ಬೆಳಗಾವಿ,ಡಿ.5-ಬಿಜೆಪಿ ಕಾರ್ಯಕಾರಿಣಿ ಸದಸ್ಯ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಚಾಕು ಇರಿತ ಪ್ರಕರಣದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರ ಹಾಗೂ ವಿಧಾನಪರಿಷತ್ ಸದಸ್ಯ ಚೆನ್ನರಾಜ್ ಹಟ್ಟಿಹೊಳಿ ಅವರ ಕೈವಾಡ ಇರುವುದರಿಂದ ಕೂಡಲೇ ಪೊಲೀಸರು ಬಂಧಿಸಬೇಕೆಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲ್ಲೆ ನಡೆದ ಜಾಗದಲ್ಲಿ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಕಾರು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ತಮ್ಮ ಕೈವಾಡ ಇಲ್ಲ ಎನ್ನುವುದಾಗಿದ್ದರೆ ಅಲ್ಲಿ ವಾಹನ ಪತ್ತೆಯಾಗಿದ್ದು ಏಕೆ ಎಂದು ಪ್ರಶ್ನಿಸಿದರು. ಪ್ರಕರಣವನ್ನು ಮುಚ್ಚಿ ಹಾಕಲು ಸರ್ಕಾರ ವ್ಯವಸ್ಥಿತ ಪಿತೂರಿ ನಡೆಸಿದೆ. ಇದು ನಿಷ್ಪಕ್ಷಪಾತ ತನಿಖೆಯಾಗಬೇಕೆಂದರೆ ಕೂಡಲೇ ಚನ್ನರಾಜ್ ಹಟ್ಟಿಹೊಳಿ ಅವರನ್ನು ಬಂಧಿಸಬೇಕು ಎಂದು ಹೇಳಿದರು. ಈ ಪ್ರಕರಣದಲ್ಲಿ ಹಟ್ಟಿಹೊಳಿ ಜೊತೆ ಇನ್ನು ಇಬ್ಬರು ಅಂಗರಕ್ಷಕರು(ಗನ್‍ಮ್ಯಾನ್) ಶಾಮೀಲಾಗಿದ್ದಾರೆ.
ಅವರನ್ನು ಸಹ ಬಂಧಿಸಬೇಕು. ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕುವ ಕುತಂತ್ರವನ್ನು ಮಾಡಬಾರದು. ಅವರ ಮೇಲೆ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ಕೊಟ್ಟರು.ಆಸ್ಪತ್ರೆಯಲ್ಲಿ ಪೃಥ್ವಿ ಸಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಶಾಸಕರೂ ಆಗಿರುವ ಬಿ.ವೈ ವಿಜಯೇಂದ್ರ ಅವರು, ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರ ಗನ್ ಮ್ಯಾನ್‍ಗಳು ಹಲ್ಲೆ ಮಾಡಿದ್ದಾರೆ.
ಚಂಡಮಾರುತಕ್ಕೆ ಚೆನ್ನೈ ತತ್ತರ, 8 ಮಂದಿ ಸಾವು
ಗನ್ ಮ್ಯಾನ್ ಸುಜೀತ್ ಜಾಧವ್, ಎಂಎಲ್‍ಸಿ ಅವರ ಪಿಎ ಸದ್ದಾಂ ಅವರು ಪೃಥ್ವಿ ಮನೆಗೆ ಹೋಗಿ ಚೂರಿಯಿಂದ ಇರಿದಿದ್ದಾರೆ. ಮೊದಲು ಮನೆಯಲ್ಲಿದ್ದ ಪೃಥ್ವಿ ಸಿಂಗ್ ಅವರನ್ನು ಹೊರಗಡೆ ಕರೆಸಿ ಹಲ್ಲೆ ಮಾಡಲಾಗಿದೆ. ಈ ದೃಶ್ಯವನ್ನು ಪೃಥ್ವಿ ಸಿಂಗ್ ವಿಡಿಯೋ ರೆಕಾರ್ಡ್ ಮಾಡುವ ಪ್ರಯತ್ನ ಮಾಡಿದ್ದಾರೆ. ಬ್ಲಾಕ್ ಕಲರ್ ಕ್ರಿಷ್ಟಾ ಇನ್ನೊವಾ ಕಾರಿನಲ್ಲಿ ಚನ್ನರಾಜ್ ಹಟ್ಟಿಹೊಳಿ ಅವರೂ ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು. ಪೃಥ್ವಿ ಸಿಂಗ್ ಅವರನ್ನು ಹೊರಗೆ ಕರೆದು ಮಾತಿಗೆ ಮಾತು ಬೆಳೆಸಿ ಹಲ್ಲೆ ಮಾಡಲಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಚನ್ನರಾಜ ಹಟ್ಟಿಹೊಳಿ ಅವರು ಸಚಿವರಾಗಿರುವ ಮತ್ತು ಪ್ರಭಾವಿಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ. ಇಷ್ಟು ಪ್ರಭಾವ ಇದ್ದಿದ್ದರಿಂದಲೇ ಹಾಡು ಹಗಲೇ ಹಲ್ಲೆ ಮಾಡಿದ್ದಾರೆ. ಮಾರಣಾಂತಿಕ ಹಲ್ಲೆ ಮಾಡಿದ್ದು ಖಂಡನೀಯ. ರಾಜ್ಯ ಸರ್ಕಾರ ಇಡೀ ವ್ಯವಸ್ಥೆಯೇ ಇಲ್ಲಿದೆ. ಮುಖ್ಯಮಂತ್ರಿಗಳೂ ಇಲ್ಲಿದ್ದಾರೆ. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ವಿಧಾನ ಪರಿಷತ್ ಸದಸ್ಯರು ದರ್ಪ ತೋರಿದ್ದಾರೆ. ದಲಿತ ಮುಖಂಡನ ಮೇಲೆ ಹಲ್ಲೆ ಮಾಡಿದ್ದಾರೆ ಆರೋಪ ಮಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಖಾಲಿ ಹುದ್ದೆಗಳ ಶೀಘ್ರ ನೇಮಕ
ಇಲ್ಲಿರುವ ಪೊಲೀಸ್ ವ್ಯವಸ್ಥೆಯ ಬಗ್ಗೆ ನನಗೆ ನಂಬಿಕೆ ಇಲ್ಲ, ನಮ್ಮ ಮನೆಗೆ ರಾತ್ರೋರಾತ್ರಿ ಮನೆಗೆ ನುಗ್ಗುತಾರೆ, ಕೊಲೆ ಮಾಡುತ್ತಾರೆ ಎಂದು ಪ್ರಥ್ವಿ ಸಿಂಗ್ ಭಯದಲ್ಲಿದ್ದಾರೆ. ಪೊಲೀಸ್ ವ್ಯವಸ್ಥೆಯ ಬಗ್ಗೆ ನಮಗೆ ಎಳ್ಳಷ್ಟೂ ನಂಬಿಕೆಯಿಲ್ಲ, ಅಧಿಕಾರದ ದರ್ಪದಿಂದ ಸಚಿವರ ತಮ್ಮ ಯಾವ ರೀತಿ ನಡೆದುಕೊಂಡಿದ್ದಾನೆ ಎಂದು ಎಲ್ಲರೂ ನೋಡ್ತಿದ್ದಾರೆ. ಅಧಿಕಾರದ ಸೊಕ್ಕಿನಿಂದ ಮೆರೆಯುತ್ತಿರುವವರಿಗೆ ತಕ್ಕ ಪಾಠ ಆಗಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟಕ್ಕೆ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು,