ಬೆಂಗಳೂರು,ಜ.6-ಲೋಕಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬಿಜೆಪಿ ದಲಿತ ಮತಗಳ ಓಲೈಕೆಗೆ ಮುಂದಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಭೀಮಾ ಸಮಾವೇಶ ನಡೆಸಲು ಮುಂದಾಗಿದೆ. ಒಂದು ಕಡೆ ಕಾಂಗ್ರೆಸ್ ಚಿತ್ರ ದುರ್ಗದಲ್ಲಿ ಅಹಿಂದ ಸಮಾವೇಶ ನಡೆಸಲು ಮುಂದಾಗಿರುವ ಬೆನ್ನಲ್ಲೇ ಬಿಜೆಪಿ ಭೀಮ ಸಮಾವೇಶವನ್ನು ನಡೆಸಲು ಮುಂದಾಗಿರುವುದು ಮಹತ್ವ ಪಡೆದುಕೊಂಡಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ದೂರವಾಗಿದ್ದ ದಲಿತ ಮತಗಳನ್ನು ಪುನಃ ತನ್ನತ್ತ ಸೆಳೆಯಲು ಕಾರ್ಯ ತಂತ್ರ ರೂಪಿಸುತ್ತಿರುವ ಬಿಜೆಪಿ, ಜಿಲ್ಲಾ ಕೇಂದ್ರಗಳಲ್ಲಿ ಭೀಮಾ ಸಮಾವೇಶವನ್ನು ನಡೆಸಿ ಬಳಿಕ ಮಧ್ಯ ಕರ್ನಾಟಕದಲ್ಲಿ ಬೃಹತ್ ರಾಜ್ಯ ಮಟ್ಟದ ಸಮಾವೇಶ ನಡೆಸಲು ತೀರ್ಮಾನಿಸಿದೆ. ಪ್ರತಿ ಜಿಲ್ಲೆಯಲ್ಲೂ ಒಂದೊಂದು ಸಮಾವೇಶಕ್ಕೆ 50ರಿಂದ ಒಂದು ಲಕ್ಷದವರೆಗೂ ಜನರನ್ನು ಸೇರಿಸಬೇಕೆಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಜಿಲ್ಲಾ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಫೆಬ್ರವರಿ ತಿಂಗಳ ಅಂತ್ಯಕ್ಕೆ ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಲು ಉದ್ದೇಶಿಸಿದ್ದು, ಸಾಧ್ಯವಾದರೆ ಪ್ರಧಾನಿ ನರೇಂದ್ರಮೋದಿ ಇಲ್ಲವೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ ಅವರನ್ನು ಆಹ್ವಾನಿಸುವ ಲೆಕ್ಕಾಚಾರದಲ್ಲಿ ಬಿಜೆಪಿಯಿದೆ. ಈಗಾಗಲೇ ಸಮಾವೇಶಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಈ ತಿಂಗಳ ಕೊನೆಯ ವಾರದಲ್ಲಿ ಸಮಾವೇಶ ಆರಂಭಗೊಳ್ಳಲಿದೆ.
ಮೂವರು ಡಿಸಿಎಂಗಳ ನೇಮಕ ಗಾಳಿಸುದ್ದಿ ಅಷ್ಟೇ : ಗೃಹ ಸಚಿವ ಪರಮೇಶ್ವರ
ಬಳಿಕ ವಾರಕ್ಕೆ ಎರಡೆರಡು ಸಮಾವೇಶಗಳು ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಮಧ್ಯ ಕರ್ನಾಟಕದಲ್ಲೇ ಫೆಬ್ರವರಿಯಲ್ಲಿ ರಾಜ್ಯ ಮಟ್ಟದ ಭೀಮ ಸಮಾವೇಶ ಆಯೋಜನೆ ಮಾಡಲು ಬಿಜೆಪಿ ಚಿಂತಿಸುತ್ತಿದೆ. ಲೋಕಸಭಾ ಚುನಾವಣೆಗೆ ದಲಿತ ಮತಗಳನ್ನು ಸೆಳೆಯಲು ತಂತ್ರ ಹೆಣೆಯುತ್ತಿದೆ. ಕಾಂಗ್ರೆಸ್ ಸಮಾವೇಶಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಸಮಾವೇಶ ನಡೆಸಲು ಮುಂದಾಗಿದೆ.
ಮತ್ತೊಂದೆಡೆ ನಿನ್ನೆ ಮಲ್ಲೇಶ್ವರದ ಬಿಜೆಪಿ ಕಾರ್ಯಾಲಯದಲ್ಲಿ ಬಲವರ್ಧನೆಗಾಗಿ ನಡೆದ ಭೀಮ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡುವುದಾಗಿ ತಿಳಿಸಿದ್ದಾರೆ. ಪಕ್ಷ ಬಲಪಡಿಸಲು ಶೀಘ್ರವೇ ದಿನಕ್ಕೆ ಎರಡು ಜಿಲ್ಲೆಗಳಂತೆ ರಾಜ್ಯ ಪ್ರವಾಸ ಮಾಡುತ್ತೇನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದ ಎಲ್ಲ ಸ್ಥಾನಗಳನ್ನು ಗೆದ್ದು, ಮೋದಿಯವರ ಕೈ ಬಲಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚುನಾವಣೆ ದೃಷ್ಟಿಯಿಂದ ರಾಜ್ಯ ಪ್ರವಾಸದ ವೇಳೆ ಪ್ರಮುಖರ ಜೊತೆಗೆ ಮಾತನಾಡುವೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಬಿಜೆಪಿ ಹೆಚ್ಚು ಉತ್ಸಾಹದಿಂದ ಕೆಲಸ ಮಾಡುತ್ತಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಲ ತುಂಬಬೇಕು ಎಂದು ಮನವಿ ಮಾಡಿದ್ದಾರೆ.