ಕೋಲ್ಕತ್ತಾ,ನ.10- ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಪಶ್ಚಿಮ ಬಂಗಾಳ ಬಿಜೆಪಿ ನಾಯಕನ ಶವ ಪತ್ತೆಯಾಗಿದೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಉಸ್ತಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಜೆಪಿ ನಾಯಕ ಪೃಥ್ವೀರಾಜ್ ನಸ್ಕರ್ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕೊಲೆಯನ್ನು ಆಡಳಿತಾರೂಢ ಟಿಎಂಸಿ ಪಕ್ಷದವರೇ ಮಾಡಿರಬಹುದು ಎಂದು ಬಿಜೆಪಿ ಅನುಮಾನ ವ್ಯಕ್ತಪಡಿಸಿದೆ. ಆದರೆ, ಪೊಲೀಸರು ಹತ್ಯೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರನ್ನು ಬಂಧಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ನಸ್ಕರ್ ಅವರ ರಕ್ತಸಿಕ್ತ ಶವ ಪತ್ತೆಯಾಗಿದೆ. ನವೆಂಬರ್ 5 ರಿಂದ ನಾಪತ್ತೆಯಾಗಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪೊಲೀಸರು ಕಚೇರಿಯ ಬಾಗಿಲನ್ನು ಒಡೆದು ಒಳಗೆ ಪ್ರವೇಶಿಸಿದ್ದಾರೆ. ಪಕ್ಷದ ಕಚೇರಿಯ ಗೇಟ್ ಅನ್ನು ಲಾಕ್ ಮಾಡಲಾಗಿತ್ತು. ಶಂಕಿತ ದುಷ್ಕರ್ಮಿ ಹಿಂಬಾಗಿಲ ಮೂಲಕ ಪರಾರಿಯಾಗಿರಬೇಕು ಎಂದು ಶಂಕಿಸಲಾಗಿದೆ.
ಪ್ರಾಥಮಿಕ ತನಿಖೆ ಬಳಿಕ ಮಹಿಳೆಯನ್ನು ವಿಚಾರಿಸಿದಾಗ ತಾನೇ ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಕತ್ಯಕ್ಕೆ ಯಾರಾದರೂ ನೆರವು ನೀಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಹತ್ಯೆಯ ನಂತರ ಬಿಜೆಪಿ ಮತ್ತು ಟಿಎಂಸಿ ನಡುವೆ ಮಾತಿನ ಚಕಮಕಿ ನಡೆದಿದೆ. ಪಕ್ಷದ ಜಿಲ್ಲಾ ಸಾಮಾಜಿಕ ಮಾಧ್ಯಮ ಸಂಚಾಲಕರನ್ನು ಟಿಎಂಸಿ ಗೂಂಡಾಗಳು ಅಪಹರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಹೇಳಿದೆ. ಸಹಾಯಕ್ಕಾಗಿ ಅವರ ಕುಟುಂಬದ ಹತಾಶ ಮನವಿಯನ್ನು ಪೊಲೀಸರು ನಿರ್ಲಕ್ಷಿಸಿದ್ದಾರೆ ಎಂದು ಹೇಳಿದ್ದಾರೆ.
ಟಿಎಂಸಿಯ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಸಭಾ ಸಂಸದ ಕುನಾಲ್ ಘೋಷ್ ಅವರು ನಸ್ಕರ್ ಅವರ ಸಾವಿನ ಹಿಂದಿನ ನಿಖರವಾದ ಕಾರಣ ಬಿಜೆಪಿಗೆ ತಿಳಿದಿದೆ ಆದರೆ ಟಿಎಂಸಿ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಪ್ರತಿ ಆರೋಪ ಮಾಡಿದ್ದಾರೆ.ದೇಹದ ಕೆಲವು ಭಾಗಗಳಲ್ಲಿನ ಗಾಯವು ವ್ಯಕ್ತಿಯ ಕಡೆಗೆ ಆಕ್ರಮಣಕಾರನ ದ್ವೇಷ ಮತ್ತು ತಿರಸ್ಕಾರವನ್ನು ತೋರಿಸಿದೆ ಎಂದು ಟಿಎಂಸಿ ನಾಯಕ ಹೇಳಿಕೊಂಡಿದ್ದಾರೆ.