ಬೆಂಗಳೂರು,ಆ.18- ಬಿಜೆಪಿ ಟಿಕೆಟ್ ಕೊಡಿಸುವು ದಾಗಿ ಎರಡು ಕೋಟಿ ಸುಲಿಗೆ ಮಾಡಿದ್ದಾರೆಂಬ ಪ್ರಕರಣದ ಬಗ್ಗೆ ಬಸವೇಶ್ವರನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆರೋಪಿಗಳು ಟಿಕೆಟ್ ಆಮಿಷವೊಡ್ಡಿ 2 ಕೋಟಿ ರೂ. ಪಡೆದುಕೊಂಡುಟಿಕೆಟ್ ಕೊಡಿಸದೆ ಹಾಗೂ ಹಣವನ್ನೂ ಹಿಂದಿರುಗಿಸದೆ ವಂಚನೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ.
ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಹೋದರ-ಸಹೋದರಿ ಸೇರಿದಂತೆ ಮೂವರು ಆರೋಪಿಗಳು ಹಂತ ಹಂತವಾಗಿ 2 ಕೋಟಿ ರೂ. ಹಣ ಪಡೆದುಕೊಂಡಿರುವುದು ಗೊತ್ತಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.
ತನಿಖೆ ಅಂತಿಮ ಹಂತದಲ್ಲಿ: ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದರ್ಶನ್ ಹಾಗೂ ಇನ್ನಿತರರಿಗೆ ರಾಜ್ಯಾತಿಥ್ಯ ನೀಡಲಾಗಿರುವ ಬಗ್ಗೆ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆ ಅಂತಿಮ ಹಂತದಲ್ಲಿದೆ. ಸದ್ಯದಲ್ಲಿಯೇ ಚಾರ್ಜ್ಶೀಟ್ ಸಲ್ಲಿಸುತ್ತೇವೆ ಎಂದರು.
ಮಾದಕವಸ್ತು ತಡೆಗಟ್ಟಲು ಪಣ:
ಮಾದಕವಸ್ತುಗಳನ್ನು ಸಂಪೂರ್ಣವಾಗಿ ತಡೆಗಟ್ಟಲು ನಾವು ಪಣ ತೊಟ್ಟಿದ್ದೇವೆ. ಮಾದಕವಸ್ತು ಸಾಗಣೆ, ಮಾರಾಟ, ಸಂಗ್ರಹಣೆ ಬಗ್ಗೆ ಪ್ರತಿನಿತ್ಯ ನಮ ಪೊಲೀಸರು ನಿಗಾ ವಹಿಸಿದ್ದಾರೆ ಎಂದು ಇದೇ ವೇಳೆ ಸುದ್ದಿಗಾರರ ಪ್ರಶ್ನೆಗೆ ಆಯುಕ್ತರು ಪ್ರತಿಕ್ರಿಯಿಸಿದ್ದಾರೆ.