ಬೆಂಗಳೂರು,ಡಿ.3- ಇತ್ತೀಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಸೋಲು, ಸದಸ್ಯತ್ವ ನೋಂದಣಿ, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ಪಕ್ಷ ಬಲವರ್ಧನೆ ಸೇರಿದಂತೆ ಕೆಲವು ಮಹತ್ವದ ಬೆಳವಣಿಗೆಗಳ ಕುರಿತು ಬಿಜೆಪಿ ಸಂಘಟನಾ ಪರ್ವ ಸಭೆ ಜರುಗಿತು.
ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ದಿನಪೂರ್ತಿ ಸಭೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್, ಕರ್ನಾಟಕ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಪ್ರಮುಖವಾಗಿ ಪ್ರಾಥಮಿಕ ಸಕ್ರಿಯ ಸದಸ್ಯತ್ವ ಸಮಿತಿಗಳು, ಜಿಲ್ಲಾಧ್ಯಕ್ಷರು, ಬೂತ್ ಮಂಡಲ ಅಧ್ಯಕ್ಷರು, ಜಿಲ್ಲಾಧ್ಯಕ್ಷರು, ಜಿಲ್ಲಾ ಸಮಿತಿಯ ಪುನರ್ರಚನೆಯ ಪದಾಧಿಕಾರಿಗಳು ಸೇರಿದಂತೆ 30 ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು.
ಸಂಘನಟೆ ಪ್ರಬಲವಾಗಿರುವ ಶಿಗ್ಗಾವಿ ಮತ್ತು ಸಂಡೂರಿನಲ್ಲಿ ಪಕ್ಷದ ಸೋಲಿಗೆ ಕಾರಣಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರು ಪ್ರತಿನಿಧಿಸುವ ಶಿಗ್ಗಾವಿಯಲ್ಲಿ ಪಕ್ಷದ ಅಭ್ಯರ್ಥಿ ಸೋಲಪ್ಪಿರುವುದು ಸಮರ್ಥನೀಯವಲ್ಲ ಎಂದು ತರುಣ್ಚುಗ್ ಅಸಮಾಧಾನ ಹೊರಹಾಕಿದ್ದಾರೆ.
ನಮ ಕ್ಷೇತ್ರವನ್ನೇ ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕಾರ್ಯಕರ್ತರಿಗೆ ಯಾವ ಸಂದೇಶವನ್ನು ನೀಡಿದಂತಾಗುತ್ತದೆ. ಮುಖ್ಯಮಂತ್ರಿಗಳು ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಹೇಗೆ? ಇದಕ್ಕೆ ವರದಿ ನೀಡಬೇಕೆಂದು ಸೂಚನೆ ನೀಡಿರುವುದಾಗಿ ತಿಳಿದುಬಂದಿದೆ.
ಸಂಡೂರಿನಲ್ಲಿ ಪಕ್ಷ ಸೋತರೂ ಮತ ಗಳಿಕೆ ಪ್ರಮಾಣ ಹೆಚ್ಚಾಗಿರುವುದಕ್ಕೆ ತರುಣ್ ಚುಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದಿಷ್ಟು ಸಂಘಟಿತ ಪ್ರಯತ್ನಪಟ್ಟಿದ್ದರೆ ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಈ ಕ್ಷೇತ್ರವನ್ನು ನಾವು ಗೆಲ್ಲಬಹುದಿತ್ತು. ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂಬರುವ ಚುನಾವಣೆಗೆ ಸಂಘಟೆಯನ್ನು ಪ್ರಬಲಪಡಿಸುವಂತೆ ಸೂಚನೆ ನೀಡಿದ್ದಾರೆ.
ಇನ್ನು ಬಿಜೆಪಿ ಸಂಘಟನೆ ಸದಸ್ಯತ್ವ ಅಭಿಯಾನ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಕನಿಷ್ಟ ಪಕ್ಷ ಒಂದು ಕೋಟಿಯಾದರೂ ಹೊಸ ಸದಸ್ಯರನ್ನು ಗುರುತಿಸಬೇಕಿತ್ತು. ಕೇವಲ 60ರಿದ 70 ಲಕ್ಷಕ್ಕೆ ನೋಂದಣಿ ಸೀಮಿತವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ನಮ ನಿರೀಕ್ಷೆಗೂ ಮೀರಿ ಸದಸ್ಯತ್ವ ನೋಂದಣಿಯಾಗುತ್ತಿರುವಾಗ ಕರ್ನಾಟಕದಲ್ಲಿ ಮಾತ್ರ ಹಿನ್ನಡೆ ಏಕೆ ಆಗಿದೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಪ್ರಶ್ನಿಸಿದ್ದಾರೆ.
ಡೆ ಪಕ್ಷ ಈ ವರ್ಷದ ಅಂತ್ಯಕ್ಕೆ ಕರ್ನಾಟಕದಿಂದ ಹೊಸದಾಗಿ ಒಂದು ಕೋಟಿ ಸದಸ್ಯರು ಪಕ್ಷದ ನೋಂದಣಿ ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮೋದಿ ನಾಯಕತ್ವ, ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಎಂದು ಸಲಹೆ ಮಾಡಿದ್ದಾರೆ.
ಡಿ.7 ಕ್ಕೆ ಕೋರ್ ಕಮಿಟಿ ಸಭೆ:
ಇನ್ನು 3 ಕ್ಷೇತ್ರಗಳಲ್ಲಾದ ಸೋಲಿನ ಪರಾಮರ್ಶೆ ನಡೆಸುವ ನಿಟ್ಟಿನಲ್ಲಿ ಡಿಸೆಂಬರ್ 7 ರಂದು ಬಿಜೆಪಿ ಕೋರ್ ಕಮಿಟಿ ಸಭೆಯನ್ನು ಹಮಿಕೊಳ್ಳಲಾಗಿದೆ. ಕೋರ್ ಕಮಿಟಿ ಸಭೆಯಲ್ಲಿ ಪಕ್ಷದಲ್ಲಿ ಆಂತರಿಕವಾಗಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಅದರಿಂದ ಬೀರುತ್ತಿರುವ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಲ್ಲದೆ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿಕೊಂಡು ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಯಾವ ರೀತಿಯಲ್ಲಿ ಹೋರಾಟವನ್ನು ಸಂಘಟನೆ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ.
ಹೈಕಮಾಂಡ್ ನಡೆ ಕುತೂಹಲ:
ಇನ್ನು 3 ಕ್ಷೇತ್ರಗಳಲ್ಲಿ ಸೋಲು, ಆಂತರಿಕ ಭಿನ್ನಮತದಿಂದ ನಲುಗಿರುವ ಬಿಜೆಪಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಹೈಕಮಾಂಡ್ ನಾಯಕರು ಯಾವ ನಡೆ ಅನುಸರಿಸಲಿದ್ದಾರೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ. ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ಗೆ ಯತ್ನಾಳ್ ವಿರುದ್ಧ ದೂರು ನೀಡಿದ್ದರು. ಆದರೆ ಯಾವುದೇ ಹೆಜ್ಜೆಯನ್ನು ಹೈಕಮಾಂಡ್ ಇಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಹೈಕಮಾಂಡ್ ನಡೆ ಏನಾಗಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯ ಬಿಜೆಪಿಯಲ್ಲಿ ಬಿ.ವೈ.ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಬಣದ ನಡುವಿನ ತಿಕ್ಕಾಟ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದಂತೆ, ಕೊನೆಗೂ ಎಚ್ಚೆತ್ತಿರುವ ಬಿಜೆಪಿ ವರಿಷ್ಠರು ಈ ಬಡಿದಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೆರಿರುವ ಬಗ್ಗೆ ಮಾಹಿತಿ ಕೆಲಹಾಕಲು, ನಾಯಕರೊಂದಿಗೆ ಸಭೆ ನಡೆಸಲು ಡಿಸೆಂಬರ್ 3ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೂಚನೆ ಮೇರೆಗೆ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್ ಹಾಗೂ ತರುಣ್ ಚುಗ್ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ.
ಯತ್ನಾಳ್ ಅವರ ಪ್ರಮುಖ ಬೇಡಿಕೆಯಾದ ರಾಜ್ಯಾಧ್ಯಕ್ಷರ ಬದಲಾವಣೆ ಸಂಬಂಧ ಒಂದಷ್ಟು ತೀರ್ಮಾನ ಕೈಗೊಂಡಿದ್ದು, ಹಾಲಿಯಿರುವ ಕೆಲವು ಪದಾಧಿಕಾರಿಗಳನ್ನು ಕೈಬಿಟ್ಟು ಬಿಜೆಪಿ ಹಾಗೂ ಸಂಘ ಪರಿವಾರದ ನಿಷ್ಠೆ ಹೊಂದಿರುವವರನ್ನು ನೇಮಕ ಮಾಡಿಕೊಳ್ಳುವುದು ಹಾಗೂ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಸಮನ್ವಯ ಸಾಧಿಸಲು ಅವರು ಪ್ರಯತ್ನ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಭೆಯಲ್ಲಿ ರಾಜ್ಯದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಷ್ಟ್ರಿಯ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಸೇರಿದಂತೆ ಎರಡೂ ಬಣದ ಪ್ರಮುಖರು ಭಾಗಿಯಾಗಲಿರೆ. ಬಣ ರಾಜಕೀಯದೊಂದಿಗೆ ಬೆಳಗಾವಿಯಲ್ಲಿ ಡಿಸೆಂಬರ್ 9ರಿಂದ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಸಭೆ ನಡೆಯಲಿದೆ ಎಂದು ಹೇಳಲಾಗುತ್ತದೆ.
ಅಲ್ಲದೆ ಇತ್ತೀಚೆಗೆ ನಡೆದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಎರಡು ಕಡೆ ಸೋತಿದ್ದರೆ, ಮಿತ್ರ ಪಕ್ಷ ಜೆಡಿಎಸ್ ಕೂಡ ಚನ್ನಪಟ್ಟಣದಲ್ಲಿ ಪರಾಭವಗೊಂಡಿದೆ. ಪದಾಧಿಕಾರಿಗಳ ಬದಲಾವಣೆ ಮಾಡಬೇಕೆಂಬ ಬೇಡಿಕೆ ಕೇಳಿಬರುತ್ತಿರುವುದರಿಂದ ಪಕ್ಷ ಸಂಘಟಿಸುವ ಕುರಿತು ಕೋರ್ ಕಮಿಟಿಯಲ್ಲಿ ಚರ್ಚಿಸಲಾಗುತ್ತಿದೆ ಎನ್ನಲಾಗಿದೆ. ಪದಾಧಿಕಾರಿಗಳ ಬದಲಾವಣೆ ಮಾಡುವ ಕುರಿತು ಈಗಾಗಲೇ ಸುಳಿವು ಕೊಟ್ಟಿರುವ ವಿಜಯೇಂದ್ರ, ಆ ಬಣ ಈ ಬಣ ಎನ್ನದೆ ಪಕ್ಷಕ್ಕೆ ನಿಷ್ಠರಾಗಿರುವನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವ ಸಂಭವವಿದೆ. ಬಿಜೆಪಿಯೊಳಗೆ ನಡೆಯುತ್ತಿರುವ ಕೆಲವು ವಿದ್ಯಮಾನಗಳ ನಡುವೆಯೇ ನಡೆಯಲಿರುವ ಕೋರ್ ಕಮಿಟಿ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.