ಬೆಂಗಳೂರು, ಅ.10- ಬಿಜೆಪಿಯವರು ಯಾರನ್ನು ಯಾವಾಗ ಸೆಳೆಯುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಅವರಿಗೆ ಅವರದೇ ಆದಂತಹ ತಂತ್ರಗಾರಿಕೆ ಇದೆ. ಕಾಂಗ್ರೆಸ್‌ನ ಶಾಸಕ ವೀರೇಂದ್ರ ಪಪ್ಪಿ ವಿರುದ್ಧವೂ ಅಂತಹ ಪ್ರಯತ್ನ ನಡೆದಿರಬಹುದು ಎಂದು ಕಾರ್ಮಿಕ ಸಚಿವ ಸಂತೋಷ್‌ಲಾಡ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಶಾಸಕ ವೀರೇಂದ್ರ ಪಪ್ಪಿ ಅವರ ವಿರುದ್ಧ ಆರೋಪ ಮಾಡಿರುವುದು ರಾಜಕೀಯ ಕಾರಣಕ್ಕೆ. 40 ಕೆ.ಜಿ. ಚಿನ್ನ ಸಿಕ್ಕಿದೆ ಎಂದು ಹೇಳಲಾಗಿದೆೆ. ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಹಿಮಂತ್ ಬಿಸ್ವಾಶರ್ಮ ಅವರ ವಿರುದ್ಧ ಶಾರದಾ ಚಿಟ್‌ಫಂಡ್ ಹಗರಣ ಇತ್ತು. ಅದೇ ರೀತಿ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ವಿರುದ್ಧ ಸಾವಿರಾರು ಕೋಟಿ ರೂ.ಗಳ ಹಗರಣದ ಆರೋಪವಿತ್ತು. ಅವರನ್ನು ಬಿಜೆಪಿಗೆ ಸೇರಿಸಿಕೊಂಡರು ಈಗ ವಾಷಿಂಗ್‌ಪೌಡರ್ ನಿರ್ಮಾ ಹಾಕಿ ಸ್ವಚ್ಛಗೊಳಿಸಿದ್ದಾರೆಯೇ? ಎಂದು ಪ್ರಶ್ನಿಸಿದರು.
ವೀರೇಂದ್ರ ಪಪ್ಪಿ ಬಿಹಾರ ವಿಧಾನಸಭೆಯ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷಕ್ಕೆ ದುಡ್ಡು ಕೊಟ್ಟಿಲ್ಲ. ಒಂದು ವೇಳೆ ಯಾರಾದರೂ ಆ ರೀತಿ ದುಡ್ಡು ಕೊಟ್ಟಿದ್ದರೆ ಪತ್ತೆ ಹಚ್ಚುವ ವ್ಯವಸ್ಥೆಗಳು ಮತ್ತು ಸಾಮರ್ಥ್ಯ ಕೇಂದ್ರ ಸರ್ಕಾರದ ಬಳಿ ಇವೆೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯ ಪೂರ್ಣ ಖರ್ಚನ್ನು ಅಜಿತ್ ಪವಾರ್ ನೋಡಿಕೊಂಡಿದ್ದರು ಎಂದು ಗಂಭೀರ ಆರೋಪ ಮಾಡಿದರು.
ಫೆಮಾ, ಇಡಿ ದಾಳಿ ಮಾಡಿಸಿ, ದುಡ್ಡು ಇರುವವರನ್ನು ಪತ್ತೆ ಹಚ್ಚಿ ಬಿಜೆಪಿಗೆ ಸೇರಿಸಿಕೊಳ್ಳುತ್ತಾರೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳೇ ಅಜಿತ್ ಪವಾರ್ ವಿರುದ್ಧ ಆರೋಪ ಮಾಡಿದ್ದವು. ಈಗ ಅಜಿತ್ ಪವಾರ್ ಆರೋಪಿ ಅಲ್ಲವೇ ಎಂದು ಪ್ರಶ್ನಿಸಿದರು. ಭ್ರಷ್ಟಚಾರದ ಆರೋಪ ಇರುವವರನ್ನು ಬಿಜೆಪಿಗೆ ಸೇರಿಸಿಕೊಂಡು ತಮ ಬಳಿಯಿರುವ ವಾಷಿಂಗ್‌ಮೆಷಿನ್‌ವೊಂದಕ್ಕೆ ಹಾಕುತ್ತಾರೆ. ಅಲ್ಲಿಗೆ ಅವರು ಪ್ರಾಮಾಣಿಕರಾಗಿ ಸ್ವಚ್ಛಗೊಳ್ಳುತ್ತಾರೆ. ಭ್ರಷ್ಟಚಾರಿಗಳಾಗಿ ಉಳಿಯುವುದಿಲ್ಲ. ಈ ರೀತಿ 25 ನಾಯಕರನ್ನು ಸ್ವಚ್ಛಗೊಳಿಸಲಾಗಿದೆ ಎಂದು ಲೇವಡಿ ಮಾಡಿದರು.
ವಿಶ್ವದಲ್ಲಿ ಭಾರತ ಭ್ರಷ್ಟಚಾರ, ಆಭಿವ್ಯಕ್ತಿ ಸ್ವಾತಂತ್ರ್ಯ, ಹಸಿವಿನ ಸೂಚ್ಯಂಕ, ಪಾಸ್‌ಪೋರ್ಟ್ ರ್ಯಾಂಕಿಂಗ್ ಎಲ್ಲದರಲ್ಲೂ ಯಾವ ಸ್ಥಾನಮಾನದಲ್ಲಿದೆ ಎಂದು ಬಿಜೆಪಿಯವರು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದರು. ಸಚಿವರಿಗೆ ಔತಣ ಕೂಟ ಆಯೋಜಿಸಿರುವುದು ಹೊಸದೇನಲ್ಲ. ಪ್ರತಿ ವರ್ಷವೂ ಮುಖ್ಯಮಂತ್ರಿಯವರು ಈ ರೀತಿ ಸಭೆ ನಡೆಸುತ್ತಾರೆ. ಅಲ್ಲಿ ಚರ್ಚೆ ಮಾಡುವುದು ಸಾಮಾನ್ಯ ಎಂದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಶೇ. 80ರಷ್ಟು ಮುಗಿದಿದೆ. ಇದರಿಂದ ಮುಂದೆ ಉತ್ತಮ ಕೆಲಸಗಳಾಗುತ್ತವೆ. ಬಿಜೆಪಿಯವರು ಸಮಾಜ ಒಡೆಯುವ ಸಲುವಾಗಿ ಸಮೀಕ್ಷೆ ಮಾಡುತ್ತಿದ್ದಾರೆ ಎಂದು ಅನಗತ್ಯವಾಗಿ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಇಡಬ್ಲ್ಯೂಎಸ್ ಅಡಿ ಮೇಲ್ವರ್ಗದವರಿಗಾಗಿ ಶೇ. 10 ರಷ್ಟು ಮೀಸಲಾತಿ ನೀಡಿರುವುದರಿಂದ ಸಮಾಜ ಒಡೆದಂತಾಗಿಲ್ಲವೇ ಎಂದು ಪ್ರಶ್ನಿಸಿದರು.
ಇಡಬ್ಲ್ಯೂಎಸ್ ಜಾರಿಗೊಳಿಸುವಂತೆ ಯಾರಾದರೂ ಕೇಳಿದರೇ?, ಅರ್ಜಿ ಹಾಕಿದ್ದರೆ?, ಎಲ್ಲಿಯಾದರೂ ಒಂದು ಕಡೆ ಪ್ರತಿಭಟನೆಗಳಾಗಿದ್ದವೆ? ಎಂದು ಪ್ರಶ್ನಿಸಿದ ಅವರು ರಾತ್ರೋರಾತ್ರಿ ಇಡಬ್ಲ್ಯೂಎಸ್ ಜಾರಿಗೊಳಿಸಿದ್ದೇಕೆ? ಇದರ ಬಗ್ಗೆ ಬಿಜೆಪಿಯವರು ಎಲ್ಲಿಯಾದರು ಪ್ರಶ್ನೆ ಮಾಡಿದ್ದಾರೆಯೇ? ಇದು ದೇಶದ ಸಮಸ್ಯೆ ಅಲ್ಲವೇ ಎಂದು ಕಿಡಿ ಕಾರಿದರು.
ಒಡಿಶಾದಿಂದ ರಂಜಿತಾಪ್ರಿಯದರ್ಶಿನಿ ಎಂಬ ಯುವತಿ ತಮ ಸ್ನೇಹಿತೆ ಕವಿತಾರೆಡ್ಡಿ ಅವರ ಜೊತೆ ಸೈಕಲ್‌ಯಾತ್ರೆಯಲ್ಲಿ ಬಂದು ತಮಗೆ ಒಂದು ವರ್ಷದ ಹಿಂದೆ ಮನವಿ ಕೊಟ್ಟು ಋತು ಚಕ್ರ ಸಂದರ್ಭದಲ್ಲಿ ದುಡಿಯುವ ಮಹಿಳೆಯರಿಗೆ ವೇತನ ಸಹಿತ ರಜೆ ನೀಡುವಂತೆ ಮನವಿ ಮಾಡಿದರು. ಅದರ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಿಲಾಗಿತ್ತು. ವರದಿ ಆಧರಿಸಿ, ನಿಯಮ ರೂಪಿಸಲಾಗಿದ್ದು, ಕಾನೂನು ತಿದ್ದುಪಡಿ ತರಲಾಗುತ್ತಿದೆ. ಇದರಿಂದ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಬಿಗ್‌ಬಾಸ್ ಶೋ ನಡೆಸುತ್ತಿರುವ ಸ್ಟುಡಿಯೋದಲ್ಲಿ ಪರಿಸರ ಪಾಲನೆಯ ನಿಯಮಗಳ ಉಲ್ಲನೆಯಾಗಿತ್ತು. ಬಿಗ್‌ಬಾಸ್ ಶೋ ನಿಲ್ಲಿಸುವ ಉದ್ದೇಶ ಸರ್ಕಾರದ್ದಲ್ಲ. ನಟ್ಟುಬೋಲ್‌್ಟ ಹೇಳಿಕೆ ಹಳೆಯದಾಯಿತು. ಈಗ ಅದನ್ನು ಪ್ರಸ್ತಾಪಿಸುತ್ತಿರುವುದು ಅನಗತ್ಯ ಎಂದರು.
ಇಎಸ್‌ಐ ಯೋಜನೆಯಡಿ ವರ್ಷಕ್ಕೆ ಕೇಂದ್ರ ಸರ್ಕಾರಕ್ಕೆ 1200 ಕೋಟಿ ರೂ. ರಾಜ್ಯದಿಂದ ಹೋಗುತ್ತಿದೆ. ಅಲ್ಲಿಂದ ನಮಗೆ 400 ಕೋಟಿ ರೂ.ಗಳಿಗಿಂತಲೂ ಕಡಿಮೆ ಹಣ ಬರುತ್ತಿದೆ. ಹೆಚ್ಚಿನ ಹಣ ಪಡೆಯುವ ಸಲುವಾಗಿ ಇಎಸ್‌ಐ ಕಾರ್ಪೋರೇಷನ್ ರದ್ದುಗೊಳಿಸಿ, ಇಎಸ್‌ಐ ಸಂಸ್ಥೆಯನ್ನು ರಚಿಸಲಾಗಿದೆ. ಸಂಸದರು, ಕೇಂದ್ರ ಸಚಿವರಿಗೆ ಈ ವಿಚಾರವಾಗಿ ಪತ್ರ ಬರೆಯಲಾಗಿದೆ ಎಂದು ಹೇಳಿದರು.
50 ಸಾವಿರ ಕಾರ್ಮಿಕರು ಇರುವ ಕಡೆ ಇಎಸ್‌ಐ ಆಸ್ಪತ್ರೆ ಸ್ಥಾಪಿಸಬೇಕು ಎಂಬ ನಿಯಮ ಇದೆ. ಒಂದು ಜಿಲ್ಲೆಯಲ್ಲಿ ಅಗತ್ಯ ಸಂಖ್ಯೆಯ ನೋಂದಾಯಿತ ಕಾರ್ಮಿಕರು ಲಭ್ಯವಿಲ್ಲದಿದ್ದರೆ 2 ಜಿಲ್ಲೆಗಳನ್ನು ಸಂಯೋಜಿಸಿ, ಆಸ್ಪತ್ರೆ ನಿರ್ಮಿಸಿಕೊಡುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.