ಬೆಂಗಳೂರು,ಡಿ.29- ಬಿಜೆಪಿಯ ಬಂಡಾಯ ಬಣ ಎಂದು ಗುರುತಿಸಿಕೊಂಡಿರುವ ಮುಖಂಡರು ಎರಡನೇ ಸುತ್ತಿನ ವಕ್ಫ್ ಹೋರಾಟವನ್ನು ಆರಂಭಿಸಿದ್ದು, ಕಂಪ್ಲಿಯಲ್ಲಿ ಜ.4 ರಂದು ಹೋರಾಟ ನಡೆಸಲು ನಿರ್ಧರಿಸಿದ್ದಾರೆ.ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ವಕ್ಫ್ ವಿರುದ್ಧ ಮೊದಲು ಹೋರಾಟ ಆರಂಭಿಸಿದ್ದು ಬಸನಗೌಡ ಪಾಟೀಲ್ ಯತ್ನಾಳ್. ಆನಂತರ ಎಲ್ಲರೂ ಬಂದು ಸೇರಿಕೊಂಡರು.
ಕರಾಳವಾದ ಕಾನೂನನ್ನು ಪ್ರತಿಭಟಿಸಬೇಕು ಎಂಬ ನನ್ನ ಹೋರಾಟ ನಿರಂತರ. ನಮ್ಮದು ಪಕ್ಷಾತೀತ ಹೋರಾಟ. ಇದರಲ್ಲಿ ಬಿ.ವೈ.ವಿಜಯೇಂದ್ರ, ಆನಂದ್‌ಸಿಂಗ್, ಕಾಂಗ್ರೆಸ್ ನಾಯಕರೂ ಕೂಡ ನಮ ಹೋರಾಟಕ್ಕೆ ಕೈ ಜೋಡಿಸಬಹುದು ಎಂದು ಆಹ್ವಾನ ನೀಡಿದರು.
ವಕ್ಫ್ ಹೋರಾಟವನ್ನು ಹಿಂದೂ ಮತ್ತು ಮುಸ್ಲಿಂ ನಡುವಿನ ಸಂಘರ್ಷ ಎಂದು ಬಿಂಬಿಸಲಾಗುತ್ತಿದೆ. ಈ ಕಾಯಿದೆಯಿಂದ ಮುಸ್ಲಿಮರಿಗೂ ಅನ್ಯಾಯವಾಗಿದೆ. ಮಠ ಮಂದಿರಗಳು ತೊಂದರೆಗೆ ಒಳಗಾಗಿವೆ. ಹೀಗಾಗಿ ದೇಶದಲ್ಲಿ ಅಸ್ತಿತ್ವದಲ್ಲಿರುವ ಕರಾಳ ಕಾಯಿದೆ ರದ್ದುಗೊಳ್ಳಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಯತ್ನಾಳ್ ಅವರ ನೇತೃತ್ವದಲ್ಲಿ ನಮ ತಂಡ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಅಲ್ಲಿ ಪರಿಶೀಲನೆ ನಡೆಸಿದ ಬಳಿಕ ಜ.4 ರಂದು ಕಂಪ್ಲಿಯಲ್ಲಿ ಸಮಾವೇಶ ನಡೆಸಲಾಗುವುದು.
ರಾಜ್ಯಾದ್ಯಂತ ವಕ್ಫ್ ನಿಂದ ತೊಂದರೆಗೊಳಗಾಗುವವರ ದಾಖಲಾತಿಗಳು ಹಾಗೂ ಮಾಹಿತಿಗಳನ್ನು ಪಡೆದು ಜ.6 ಮತ್ತು 7 ರಂದು ದೆಹಲಿಯಲ್ಲಿ ವಕ್‌್ಫ ಜಂಟಿ ಸದನ ಸಮಿತಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಕುಮಾರಬಂಗಾರಪ್ಪ, ಮೊದಲ ಹಂತದ ವರದಿಯನ್ನು ಕೇಂದ್ರ ಜಂಟಿ ಸದನ ಸಮಿತಿಗೆ ಈಗಾಗಲೇ ಸಲ್ಲಿಸಲಾಗಿದೆ. ನಮ ವರದಿ ರಾಷ್ಟ್ರಮಟ್ಟದಲ್ಲೇ ಮಾದರಿ ಎಂದು ಹೇಳಲಾಗಿದೆ.
ಕರ್ನಾಟಕ ವಿಧಾನಸಭೆಯ ಅಲ್ಪಸಂಖ್ಯಾತರ ಸಮಿತಿ ವಕ್ಫ್ ಆಸ್ತಿಗಳನ್ನು ಕ್ರಮಬದ್ಧಗೊಳಿಸಲು ತೆಗೆದುಕೊಂಡ ಕ್ರಮಗಳ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿಲ್ಲ. ಈಗ ನಾವು ಅಧ್ಯಯನಶೀಲರಾಗಿ 2ನೇ ವರದಿ ಸಲ್ಲಿಸುತ್ತಿದ್ದೇವೆ ಎಂದರು. ದೇಶದಲ್ಲಿ 20 ರಿಂದ 24 ಲಕ್ಷ ಎಕರೆ ವಕ್ಫ್ ಹೆಸರಿನಲ್ಲಿ ದುರುಪಯೋಗವಾಗುತ್ತಿದೆ. ಅದನ್ನು ಕಾನೂನಿನ ವ್ಯಾಪ್ತಿಗೆ ತರಬೇಕಿದೆ. ಈ ಹಿಂದೆ ಜಾರಿಯಾಗಿದ್ದ ಕಾನೂನುಗಳನ್ನು ನರೇಂದ್ರ ಮೋದಿಯವರು ಬದಲಾವಣೆ ಮಾಡಲಿದ್ದಾರೆ ಎಂದು ಹೇಳಿದರು.
ವಕ್‌್ಫ ಕಾನೂನುಗಳು ಆಸ್ತಿ ತಗಾದೆಗಳನ್ನು ಸಾಂಪ್ರದಾಯಿಕ ನ್ಯಾಯಾಲಯಗಳ ವ್ಯಾಪ್ತಿಯಿಂದ ಹೊರಗಿಟ್ಟಿದೆ. ಇದನ್ನು ಬಳಸಿಕೊಂಡು ರಾಜ್ಯ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಬಹಳಷ್ಟು ಆಸ್ತಿಗಳನ್ನು ವಕ್ಫ್ ಎಂದು ನಮೂದಿಸಿದ್ದಾರೆ. ತಮ ಅಧಿಕಾರ ದುರುಪಯೋಗಪಡಿಸಿಕೊಂಡು, ಜನಸಾಮಾನ್ಯರಿಗೆ ತೊಂದರೆ ಮಾಡಿದ್ದಾರೆ ಎಂದರು.
ರಾಜ್ಯಾದ್ಯಂತ ನಮ ತಂಡ ಎರಡನೇ ಹಂತದ ಪ್ರವಾಸ ಆರಂಭಿಸಿದೆ ಎಂದು ತಿಳಿಸಿದರು.