ಬೆಳಗಾವಿ,ಡಿ.15- ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶವಿಲ್ಲ. ಹೀಗಾಗಿ ಯಾರೊಬ್ಬರೂ ಸಭೆ, ಸಮಾವೇಶ, ಸಮಾರಂಭ ನಡೆಸಬಾರದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಮ್ಮ ಬೆಂಬಲಿಗರಿಗೆ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.
ಮಾಜಿ ಸಚಿವ ಎಂ.ಸಿ.ರೇಣುಕಾಚಾರ್ಯ ನೇತೃತ್ವದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಠಕ್ಕರ್ ನೀಡಲು ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿರುವ ಬೆನ್ನಲ್ಲೇ ರಾಜ್ಯಾಧ್ಯಕ್ಷರ ಈ ಸೂಚನೆ ಮಹತ್ವ ಪಡೆದುಕೊಂಡಿದೆ.
ಈ ಕುರಿತು ತಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಜಯೇಂದ್ರ, ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲವೇ ಇಲ್ಲ. ಹಣದ ಹೆಸರಿನಲ್ಲಿ ಸಮಾವೇಶಗಳನ್ನು ಆಯೋಜಿಸುವುದು ಒಪ್ಪಲಾಗದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಸಭೆ, ಸಮಾವೇಶಗಳನ್ನು ಮಾಡಲು ಹೊರಟಿದ್ದರೆ ಕೂಡಲೇ ತಮ ಚಟುವಟಿಕೆಗಳನ್ನು ನಿಲ್ಲಿಸಬೇಕೆಂದು ತಾಕೀತು ಮಾಡಿದ್ದಾರೆ.
ರಾಜ್ಯಾಧ್ಯಕ್ಷರಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಇನ್ನಷ್ಟು ಬಲ ತರುವ ಕಾರ್ಯಕ್ರಮದಡಿಯಲ್ಲಿ ಪಕ್ಷದ ಹಿರಿಯರು, ಶಾಸಕರು, ಮಾಜಿ ಶಾಸಕರು ಹಾಗೂ ಎಲ್ಲಾ ಹಿರಿಯರೊಂದಿಗೆ ಅತೀ ಶೀಘ್ರದಲ್ಲಿ ಸಭೆ ಕರೆಯಲಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಕೂಡು ಕುಟುಂಬವಿದ್ದಂತೆ. ಪಕ್ಷದ ಚೌಕಟ್ಟಿನಲ್ಲಿ ಪ್ರತಿಯೊಂದು ಸಭೆ ಕಾರ್ಯಕ್ರಮಗಳು ನಡೆಯಬೇಕೇ ಹೊರತು ಪಕ್ಷದ ನಿಯಮಗಳನ್ನು ಬದಿಗೆ ಸರಿಸಿ ಯಾವುದೇ ಚಟುವಟಿಕೆಗಳನ್ನು ನಡೆಸುವುದು ಸಂವಿಧಾನದ ಆಶಯಕ್ಕೆ ಪೂರಕವಲ್ಲ ಎಂಬುದನ್ನು ವಿನಮ್ರತೆಯಿಂದ ಸಹೃದಯಿಗಳಲ್ಲಿ ತಿಳಿಸಲು ಬಯಸುತ್ತೇನೆ ಎಂದು ಪರೋಕ್ಷವಾಗಿ ತಮ ಬೆಂಬಲಿಗರಿಗೆ ಸಭೆ, ಸಮಾರಂಭಗಳನ್ನು ನಡೆಸಬಾರದು ಎಂದು ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ.
ಶನಿವಾರವಷ್ಟೇ ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕರು ಸಭೆ ನಡೆಸಿದ ಬೆನ್ನಲ್ಲೇ ಮತ್ತೆ ಪಕ್ಷದೊಳಗೆ ವಿವಾದ ಉಂಟಾಗಬಹುದು ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ವಿಜಯೇಂದ್ರ ಈ ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.