Thursday, July 4, 2024
Homeರಾಜಕೀಯಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಬೃಹತ್‌ ಪ್ರೊಟೆಸ್ಟ್

ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಬೃಹತ್‌ ಪ್ರೊಟೆಸ್ಟ್

ಬೆಂಗಳೂರು, ಜೂ.17-ಡೀಸೆಲ್‌ ಮತ್ತು ಪೆಟ್ರೋಲ್‌ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಪಕ್ಷ ಬಿಜೆಪಿ ಇಂದು ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಿತು.

ರಾಜಧಾನಿ ಬೆಂಗಳೂರು, ಮಂಡ್ಯ, ದಕ್ಷಿಣ ಕನ್ನಡ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ರಾಯಚೂರು, ಕೊಪ್ಪಳ, ಹುಬ್ಬಳ್ಳಿ-ಧಾರವಾಡ, ಹಾವೇರಿ ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಮೋರ್ಚಾಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಲಾಯಿತು.

ಕೆಲವು ಕಡೆ ಕಾರಿಗೆ ಹಗ್ಗ ಕಟ್ಟಿ ಎಳೆದರೆ ಇನ್ನು ಕೆಲವು ಕಡೆ ಎತ್ತಿನ ಗಾಡಿ ಮೆರವಣಿಗೆ, ಶವಯಾತ್ರೆ, ತೆಂಗಿನಕಾಯಿ ಚಿಪ್ಪು, ಕರಪತ್ರ ಹಿಡಿದುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿ ಸರ್ಕಾರ ಜನವಿರೋಧಿ, ರೈತ ವಿರೋಧಿ ಎಂದು ಪ್ರತಿಭಟನೆ ನಿರತರು ಕಿರಿಕಾರಿದರು.

ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಉಪನಾಯಕ ಅರವಿಂದ್‌ ಬೆಲ್ಲದ್‌, ವಿಧಾನಪರಿಷತ್‌ನ ಮುಖ್ಯ ಸಚೇತಕ ಎನ್‌.ರವಿಕುಮಾರ್‌, ಮುಖಂಡರಾದ ಸಿ.ಟಿ.ರವಿ, ಭೈರತಿ ಬಸವರಾಜ್‌ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತಿಭಟನೆಗೂ ಮುನ್ನ ಅಶೋಕ್‌ ನೇತೃತ್ವದಲ್ಲಿ ಫ್ರೀಡಂಪಾರ್ಕ್‌ಗೆ ಎತ್ತಿನಗಾಡಿಯಲ್ಲಿ ಆಗಮಿಸಿದರು. ದಾರಿಯುದ್ದಕ್ಕೂ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನೆ ನಿರತರು ಈ ಸರ್ಕಾರ ಆದಷ್ಟು ಬೇಗ ತೊಲಗಲಿ ಎಂದು ಕಿಡಿಕಾರಿದರು.
ಮಂಡ್ಯದ ಸಂಜಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೊದಲು ಬಾಯಿ ಬಾಯಿ ಬಡಿದುಕೊಂಡು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಸರ್ಕಾರದ ಬೊಕ್ಕಸವನ್ನು ದಿವಾಳಿ ಮಾಡಿರುವ ಕಾಂಗ್ರೆಸ್‌‍ ಸರ್ಕಾರ ಆದಷ್ಟು ಬೇಗ ಮನೆಗೆ ಹೋಗಲಿ ಎಂದು ವಾಗ್ದಾಳಿ ನಡೆಸಿದರು.

ಇದೇ ರೀತಿ ದಕ್ಷಿಣಕನ್ನಡದಲ್ಲಿ ಅಣುಕು ಶವಯಾತ್ರೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದರು. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಸಾಧ್ಯವಾಗದ ಸರ್ಕಾರ ಜನರ ಜೇಬಿಗೆ ದರದ ಬರೆಯನ್ನು ಎಳೆದಿದೆ. ಬೇರೆ ರಾಜ್ಯಗಳಲ್ಲಿ ಅಷ್ಟಿತ್ತು, ಇಷ್ಟಿತ್ತು ಎನ್ನುವ ಬದಲು ಮೊದಲು ನೀವು ಕಡಿಮೆ ಮಾಡಿ ಎಂದು ಸವಾಲು ಹಾಕಿದರು.

ಬೆಳಗಾವಿಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ನಡೆಸಿದ ಬಿಜೆಪಿಯವರು ದ್ವಿಚಕ್ರ ವಾಹನಗಳನ್ನು ತಳ್ಳಿಕೊಂಡೇ ಬಂದಿದ್ದರು. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕ ಅನಿಲ್‌ ಬೆನಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ತುಮಕೂರಿನಲ್ಲಿ ಭದ್ರಾ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಶಾಸಕ ಜ್ಯೋತಿ ಗಣೇಶ್‌ ನೇತೃತ್ವದಲ್ಲಿ ಭದ್ರಮ ವೃತ್ತದಿಂದ ಕನಕ ವೃತ್ತದವರೆಗೆ ಪ್ರತಿಭಟನಾ ಮೆರಣಿವಣಿಗೆ ನಡೆಸಲಾಯಿತು. ಶಾಸಕ ಜ್ಯೋತಿ ಗಣೇಶ್‌ ಪ್ರತಿಭಟನೆಗೆ ಸೈಕಲ್‌ ಏರಿ ಬಂದಿದ್ದು, ವಿಶೇಷವಾಗಿತ್ತು. ಹೀಗೆ ರಾಜ್ಯ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಸಿಡಿದೆದ್ದಿರುವ ಬಿಜೆಪಿ ಮೊದಲ ಬಾರಿಗೆ ಬೃಹತ್‌ ಪ್ರತಿಭಟನೆಯನ್ನು ನಡೆಸಿದೆ.

RELATED ARTICLES

Latest News