ಬೆಂಗಳೂರು,ಏ.7- ಹಾಲು, ವಿದ್ಯುತ್ ದರ ಏರಿಕೆ ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಮತ್ತು ಬೆಲೆ ಏರಿಕೆ ವಿಪರೀತವಾಗಿದೆ ಎಂದು ಆರೋಪಿಸಿ ಬಿಜೆಪಿ ಆಯೋಜಿಸಿರುವ 16 ದಿನಗಳ ಜನಾಕ್ರೋಶ ಯಾತ್ರೆಯು ಇಂದಿನಿಂದ ಮೈಸೂರಿನಲ್ಲಿ ಚಾಲನೆ ನೀಡಿಲಾಗಿದ್ದು, ಸರ್ಕಾರದ ವಿರುದ್ದ ರಣಕಹಳೆಯನ್ನು ಮೊಳಗಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಅಧಿಕೃತ ವಿರೋಧ ಪಕ್ಷವಾದ ಬಿಜೆಪಿ ದೊಡ್ಡ ಮಟ್ಟದಲ್ಲಿ ಜನಾಂದೋಲನ ರೂಪಿಸಿರುವುದು ಇದೇ ಮೊದಲು. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬವರು ಮೂಡಾದಲ್ಲಿ ಕಾನೂನುಬಾಹಿರವಾಗಿ ನಿವೇಶನ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಹಾಗೂ ಜೆಡಿಎಸ್ ಬೆಂಗಳೂರಿನಿಂದ ಮೈಸೂರಿನವರೆಗೆ ಜಂಟಿ ಪಾದಯಾತ್ರೆಯನ್ನು ನಡೆಸಿದ್ದರು. ಆದರೆ, ಈಗ ಬಿಜೆಪಿಯೊಂದೇ ಏಕಾಂಗಿಯಾಗಿ ಸರ್ಕಾರದ ವಿರುದ್ದ ಬೃಹತ್ ಪ್ರಮಾಣದಲ್ಲಿ ಬೀದಿಗಿಳಿದು ಹೋರಾಟಕ್ಕೆ ಧುಮುಕಿರುವುದು ವಿಶೇಷವಾಗಿದೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಾಡಿನ ಅಧಿದೇವತೆ ಚಾಮುಂಡಿಕ್ಕೇರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜನಾಕ್ರೋಶ ಯಾತ್ರೆಗೆ ಚಾಲನೆ ನೀಡಿದರು. ಪಕ್ಷದ ಅಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಬಿ. ಶ್ರೀರಾಮುಲು, ಬೈರತಿ ಬಸವರಾಜು, ಸಿ.ಟಿ. ರವಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಹಾಲಿ ಸಂಸದ ಯದವೀರ ಒಡೆಯರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸೆಂಟ್ರಲ್ ಪೋಸ್ಟ್ ಆಫೀಸ್ ವೃತ್ತದಿಂದ ಅಶೋಕ ಮಾರ್ಗವಾಗಿ ಗಾಂಧಿ ಚೌಕದವರೆಗೆ ಪಾದಯಾತ್ರೆ ನಡೆಸಲಾಯಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದರು. ಗಾಂಧಿ ಚೌಕದ ಬಳಿ ತೆರೆದ ವಾಹನದಲ್ಲಿ ನಾಯಕರು ಜನರನ್ನುದ್ದೇಶಿಸಿ ಮಾತನಾಡಿದರು. ಬೆಲೆ ಏರಿಕೆ ಮಾತ್ರವಲ್ಲದೆ, ಮುಸ್ಲಿಂ ಓಲೈಕೆ, ದಲಿತರ ಹಣ ಲೂಟಿ, ರೈತರನ್ನು ಕಡೆಗಣಿಸಿದ ಭ್ರಷ್ಟ ಕಾಂಗ್ರೆಸ್ ಸರಕಾರ ಎಂದು ಆರೋಪಿಸಿರುವ ಬಿಜೆಪಿ ಏ. 7 ರಿಂದ ಮೇ 3 ರವರೆಗೆ ಅಂದರೆ 16 ದಿನಗಳ ಕಾಲ ಒಟ್ಟು 4 ಹಂತಗಳ ಹೋರಾಟವನ್ನು ರೂಪಿಸಿದೆ.
ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಿಂದಲೇ ಚಾಲನೆ ನೀಡುತ್ತಿದೆ. ಬೆಂಗಳೂರಿನಲ್ಲಿ ಹೋರಾಟವನ್ನು ಕೊನೆಗೊಳಿಸಲಿದೆ. ಅಷ್ಟರಲ್ಲಿ ತಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎನ್ನುವ ಎಚ್ಚರಿಕೆಯನ್ನೂ ನೀಡಿದೆ.
ಯಾಕೆ ಜನಾಕ್ರೋಶ ಯಾತ್ರೆ ? :
ಒಟ್ಟು ನಾಲ್ಕು ಹಂತಗಳಲ್ಲಿ ಯಾತ್ರೆ ನಡೆಯಲಿದೆ. ಏಪ್ರಿಲ್ 7ರಿಂದ 10ರವರೆಗೆ ಮೊದಲ ಹಂತದಲ್ಲಿ ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು, ಮಂಗಳೂರು, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಯಾತ್ರೆ ನಡೆಯಲಿದೆ. ಏಪ್ರಿಲ್ 13ರಿಂದ 18ರವರೆಗೆ ಎರಡನೇ ಹಂತದಲ್ಲಿ ಶಿವಮೊಗ್ಗ, ಉತ್ತರ ಕನ್ನಡ, ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಯಾತ್ರೆ ನಡೆಯಲಿದೆ.
ಏಪ್ರಿಲ್ 21ರಿಂದ 24ರವರೆಗೆ ಮೂರನೇ ಹಂತದಲ್ಲಿ ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಕೊಪ್ಪಳ, ಗದಗ, ಹಾವೇರಿ, ದಾವಣಗೆರೆ ಹಾಗೂ ಏ.27ರಿಂದ ಮೇ 3ರವರೆಗೆ ನಾಲ್ಕನೇ ಹಂತದಲ್ಲಿ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಯಾತ್ರೆ ಸಾಗಲಿದೆ.
ರಾಜ್ಯದಲ್ಲಿ ಕಳೆದ ಇಪ್ಪತ್ತು ತಿಂಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬೆಲೆ ಏರಿಕೆ ನಿರಂತರವಾಗಿದೆ. ಸಾಮಾನ್ಯ ಜನರಿಗೆ ಬರೆ ಎಳೆಯುವ ಕೆಲಸವಾಗುತ್ತಿದೆ. ದುಬಾರಿ ಜೀವನವನ್ನು ನಾಡಿನ ಜನ ನಡೆಸುವ ದುಸ್ಥಿತಿ ಕಾಂಗ್ರೆಸ್ ಸರ್ಕಾರ ನಿರ್ಮಾಣ ಮಾಡಿದೆ. ಉಸಿರಾಡುವ ಗಾಳಿ ಬಿಟ್ಟರೆ ಉಳಿದ ಎಲ್ಲವುಗಳ ಬೆಲೆ ಏರಿಕೆ ನಿರಂತರವಾಗಿದೆ.
ಮತದಾರರಿಗೆ ವರದಾನ ಆಗುವ ಬದಲು ಸರ್ಕಾರ ಶಾಪಗ್ರಸ್ಥವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ವಿದ್ಯುತ್ ದರ ಏ. 1ರಿಂದ ಪ್ರತಿ ಯೂನಿಟ್‌ಗೆ 36 ಪೈಸೆ ಜಾಸ್ತಿ ಮಾಡಿದ್ದಾರೆ. ಹಾಲಿನ ದರ ನಾಲ್ಕು ರೂಪಾಯಿ ಜಾಸ್ತಿ ಮಾಡಿದ್ದಾರೆ. ಈಗಾಗಲೇ ಮೂರನೇ ಬಾರಿ ಜಾಸ್ತಿ ಮಾಡುತ್ತಿದ್ದಾರೆ. ಆಸ್ಪತ್ರೆಗಳಲ್ಲೂ ಚಿಕಿತ್ಸೆ ದರ ಜಾಸ್ತಿ ಮಾಡಿದ್ದಾರೆ. ಬಡವರು, ಗ್ರಾಮೀಣ ಭಾಗದಲ್ಲಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಜನರಿಗೂ ಬರೆ ಎಳೆಯುತ್ತಿದೆ. ಅಫಿಡವಿಟ್, ಮುದ್ರಾಂಕ ಶುಲ್ಕ, ವೃತ್ತಿಪರ ತೆರಿಗೆ, ಬಸ್ ದರ ಜಾಸ್ತಿ ಮಾಡಿದ್ದಾರೆ. ರಾಜ್ಯದ ಜನತೆಯ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನಡೆಯನ್ನು ಖಂಡಿಸಿ ಜನಾಕ್ರೋಶ ಯಾತ್ರೆಯನ್ನು ನಡೆಸುತ್ತಿದೆ.
38,060 ಕೋಟಿ ರೂ. ಎಸ್‌ಸಿಟಿಪಿಎಸ್ ಹಣ ದುರುಪಯೋಗವಾಗಿದೆ. ಇದನ್ನು ನಾವು ಖಂಡಿಸುತ್ತಿದ್ದೇವೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಎರಡು ಪ್ರಮುಖ ಹೋರಾಟ ಮಾಡುತ್ತೇವೆ. ಏ. 7ರಂದು ಮೈಸೂರು ಭಾಗದಲ್ಲಿ ಹೋರಾಟ ನಡೆಯುತ್ತದೆ. 8ರಂದು ಮಂಡ್ಯ, 9ರಂದು ಕೊಡಗು, ಮಂಗಳೂರು, 10ರಂದು ಉಡುಪಿ, ಚಿಕ್ಕಮಗಳೂರಿನಲ್ಲಿ ಹೋರಾಟ ಮಾಡುತ್ತೇವೆ. 2ನೇ ಹಂತದ ಹೋರಾಟ ಶಿವಮೊಗ್ಗದಿಂದ 13ರಂದು ಆರಂಭವಾಗುತ್ತದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತೇವೆ. ಕಾಂಗ್ರೆಸ್‌ನವರು ಮುಸ್ಲಿಂ ಒಲೈಕೆಗಾಗಿ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಯಾತ್ರೆಗೆ ಚಾಲನೆ
ಮೈಸೂರಿನಲ್ಲಿ ಇಂದು ಮಧ್ಯಾಹ್ನ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ 3 ಗಂಟೆ ನಂತರ ಭ್ರಷ್ಟ- ಜನವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಜನಾಕ್ರೋಶ ಯಾತ್ರೆಗೆ ಕೇಂದ್ರದ ಸಚಿವ ಪ್ರಲ್ಟಾದ್ ಜೋಶಿ ಅವರು ಚಾಲನೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾತ್ರೆಯಲ್ಲಿ ನಮ್ಮ ಪಕ್ಷದ ಎಲ್ಲ ಹಿರಿಯ ಮುಖಂಡರು ಭಾಗವಹಿಸುತ್ತಾರೆ. ಜನಾಕ್ರೋಶ ಯಾತ್ರೆ 4 ಹಂತಗಳಲ್ಲಿ ನಡೆಯಲಿದೆ. ಇವತ್ತು ಮೈಸೂರು, ನಾಳೆ ಮಂಡ್ಯ, ಹಾಸನ, ನಾಡಿದ್ದು ಮಡಿಕೇರಿ, ಮಂಗಳೂರು- ಹೀಗೆ ಪ್ರತಿ ಜಿಲ್ಲಾ ಕೇಂದ್ರಗಳಿಗೆ ನಮ್ಮ ಜನಾಕ್ರೋಶ ಯಾತ್ರೆ ತೆರಳುತ್ತದೆ ಎಂದರು.
ಅಯೋಗ್ಯ ಕಾಂಗ್ರೆಸ್ ಸರಕಾರದ ಬೆಲೆ ಏರಿಕೆ, ಮುಸ್ಲಿಮರಿಗೆ ಸರಕಾರಿ ಕಾಮಗಾರಿಗಳಲ್ಲಿ ಮೀಸಲಾತಿ, ದಲಿತರ ಅಭ್ಯುದಯಕ್ಕೆ ಮೀಸಲಿಟ್ಟ ಎಸ್‌ಇಪಿ, ಟಿಎಸ್ ಪಿ ಹಣದ ವಿಚಾರದಲ್ಲಿ ದೋಖಾ ಸೇರಿ ಜನವಿರೋಧಿ ನೀತಿಯನ್ನು ರಾಜ್ಯದ ಜನರಿಗೆ ತಿಳಿಸುತ್ತೇವೆ. ಬಿಜೆಪಿ- ಜೆಡಿಎಸ್ ಮಧ್ಯೆ ಒಡಕಿಲ್ಲ, ಇದು ನಮ್ಮ ಪಕ್ಷದ ಹೋರಾಟ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.
ನಮ್ಮ ಹೋರಾಟಕ್ಕೆ ಆಡಳಿತ ಪಕ್ಷದವರು ಗೌರವ ಕೊಡಬೇಕೆಂದು ನಿರೀಕ್ಷೆ ಮಾಡುವ ದಡ್ಡರು ನಾವಲ್ಲ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಬಿಜೆಪಿ ಈಗ ವಿಶ್ವದ ಅತಿ ದೊಡ್ಡ ಪಕ್ಷವೆನಿಸಿದೆ. ದೇಶದಲ್ಲಿ 400ಕ್ಕೂ ಹೆಚ್ಚು ಸಂಸದರಿದ್ದ ಕಾಂಗ್ರೆಸ್ ಪಕ್ಷಕ್ಕೆ ಇವತ್ತು ಎಂಥ ಪರಿಸ್ಥಿತಿ ಬಂದಿದೆ. ಬಿಜೆಪಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿಲ್ಲ. ಬಿಜೆಪಿ ಸುಭದ್ರವಾಗಿದೆ ಎಂದು ತಿರುಗೇಟು ನೀಡಿದರು.