ಬೆಂಗಳೂರು,ಏ.8- ಬಿಜೆಪಿ ಮಾಡಬೇಕಿರುವುದು ಕ್ಷಮೆಯಾಚನೆ ಯಾತ್ರೆ ಹೊರತು ಜನಾಕ್ರೋಶ ಯಾತ್ರೆಯಲ್ಲ, ಏಕೆಂದರೆ ಜನರ ಆಕ್ರೋಶಕ್ಕೆ ಗುರಿಯಾಗಿರುವುದು ಸ್ವತಃ ಬಿಜೆಪಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರು ಈಗ ಎಲ್ಲಿ ಜನಾಕ್ರೋಶ ಪ್ರತಿಭಟನೆ ಕೈಗೊಳ್ಳುತ್ತಾರೆ. ಪ್ರಧಾನಿ ಕಚೇರಿ ಮುಂದೆಯೋ? ಕೇಶವ ಕೃಪಾದ ಎದುರೋ ಅಥವಾ ಜಂತರ್ ಮಂಥರ್‌ನಲ್ಲೋ? ಎಂದು ಪ್ರಶ್ನಿಸಿದ್ದಾರೆ. ಮತ್ತೆ 50 ರೂ. ಏರಿಕೆಯಾದ ಅಡುಗೆ ಅನಿಲದ ಬೆಲೆಯನ್ನು ಮತ್ತೆ ಏರಿಕೆಯಾದ ಟೋಲ್ ಶುಲ್ಕವನ್ನು, ಮತ್ತೆ ಏರಿಕೆಯಾದ ಇಂಧನ ತೈಲಗಳ ಸುಂಕವನ್ನು ಎಲ್ಲಿ ನಿಂತು ಪ್ರಶ್ನಿಸುತ್ತಾರೆ? ಎಂದು ಕೇಳಿದ್ದಾರೆ.
ಹಿಂದೆ ಕೇಂದ್ರ ಸರ್ಕಾರ ಇಂಧನ ತೈಲಗಳ ಬೆಲೆ ಏರಿಸಿದಾಗ ಪೆಟ್ರೋಲ್ ರೇಟ್ ಸಾವಿರ ಆಗಲಿ, ಬೈಕ್ ಮಾರಾಟ ಮಾಡಿ ಮೋದಿಗೆ ಓಟ್ ಹಾಕುತ್ತೇನೆ ಎನ್ನುವ 2 ರುಪೀಸ್ ಕ್ಯಾಂಪೇನ್ ಮಾಡಿತ್ತು ಬಿಜೆಪಿ ಎಂದರಲ್ಲದೆ, ಬೆಲೆ ಏರಿಕೆ ಎನ್ನುವವರು ಪಾಕಿಸ್ತಾನಕ್ಕೆ ಹೋಗಿ ಎಂದೂ ಬಿಜೆಪಿ ಶಾಸಕರೊಬ್ಬರು ಹೇಳಿದ್ದರು ಎಂದರು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ತೈಲಗಳ ಬೆಲೆ ಗಣನೀಯ ಕುಸಿತ ಕಂಡಿದ್ದಾಗಲೂ ಸಹ ಭಾರತದಲ್ಲಿ ಇಂಧನ ತೈಲಗಳ ಬೆಲೆಯನ್ನು ಗರಿಷ್ಠ ಮಟ್ಟಕ್ಕೇರಿಸಿದ ಕೇಂದ್ರ ಸರ್ಕಾರದ ಟ್ಯಾಕ್ಸ್ ಟೆರರಿಸಂನ್ನು ಜನರೆದುರು ಸಮರ್ಥಿಸುವರೇ? ಎಂದು ಪ್ರಶ್ನಿಸಿದ್ದಾರೆ.
400 ರೂ.ಗಳ ಆಸುಪಾಸಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಈಗ 900 ರೂ. ಸಮೀಪಕ್ಕೆ ತಂದಿರುವ ಬಗ್ಗೆ ಜನರಲ್ಲಿರುವ ಆಕ್ರೋಶಕ್ಕೆ ಕ್ಷಮೆ ಕೇಳುವರೇ? ಎಂದು ಕಿಡಿಕಾರಿದ್ದಾರೆ.
ಜನಾಕ್ರೋಶ ಯಾತ್ರೆ ಹೊರಟಿರುವ ಬಿಜೆಪಿ ನಾಯಕರು ಈಗ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಸಮರ್ಥಿಸುವುದೋ ಅಥವಾ ಯಾತ್ರೆಯನ್ನು ಕೈಬಿಡುವುದೋ ಎಂಬ ಜಿಜ್ಞಾಸೆಯಲ್ಲಿದ್ದಾರೆ ಎಂದಿದ್ದಾರೆ.
ಮೋದಿ ಬೆಲೆ ಏರಿಕೆ ಮಾಡಿದರೆ ಮಾಸ್ಟರ್ ಸ್ಟೋಕ್, ಮೋದಿಯ ಆನರ್ಥ ನೀತಿಯಿಂದಾಗಿ ಬೇರೆಯವರು ಅನಿವಾರ್ಯವಾಗಿ ಬೆಲೆ ಏರಿಸಿದರೆ ಮಹಾಪರಾಧ ಎಂಬ ಧೋರಣೆಯ ಬಿಜೆಪಿಯ ಡಬಲ್ ಸ್ಟ್ಯಾಂಡರ್ಡ್ ದುರ್ಬುದ್ದಿಗೆ ಜನತೆ ಸೊಪ್ಪು ಹಾಕುವುದಿಲ್ಲ ಎಂದು ತಿಳಿಸಿದ್ದಾರೆ..