ಆನೇಕಲ್,ಏ.18- ಹಣ ಪಡೆದು ವಂಚಿಸಿ ಹಲ್ಲೆ ನಡೆಸಿ ಕಿರುಕುಳ ನೀಡಿರುವರ ಬಗ್ಗೆ ಫೇಸ್ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಬಿಜೆಪಿ ಕಾರ್ಯಕರ್ತ ಇಲ್ಲಿನ ಖಾಸಗಿ ಶಾಲೆ ಬಳಿಯ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಡಂಕಣಿಕೋಟೆ ಮೂಲದ ಪ್ರವೀಣ್ ಕುಮಾರ್ (35) ಆತಹತ್ಯೆಗೆ ಶರಣಾದ ಯುವಕನಾಗಿದ್ದು ಈತ ಆನೇಕಲ್‌ನ ಸಪ್ತಗಿರಿ ಲೇಔಟ್‌ನಲ್ಲಿ ವಾಸವಾಗಿದ್ದರು.
ಫೇಸ್ಬುಕ್‌ನಲ್ಲಿ ತನಗಾದ ಅನ್ಯಾಯದ ಬಗ್ಗೆ ಹೇಳಿಕೊಂಡು ಅದನ್ನು ಇಂದು ಮುಂಜಾನೆ 3 ಗಂಟೆಯಲ್ಲಿ ಪೋಸ್ಟ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದಾರೆ. ಕಳೆದ ಎರಡು ತಿಂಗಳಿನಿಂದ ಮಾನಸಿಕವಾಗಿ ನೊಂದಿದ್ದೇನೆ. ನನ್ನ ಸಾವಿಗೆ 7 ಜನರು ಕಾರಣ ಎಂದು ವೀಡಿಯೋದಲ್ಲಿ ಆರೋಪಿಸಿದ್ದಾರೆ.
ಪೊಲೀಸರು, ಯಾರನ್ನೂ ಬಿಟ್ಟರೂ ಕಿರಣ್‌ನನ್ನು ದಯವಿಟ್ಟು ಬಿಡಬೇಡಿ. ಕಿರಣ್ ತುಂಬಾ ಹೆಣ್ಣುಮಕ್ಕಳಿಗೆ ಫೋನ್ ಮಾಡಿ ಟಾರ್ಚರ್ ಕೊಡುತ್ತಾನೆ. ಇವನು ಮಾಡಿರುವ ಅನಾಚಾರ ನನ್ನ ಮೇಲೆ ಬಂದಿದೆ.ನಾನು ನೀಡಿದ್ದ ಹಣದ ಮಾತುಕತೆಗೆ ಕರೆದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಏಕಾಏಕಿ ಹತ್ತಾರು ಮಂದಿಯನ್ನ ಕರೆಸಿ, ಮೊಬೈಲ್ ಕಿತ್ತುಕೊಂಡು 2 ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.ನಾನು ಸತ್ತ ಮೇಲೆ ನನ್ನ ದೇಹದ ಮೇಲಿರುವ ಗಾಯದ ಗುರುತನ್ನ ಪರಿಶೀಲಿಸಬೇಕು. ಪೊಲೀಸರು ನ್ಯಾಯ ದೊರಕಿಸಿ ಕೊಡಬೇಕೆಂದು ಮನವಿ ಮಾಡಿಕೊಂಡು, ಆತ್ಮಹತ್ಯೆಗೆ ಶರಣಾದ ಪ್ರವೀಣ್ ಅವರ ಸಹೋದರಿ ಸೌಮ್ಯ ಮಾತನಾಡಿ, ಶ್ವೇತಾ ಎಂಬಾಕೆಗೆ ಪ್ರವೀಣ್ ಸಾಲ ನೀಡಿದ್ದ. ಬಳಿಕ ಶ್ವೇತಾಗೆ ಹಣ ವಾಪಸ್ ಮಾಡುವಂತೆ ಕೇಳಿದ್ದ.
ಸಾಕಷ್ಟು ದಿನವಾದರೂ ಹಣ ನೀಡದೇ ಇದ್ದಾಗ ಮನೆ ಬಳಿ ಹೋಗಿ ಪ್ರವೀಣ್ ಕೇಳಿದ್ದ. ಶ್ವೇತಾ ಸಂಬಂಧಿಯಾಗಿದ್ದ ಪುರಸಭೆ ಸದಸ್ಯೆ ಭಾಗ್ಯಮ್ಮ ಶ್ರೀನಿವಾಸ್ ದುಡ್ಡಿನ ವಿಚಾರವಾಗಿ ಬಿಜೆಪಿ ಮುಖಂಡ ನಾಯನಹಳ್ಳಿ ಮುನಿರಾಜು ಗೌಡ ಮನೆಯಲ್ಲಿ ಮಾತುಕತೆಗೆ ಕರೆದಿದ್ದರು. ಈ ವೇಳೆ ಶ್ವೇತಾ ಕಡೆಯ ಇಪ್ಪತ್ತಕ್ಕೂ ಹೆಚ್ಚು ಮಂದಿ ಪ್ರವೀಣ್ ಫೋನ್ ಕಿತ್ತುಕೊಂಡು ಹಲ್ಲೆ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.