ನವದೆಹಲಿ,ಏ.4- ರಾಜ್ಯಸಭಾ ಸದಸ್ಯ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಚಿತ್ರನಟಿ ಹಾಗೂ ಬಿಜೆಪಿ ಲೋಕಸಭಾ ಸದಸ್ಯೆ ಹೇಮಮಾಲಿನಿ ಕುರಿತು ನೀಡಿರುವ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ.
ಕಾರ್ಯಕ್ರಮವೊಂದರಲ್ಲಿ ರ್ಯಾಲಿಯನ್ನುದ್ದೇಶಿ ಮಾತನಾಡಿರುವ ಸುರ್ಜೇವಾಲಾ, ನಾವು ಏಕೆ ಎಂಎಲ್‍ಎ/ಎಂಪಿ ಆಯ್ಕೆ ಮಾಡುತ್ತೇವೆ? ಅವರು ನಮ್ಮ ಧ್ವನಿಯನ್ನು ಎತ್ತುವಂತೆ, ನಮ್ಮ ಅಭಿಪ್ರಾಯಗಳನ್ನು ಸ್ವೀಕರಿಸುತ್ತಾರೆ, ಅದಕ್ಕಾಗಿಯೇ ನಾವು ಅವರನ್ನು ಆಯ್ಕೆ ಮಾಡುತ್ತೇವೆ. ಅವರು ಹೇಮಾ ಮಾಲಿನಿ ಅಲ್ಲ, ಯಾರು?… ಎಂದು ಹೇಳಿರುವುದು ಭಾರೀ ವಿವಾದವನ್ನು ಉಂಟು ಮಾಡಿದೆ.
ಅವರ ಹೇಳಿಕೆ ಕುರಿತಂತೆ ಬಿಜೆಪಿ ತಿರುಗಿ ಬಿದ್ದಿದ್ದು, ಕೂಡಲೇ ಸುರ್ಜೇವಾಲ ಅವರು ಹೇಮಮಾಲಿನಿ ಕುರಿತು ನೀಡಿರುವ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು. ಇಲ್ಲವೇ ಅವರನ್ನು ಪಕ್ಷದಿಂದ ಹೊರಹಾಕಬೇಕೆಂದು ಒತ್ತಾಯಿಸಿದೆ.ಕೆಲ ದಿನಗಳ ಹಿಂದೆ ಹಿಮಾಚಲಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ನಟಿ ಕಂಗನಾ ರಾಣಾವತ್ ಬಗ್ಗೆ ಎಐಸಿಸಿ ವ್ಯಕ್ತಾರೆ ಸುಪ್ರಿಯ ಶ್ರೀನೇತ್ ಅವರು ಇಂಥದ್ದೇ ವಿವಾದಾತ್ಮಕ ಪೋಸ್ಟ್ ಮಾಡಿದ್ದರು. ಇದು ಕೂಡ ಎಐಸಿಸಿಗೆ ತೀವ್ರ ಮುಜುಗರ ಸೃಷ್ಟಿಸಿತ್ತು.
ಸುರ್ಜೇವಾಲ ಹೇಳಿಕೆಗೆ ಕಿಡಿಕಾರಿರುವ ಕಂಗನಾ ರಾಣಾವತ್, ಅವರ ಹೇಳಿಕೆ ಕೇವಲ ಹೇಮಮಾಲಿನಿ ಅಲ್ಲ ಇಡೀ ಮಹಿಳಾ ಸಮಾಜಕ್ಕೆ ಮಾಡಿರುವ ಅವಮಾನ. ಕಾಂಗ್ರೆಸ್ ನಾಯಕರು ಇತ್ತೀಚೆಗೆ ಸೋಲುವ ಭಯದಿಂದಾಗಿ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ನಾರಿಯರಿಗೆ ಗೌರವ ಕೊಡದವರು ದೇಶ ಆಳಲು ಸಮರ್ಥರೇ ಎಂದು ಪ್ರಶ್ನೆ ಮಾಡಿದ್ದಾರೆ.