ಕೊಪ್ಪಳ,ಅ.8– ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿ ನಡು ರಸ್ತೆಯಲ್ಲೇ ಬಿಜೆಪಿ ಯುವ ಮುಖಂಡನನ್ನುಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ (31) ಕೊಲೆಯಾದ ಮುಖಂಡ.ಇಂದು ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ವೆಂಕಟೇಶ್ ಅವರು ಸ್ನೇಹಿತರೊಂದಿಗೆ ಊಟ ಮಾಡಿಕೊಂಡು ದೇವಿ ಕ್ಯಾಂಪ್‌ನಿಂದ ಗಂಗಾವತಿಗೆ ಬೈಕ್‌ನಲ್ಲಿ ಬರುತ್ತಿದ್ದಾಗ ಕಾರಿನಲ್ಲಿ ದುಷ್ಕರ್ಮಿಗಳು ಹಿಂಬಾಲಿಸಿದ್ದಾರೆ.
ಕೊಪ್ಪಳ ರಸ್ತೆಯ ಲೀಲಾವತಿ ಆಸ್ಪತ್ರೆ ಮುಂದೆಯೇ ವೆಂಕಟೇಶ್ ಬೈಕ್‌ಗೆ ಕಾರಿನಿಂದ ಡಿಕ್ಕಿ ಹೊಡೆಸಿ ಕಾರಿನಿಂದ ಆರೇಳು ಮಂದಿ ಮಾರಕಾಸ್ತ್ರಗಳೊಂದಿಗೆ ಹೊರ ಬಂದು ವೆಂಕಟೇಶ್ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸುದ್ದಿ ತಿಳಿದು ಡಿವೈಎಸ್‌ಪಿ ಸಿದ್ದನಗೌಡ ಪಾಟೀಲ್ ಹಾಗೂ ಗಂಗಾವತಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ವೆಂಕಟೇಶ್ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹಳೇ ವೈಷಮ್ಯವೇ ಕೊಲೆಗೆ ಕಾರಣವಾಗಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.ಗಂಗಾವತಿನಗರ ಠಾಣೆ ಪೊಲೀಸರು ವೆಂಕಟೇಶ್ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಗಂಗಾವತಿ ನಗರ ಠಾಣೆ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ಶೋಧ ಮುಂದುವರೆಸಿದ್ದಾರೆ.ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.ಕಾರು ಪತ್ತೆ: ಈ ನಡುವೆ ದುಷ್ಕರ್ಮಿಗಳು ಕೊಲೆಗೆ ಬಳಸಿದ್ದ ಟಾಟಾ ಇಂಡಿಕಾ ಕಾರು ಗಂಗಾವತಿಯ ಹೆಚ್‌ಎಸ್‌ಆರ್ ಕಾಲೋನಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದಿದ್ದಾರೆ.
ಹಳೇ ದ್ವೇಷ ಶಂಕೆ:ವೆಂಕಟೇಶ್ ಕೊಲೆ ಹಿಂದೆ ಹಳೇ ದ್ವೇಷವಿರುವ ಶಂಕೆ ವ್ಯಕ್ತವಾಗಿದೆ. ವೆಂಕಟೇಶ್ ಸ್ನೇಹಿತರು ರವಿ ಎಂಬಾತನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ವೆಂಕಟೇಶ್ ಹಾಗೂ ರವಿ ಮಧ್ಯೆ ಕಳೆದ ಏಳೆಂಟು ವರ್ಷಗಳಿಂದ ದ್ವೇಷವಿದ್ದು, ನಾಯಕತ್ವದ ವಿಚಾರದಲ್ಲಿ ಇಬ್ಬರ ನಡುವೆ ವೈಷಮ್ಯ ಮೂಡಿತ್ತು ಎಂದು ಹೇಳಲಾಗುತ್ತಿದೆ.
ಏರಿಯಾ ಕಂಟ್ರೋಲ್ ವಿಚಾರಕ್ಕೂ ಈ ಇಬ್ಬರ ನಡುವೆ ಭಿನ್ನಾಭಿಪ್ರಾಯವಿತ್ತು ಎಂಬ ಮಾತು ಕೇಳಿಬರುತ್ತಿದೆ.ಒಟ್ಟಾರೆ ಬಿಜೆಪಿ ಯುವ ಮುಖಂಡನ ಬರ್ಬರ ಹತ್ಯೆ ಗಂಗಾವತಿ ನಗರದ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.