ಬೆಂಗಳೂರು,ಏ.2- ಸರ್ಕಾರದ ನಿರಂತರ ಬೆಲೆ ಏರಿಕೆ ವಿರೋಧಿಸಿ ಅಧಿಕೃತ ಪ್ರತಿಪಕ್ಷ ಬಿಜೆಪಿ ಇಂದಿನಿಂದ ನಗರದ ಫ್ರೀಡಂಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿಯನ್ನು ಆರಂಭಿಸಿದೆ. ಫ್ರೀಡಂಪಾರ್ಕ್‌ನಲ್ಲಿ ಆರಂಭವಾದ ಧರಣಿಗೆ ಮಾಜಿ ಸಿಎಂಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವರಾದ ಆರಗ ಜ್ಞಾನೇಂದ್ರ, ವಿ.ಸುನೀಲ್‌ಕುಮಾರ್, ಶಾಸಕರು, ವಿಧಾನಪರಿಷತ್ ಸದಸ್ಯರು ಹಾಗೂ ಪಕ್ಷದ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಇಂದಿನಿಂದ ಆರಂಭವಾಗಿರುವ ಅಹೋರಾತ್ರಿ ಧರಣಿ ಶುಕ್ರವಾರ ಬೆಳಗ್ಗೆವರೆಗೂ ಮುಂದುವರೆಯಲಿದ್ದು, ಸರ್ಕಾರದ ಬೆಲೆ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕೆಂದು ಬಿಜೆಪಿ ಆಗ್ರಹಿಸಿದೆ. ಪ್ರತಿಭಟನಾನಿರತರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ತಮ ಗ್ಯಾರಂಟಿಗಳನ್ನು ಪೂರ್ಣಗೊಳಿಸಲು ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ.
ಹಾಲು, ವಿದ್ಯುತ್, ಕಸ, ಡೀಸೆಲ್ ಹೀಗೆ ಪ್ರತಿಯೊಂದರ ಮೇಲೂ ತೆರಿಗೆ ಹೆಚ್ಚಳ ಮಾಡಲಾಗಿದೆ. ಜನರ ಪಾಲಿಗೆ ಈ ಸರ್ಕಾರ ಶಾಪವಾಗಿದೆ. ಹೆಚ್ಚಳ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಹೋರಾಟಗಾರರು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಈ ಸರ್ಕಾರಕ್ಕೆ ಜನಹಿತ ಮುಖ್ಯವಲ್ಲ. ಈಗಾಗಲೇ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ. ನಿನ್ನೆ ತಡರಾತ್ರಿ ಡಿಸೇಲ್ ಬೆಲೆಯನ್ನು ಏರಿಕೆ ಮಾಡಿದ್ದಾರೆ. ಇವರಿಗೆ ಜನರ ಹಿತಕ್ಕಿಂತ ತಮ ಖುರ್ಚಿ ಉಳಿಸಿಕೊಳ್ಳುವುದೇ ಮುಖ್ಯವಾಗಿದೆ ಎಂದು ಗುಡುಗಿದರು.
ಬೆಲೆ ಏರಿಕೆ ಖಂಡಿಸಿ ಬಿಜೆಪಿ ಇಂದು ಅಹೋರಾತ್ರಿ ಧರಣಿ ನಡೆಸಲಿದೆ. ನಾನು ಕೂಡ ಧರಣಿಯಲ್ಲಿ ಭಾಗಿಯಾಗಲಿದ್ದೇನೆ. ತಕ್ಷಣವೇ ಸರ್ಕಾರ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಅಲ್ಲಿಯವೆಗೂ ನಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದರು.
ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಸ್ಪೀಕರ್ ನಮ ಶಾಸಕರನ್ನ ಅಮಾನತು ಮಾಡಿ ಕೆಲವು ಷರತ್ತುಗಳನ್ನು ವಿಧಿಸಿದ್ದರು. ಶಾಸಕರು ಕಮಿಟಿ ಸಭೆಗೆ ಹೋಗಬಾರದ್ದು, ಮೊಗಸಾಲೆಗೆ ಬರಬಾರದ್ದು ಅಂತ ಆದೇಶಿದ್ದರು. ಕಾನೂನು ಬಾಹಿರ ವಿರೋಧಿ ಆದೇಶವನ್ನ ವಿರೋಧಿಸಿ ಪ್ರತಿಭಟನೆ ನಡೆಸಿದ್ದೇವೆ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಆಲಿಬಾಬಾ ಮತ್ತು ಕಳ್ಳರ ಕಥೆ ಕೇಳಿದ್ದೋ, ಈಗ ಆಲಿಬಾಬ ಮತ್ತು 135 ಜನ ಕಳ್ಳರಿದ್ದಾರೆ. ನಾವು ಅಣೇಕಟ್ಟು ಕಟ್ಟುತ್ತೀವಿ, ಡ್ಯಾಮ್ ಕಟ್ಟುತ್ತೀವೆ ಅಂತಾರೆ, ಮತ್ತೊಂದು ಕಡೆ ಎಷ್ಟು ಟ್ಯಾಕ್ಸ್ ಹಾಕುತ್ತೇವೆ ಎಂಬುದನ್ನು ಹೇಳುವುದಿಲ್ಲ. ಬಜೆಟ್‌ನಲ್ಲಿ ಟ್ಯಾಕ್‌್ಸ ಬಗ್ಗೆ ಹೇಳಿಲ್ಲ, ಆದರೆ ಪ್ರತಿ ದಿನ ಬೆಲೆ ಏರಿಕೆ ಮಾಡಿ ಬರೆ ಎಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನು ಪ್ರತಿ ಮನೆ ಮನೆಗೂ ತೆರಳಿ ಮನವರಿಕೆ ಮಾಡಿಕೊಡುತ್ತೇವೆ. ಜನರಿಗೆ ಆಗುತ್ತಿರುವ ಅನ್ಯಾಯವನ್ನು ತಡಬೇಕಿದೆ ಎಂದು ಕರೆ ನೀಡಿದರು.