೆಚ್‌.ಸಿ. ಮಹಾದೇವಪ್ಪನವರೇ, ಟಿಪ್ಪು ಸುಲ್ತಾನ್‌ ಕೆಆರೆಸ್‌‍ ಅಣೆಕಟ್ಟು ಕಟ್ಟಲು ಪ್ರಯತ್ನಿಸಿದ್ದ ಯಾವುದಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಿ, ಕನ್ನಂಬಾಡಿ ಕಟ್ಟೆ ನಿರ್ಮಾಣ ಹಂತದ ಪ್ರತಿ ಹೆಜ್ಜೆಯ ಇತಿಹಾಸದ ದಾಖಲೆಗಳನ್ನು ನಾವು ಬಿಡುಗಡೆ ಮಾಡುತ್ತೇವೆ, ಟಿಪ್ಪು ಪರಿಶ್ರಮದ ಬಗ್ಗೆ ನಿಮಲ್ಲಿ ಯಾವುದಾದರೂ ದಾಖಲೆಗಳಿದ್ದರೆ ಬಿಡುಗಡೆ ಮಾಡಿ, ಟಿಪ್ಪು ನಿಧನವಾಗಿದ್ದು 1799 ರಲ್ಲಿ ಕನ್ನಂಬಾಡಿ ಕಟ್ಟುವ ಯೋಜನೆ ಪ್ರಾರಂಭಿಸಿದ್ದು 1908ರಲ್ಲಿ, (ಅಂದರೆ ಶತಮಾನಗಳ ಅಂತರದಲ್ಲಿ ) ನಾಲಿಗೆ ಹೊರಳುತ್ತದೆ ಎಂದು ಇತಿಹಾಸದ ಪುಟಗಳನ್ನು ಗಲೀಜು ಮಾಡಲು ಹೋಗಬೇಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ್‌ ಟ್ವೀಟ್‌ ಮಾಡಿ, ಕೆಆರ್‌ಎಸ್‌‍ ಜಲಾಶಯಕ್ಕೆ ಮತಾಂಧ ಟಿಪ್ಪು ಸುಲ್ತಾನನ ಹೆಸರಿಟ್ಟು ಟಿಪ್ಪು ಜಲಾಶಯ ಎಂದು ಮರುನಾಮಕರಣ ಮಾಡುವ ಹುನ್ನಾರ ನಡೆಯುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ. ನಾಡದ್ರೋಹಿ, ಮತಾಂಧ ಟಿಪ್ಪು ಸುಲ್ತಾನ ಸತ್ತಿದ್ದು 1799ರಲ್ಲಿ. ಮೈಸೂರು ಭಾಗದ ಗ್ರಾಮೀಣ ಜನರ ನಾಲಿಗೆಯ ಮೇಲೆ ಇಂದಿಗೂ ಕನ್ನಂಬಾಡಿ ಕಟ್ಟೆ ಎಂದೇ ಕರೆಸಿಕೊಳ್ಳುವ ಕೆಆರ್‌ಎಸ್‌‍ ಜಲಾಶಯದ ಕಾಮಗಾರಿ ಪ್ರಾರಂಭವಾದದ್ದು 1911ರಲ್ಲಿ. 1799ರಲ್ಲಿ ಸತ್ತ ಮತಾಂಧ ಟಿಪ್ಪು ಸುಲ್ತಾನನಿಗೂ, ಅವನು ಸತ್ತ ಮೇಲೆ ಸರಿಸುಮಾರು 112 ವರ್ಷ ಆದಮೇಲೆ ಕಾಮಗಾರಿ ಪ್ರಾರಂಭವಾದ ಕನ್ನಂಬಾಡಿ ಕಟ್ಟೆಗೂ ಏನು ಸಂಬಂಧ ಸಚಿವ ಮಹಾದೇವಪ್ಪನವರೇ? ನಿಮ ಬಾಲಿಶ ಹೇಳಿಕೆ ಗೋಕುಲಾಷ್ಟಮಿಗೂ ಇಮಾಮ್‌ ಸಾಬಿಗೂ ಏನು ಸಂಬಂಧ ಎನ್ನುವಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಕನ್ನಂಬಾಡಿ ಕಟ್ಟೆ ಎಂದೊಡನೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ನೆನಪಾಗುತ್ತಾರೆ. ಆದ್ದರಿಂದಲೇ ಕನ್ನಂಬಾಡಿ ಕಟ್ಟೆಗೆ ಕೃಷ್ಣರಾಜ ಸಾಗರ ಎಂಬ ಹೆಸರು ಇಡುವ ಮೂಲಕ ಅವರ ಹೆಸರನ್ನು ಸರಿಸಲಾಗಿದೆ. ಈಗ ಕಾಂಗ್ರೆಸ್‌‍ ಸರ್ಕಾರದ ವರಸೆ ನೋಡುತ್ತಿದ್ದರೆ ಕೆ ಆರ್‌ ಎಸ್‌‍ ಜಲಾಶಯಕ್ಕೆ ಟಿಪ್ಪು ಸುಲ್ತಾನ್‌ ಹೆಸರಿಡುವ ಹುನ್ನಾರ ನಡೆಯುತ್ತಿದೆ ಎನ್ನಿಸುತ್ತಿದೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.

ಮಾಜಿ ಸಚಿವ ಶ್ರೀರಾಮುಲು ಟ್ವೀಟ್‌ ಮಾಡಿ, ನಮ ತಂದೆ ಸಿದ್ದರಾಮಯ್ಯನವರು ಅವರು ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗಿಂತಲೂ ಗ್ರೇಟ್‌ ಎಂದು ಡಾ.ಯತೀಂದ್ರ ಹೇಳಿದ್ದಾರೆ. ಕೆ.ಆರ್‌ ಎಸ್‌‍ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದು, ಟಿಪ್ಪು ಸುಲ್ತಾನ್‌. ಸಚಿವ ಎಚ್‌.ಸಿ.ಮಹದೇವಪ್ಪ ಹೇಳಿದ್ದಾರೆ.

ಭಟ್ಟಂಗಿತನ ಇಲ್ಲವೇ ಓಲೈಕೆ ಮಾಡುವುದಕ್ಕೂ ಇತಿಮಿತಿ ಇರಬೇಕು. ಎಲ್ಲಿಯ ನಾಲ್ವಡಿ ಕೃಷ್ಣರಾಜ ಒಡೆಯರ್‌? ಎಲ್ಲಿಯ ಟಿಪ್ಪು ಸುಲ್ತಾನ್‌.? ಕೆಆರ್‌ ಎಸ್‌‍ ಅಣೆಕಟ್ಟು ಕಟ್ಟಲು ತಮ ಮನೆಯಲ್ಲಿದ್ದ ಬಂಗಾರದ ಒಡವೆಗಳನ್ನೇ ಮಾರಾಟ ಮಾಡಿ, ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಯೂರಿ ಈಗಲೂ ಜನಾನುರಾಗಿಯೇ ಉಳಿದಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್‌ ಎಂದು ಗುಡುಗಿದ್ದಾರೆ.

ಕೆಆರ್‌ ಎಸ್‌‍ ಅಣೆಕಟ್ಟಿಗೆ ಅಡಿಗಲ್ಲು ಹಾಕಿದ್ದು, 1911 ರಲ್ಲಿ, ಇದು ಪೂರ್ಣಗೊಂಡಿದ್ದು 1934ರಲ್ಲಿ. ಇತಿಹಾಸಕಾರರು ಉಲ್ಲೇಖಿಸುವಂತೆ ಟಿಪ್ಪು ಸುಲ್ತಾನ್‌ ಸಾವನ್ನಪ್ಪಿದ್ದು, 1799. ಮೇ 4ರಂದು. ಅಂದರೆ ಅವರಿಗೆ 1 ಶತಮಾನಗಳ ಹಿಂದೆಯೇ ಇದರ ಆಲೋಚನೆ ಇತ್ತು ಎಂಬುದು ಹೊಸ ಇತಿಹಾಸಕಾರರಾದ ಮಹದೇವಪ್ಪನವರ ಉವಾಚ! ಎಂದು ವ್ಯಂಗ್ಯವಾಡಿದ್ದಾರೆ.

ಅವರು ಅದ್ಯಾವಾಗ ಎಲ್ಲಿ ಸಂಶೋಧನೆ ನಡೆಸಿದರೋ ಆ ತಾಯಿ ಚಾಮುಂಡೇಶ್ವರಿಗೆ ಗೊತ್ತು. ಪ್ರಾಯಶಃ ಸಿದ್ದರಾಮಯ್ಯನ ಹುಂಡಿಯಲ್ಲಿ ನಡೆಸಿದ ಸಂಶೋಧನೆಯ ವೇಳೆ ಈ ಅಡಿಗಲ್ಲು ಸಿಕ್ಕಿರಬಹುದು ಎಂದು ಟೀಕೆ ಮಾಡಿದ್ದಾರೆ. ಟಿಪ್ಪು ಸುಲ್ತಾನ್‌ ತಂದೆ ಹೈದರಾಲಿ ನವ ಕರ್ನಾಟಕ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದವರು ಎಂದು ಸಚಿವ ಮಹಾದೇವಪ್ಪರಂತೆ ಮತ್ತೊಬ್ಬ ಸಚಿವರು ಹೊಸ ಸಂಶೋಧನೆ ನಡೆಸಿ ಹೇಳಿದರೆ ಅಚ್ಚರಿಪಡಬೇಕಾಗಿಲ್ಲ ಎಂದು ಕುಟುಕಿದ್ದಾರೆ.

ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಟ್ವೀಟ್‌ ಮಾಡಿ, ಇಂದು ಕೆಆರ್‌ಎಸ್‌‍ಗೆ ಅಡಿಗಲ್ಲು ಹಾಕಿದ್ದು ಟಿಪ್ಪು ಎಂದ ಕಾಂಗ್ರೆಸ್ಸಿಗಳು ಇನ್ನು ಸ್ವಲ್ಪ ದಿನ ಹೋದರೆ ನಾಡಗೀತೆಯನ್ನು ಟಿಪ್ಪುವಿನ ಅಪ್ಪ ಹೈದರಾಲಿ ಬರೆದಿದ್ದು ಎಂದು ಹೇಳಿದರೂ ಆಶ್ಚರ್ಯವಿಲ್ಲ. ದೆಹಲಿಯಿಂದ ಹಳ್ಳಿಯವರೆಗೆ ಕಾಂಗ್ರೆಸ್ಸಿನ ನಾಯಕರಿಗೆ ಹುಚ್ಚು ನಾಯಿ ಕಡಿದಿರಬೇಕು ಎಂದು ಕಿಡಿಕಾರಿದ್ದಾರೆ.

RELATED ARTICLES

Latest News