Thursday, November 21, 2024
Homeರಾಜ್ಯತಕ್ಷಣವೇ ಹಾಲಿನ ದರ ಏರಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟ : ಬಿಜೆಪಿ ಎಚ್ಚರಿಕೆ

ತಕ್ಷಣವೇ ಹಾಲಿನ ದರ ಏರಿಕೆ ಹಿಂಪಡೆಯದಿದ್ದರೆ ಉಗ್ರ ಹೋರಾಟ : ಬಿಜೆಪಿ ಎಚ್ಚರಿಕೆ

ಬೆಂಗಳೂರು, ಜೂ.25- ಹೆಚ್ಚಿಸಿರುವ ಹಾಲಿನ ದರವನ್ನು ತಕ್ಷಣವೇ ಹಿಂಪಡೆಯದಿದ್ದರೆ ರಾಜ್ಯಸರ್ಕಾರದ ವಿರುದ್ಧ ರಾಜ್ಯಾದ್ಯಂತ ಬೀದಿಗಿಳಿದು ಉಗ್ರ ಹೋರಾಟ ನಡೆಸುವುದಾಗಿ ಪ್ರತಿಪಕ್ಷ ಬಿಜೆಪಿ ಎಚ್ಚರಿಕೆ ಕೊಟ್ಟಿದೆ.ಲೋಕಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಕಾಂಗ್ರೆಸ್‌‍, ಮತದಾರರ ಮೇಲಿರುವ ಸಿಟ್ಟನ್ನು ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ನೀತಿ ಅನುಸರಿಸುತ್ತದೆ ಎಂದು ಕಿಡಿಕಾರಿದೆ.

ಈ ಸಂಬಂಧ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿ ಹಾಲಿನ ದರ ಹೆಚ್ಚಳ ಮಾಡಿರುವ ಸರ್ಕಾರದ ವಿರುದ್ಧ ಕೆಂಡ ಕಾರಿದ್ದಾರೆ.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ತಮ ಪೋಸ್ಟ್‌ನಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮಗೆ ಬಡವರು, ಮಾಧ್ಯಮ ವರ್ಗದ ಜನರ ಮೇಲೆ ಕಿಂಚಿತ್ತಾದರೂ ಕನಿಕರ ಇದ್ದರೆ, ಈ ಕೂಡಲೇ ಹಾಲಿನ ದರ ಏರಿಕೆ ಆದೇಶವನ್ನು ಹಿಂಪಡೆಯಿರಿ ಎಂದು ಒತ್ತಾಯಿಸಿದ್ದಾರೆ.

ತುರ್ತು ಪರಿಸ್ಥಿತಿ ಹೇರಿಕೆಯ ವಾರ್ಷಿಕೋತ್ಸವ ಸಂಭ್ರಮಿಸಲು ಕಾಂಗ್ರೆಸ್‌‍ ಸರ್ಕಾರ ನಂದಿನಿ ಹಾಲಿನ ದರವನ್ನು ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ ಮಾಡಿ ವಿಕೃತ ಸಂತೋಷ ಅನುಭವಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೇಲೆ ಕೇವಲ 13 ತಿಂಗಳಿನಲ್ಲಿ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದೀರಿ. ಕಳೆದ ವರ್ಷ ಆಗಸ್ಟ್‌ನಲ್ಲಿ 3 ರೂಪಾಯಿ ಹೆಚ್ಚಳವಾಗಿದ್ದ ಹಾಲಿನ ಬೆಲೆ ಈಗ ಮತ್ತೊಮೆ 2 ರೂಪಾಯಿ ಹೆಚ್ಚಾಗಿದೆ. ರಾಜ್ಯದ ಬಡವರು, ಮಾಧ್ಯಮ ವರ್ಗದ ಜನ ಈಗಾಗಲೇ ಪೆಟೋಲ್‌ ಡೀಸೆಲ್‌ ಬೆಲೆ ಏರಿಕೆ, ಗಗನಕ್ಕೇರಿರುವ ತರಕಾರಿ ಬೆಲೆಗಳಿಂದ ಕಂಗಾಲಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಹಾಲಿನ ದರ ಏರಿಸಿ ಮತ್ತೊಮೆ ಬಡವರ ಗಾಯದ ಮೇಲೆ ಬರೆ ಎಳೆದಿದ್ದೀರಿ ಎಂದು ಅಶೋಕ್‌ ಟೀಕಾ ಪ್ರಹಾರ ನಡೆಸಿದ್ದಾರೆ.

ಸರ್ಕಾರದ ವಿರುದ್ಧ ನಿರಂತರ ಹೋರಾಟ :
ರಾಜ್ಯಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಮ ಎಕ್‌್ಸ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಬೆಲೆ ಏರಿಸುವುದರಲ್ಲಿ ನಿಸ್ಸೀಮತನಕ್ಕೆ ಹೆಸರಾಗುತ್ತಿರುವ ಕರ್ನಾಟಕ ಸರ್ಕಾರ ಜನ ಸಾಮಾನ್ಯ ಮನೆಯಲ್ಲಿ ಕ್ಷೀರ ಉಕ್ಕುವುದನ್ನು ಕ್ಷೀಣಿಸಲು ಹಾಲು ದರವನ್ನು ಉಕ್ಕಿಸಲು ಮುಂದಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತ ಬಡವರಿಗೂ ಉಪಕಾರಿಯಾಗಲಿಲ್ಲ, ಹೈನುಗಾರಿಕೆ ಹಾಗೂ ಪಶುಸಂಗೋಪನೆ ಅವಲಂಬಿಸಿರುವ ರೈತರ ಬದುಕೂ ಹಸನಾಗಿಸಲಿಲ್ಲ, ಇದೀಗ ನಂದಿನಿ ಹಾಲಿನ ದರ ಹೆಚ್ಚಿಸಿ ಸದ್ಯ ಲೀಟರ್‌ ಹಾಲಿಗೆ ಇರುವ 42 ರೂಪಾಯಿ ದರವನ್ನು 2 ರೂ 10 ಪೈಸೆ ಹೆಚ್ಚಳ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಈ ರಾಜ್ಯದ ಜನರ ಬದುಕಿನೊಂದಿಗೆ ಚೆಲ್ಲಾಟವಾಡಲು ಹೊರಟಿರುವ ಕಾಂಗ್ರೆಸ್‌‍ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದು ಕೊಂಡಿದೆ. ಈ ಜನವಿರೋಧಿ ಸರ್ಕಾರ ಕೆಳಗಿಳಿಸುವವರೆಗೂ ಬಿಜೆಪಿಯ ಜನಪರ ಹೋರಾಟ ನಿರಂತರ ಸಾಗಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

RELATED ARTICLES

Latest News