Friday, July 5, 2024
Homeರಾಜ್ಯಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿದ ಪ್ರತಿಪಕ್ಷದ ನಾಯಕರನ್ನು ಎಳೆದೊಯ್ದ ಪೊಲೀಸರು

ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲೆತ್ನಿಸಿದ ಪ್ರತಿಪಕ್ಷದ ನಾಯಕರನ್ನು ಎಳೆದೊಯ್ದ ಪೊಲೀಸರು

ಬೆಂಗಳೂರು,ಜು.3– ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರಸಂಗ ಜರುಗಿತು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಉಪನಾಯಕ ಅರವಿಂದ್‌ ಬೆಲ್ಲದ್‌, ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಸೇರಿದಂತೆ ಒಟ್ಟು 5 ತಂಡದಲ್ಲಿ ಸಿಎಂ ಸಿದ್ದರಾಮಯ್ಯನವರ ಸರ್ಕಾರಿ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.

5 ತಂಡದ ಜೊತೆಗೆ ಶಾಸಕರು, ವಿಧಾನಪರಿಷತ್‌ ಸದಸ್ಯರು, ಪಕ್ಷದ ಅಧಿಕಾರಿಗಳು ಹಾಗೂ ಪದಾಧಿಕಾರಿಗಳು ಕಾವೇರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸುತ್ತಿದ್ದಂತೆ ಮಾರ್ಗಮಧ್ಯದಲ್ಲಿಯೇ ಪೊಲೀಸರು ಪ್ರತಿಭಟನಾನಿರತರನ್ನು ತಡೆದು ವಶಕ್ಕೆ ಪಡೆದರು.
ಶಿವಾನಂದ ವೃತ್ತದ ಬಳಿ ಬರುತ್ತಿದ್ದಂತೆ ತಡೆದ ಪೊಲೀಸರು ವಿಜಯೇಂದ್ರ, ಅಶೋಕ್‌ ಸೇರಿದಂತೆ ಎಲ್ಲರನ್ನೂ ವಶಕ್ಕೆ ಪಡೆದು ಪೊಲೀಸ್‌‍ ವಾಹನದಲ್ಲಿ ಕರೆದೊಯ್ದರು.

ಈ ವೇಳೆ ಪ್ರತಿಭಟನಾ ನಿರತರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಹಗರಣದಲ್ಲಿ ಶಾಮೀಲಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ತಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಹಣಕಾಸು ಖಾತೆಯನ್ನು ಹೊಂದಿರುವ ಸಿದ್ದರಾಮಯ್ಯನವರು ಮೂಗಿನಡಿಯೇ ಸುಮಾರು 187 ಕೋಟಿ ಹಗರಣ ನಡೆದಿದೆ. ಅವರ ಅನುಮತಿ ಇಲ್ಲದೇ ನಿಗಮದ ಹಣವನ್ನು ಖಾಸಗಿ ಬ್ಯಾಂಕಿನಲ್ಲಿ ಖಾತೆ ತೆರೆಯಲು ಅನುಮತಿ ನೀಡಿದವರು ಯಾರು?, ಹಣಕಾಸು ಇಲಾಖೆಯ ಕಾರ್ಯದರ್ಶಿ ಒಪ್ಪಿಗೆಯಿಲ್ಲದೆ, ಇದು ನಡೆಯಲು ಸಾಧ್ಯವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದರಲ್ಲಿ ಭಾರಿ ದೊಡ್ಡ ಮೊತ್ತದ ಹಗರಣ ನಡೆದಿರುವುದರಿಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ನೈತಿಕತೆ ಕಳೆದುಕೊಂಡಿದ್ದಾರೆ. ನೈತಿಕತೆ ಇದ್ದರೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು.

RELATED ARTICLES

Latest News