ಬೆಂಗಳೂರು,ಫೆ.27-ಮುಂದಿನ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಮತ್ತೆ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡಿ, ಪಕ್ಷ ಬಲಪಡಿಸ್ತೇವೆ.ಸೂರ್ಯ ಚಂದ್ರರಷ್ಟೇ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನಗೆ ಇವತ್ತು 82 ತುಂಬಿ 83 ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ. ರಾಜ್ಯಾದ್ಯಂತ ಅಭಿಮಾನಿಗಳು ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಮಾಡಿ ಶುಭ ಕೋರಿದ್ದಾರೆ. ಅವರೆಲ್ಲರಿಗೂ ಒಳ್ಳೇದಾಗಲಿ.ನನಗೆ ರಾಜ್ಯದಲ್ಲಿ ಅನೇಕ ಸ್ಥಾನಮಾನ ನೀಡಿ ಸಿಎಂ ಆಗಿ ಕೆಲಸ ಮಾಡುವ ಸೌಭಾಗ್ಯ ರಾಜ್ಯದ ಜನ ಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಪ್ರತೀ ಜಿಲ್ಲೆಯಲ್ಲೂ ಕಾರ್ಯಕರ್ತರ ಸಮಾವೇಶ ಮಾಡಿ ಅವರನ್ನು ಹುರಿದುಂಬಿಸುವ ಕೆಲಸ ಮಾಡುತ್ತೇವೆ. ಮುಂದಿನ ಚುನಾವಣೆಯಲ್ಲಿ ಈ ಭ್ರಷ್ಟ ಸರ್ಕಾರ ತೊಲಗಿಸುವ ಕೆಲಸ ಮಾಡಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿ ಮೀರಿ ಎಲ್ಲೂ ಕೆಲಸ ಮಾಡುವುದಾಗಿ ಶಪಥ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಮಾತನಾಡಿ, ರಾಜ್ಯದಲ್ಲಿ ಯಡಿಯೂರಪ್ಪ ಜನಮೆಚ್ಚುಗೆ ಪಡೆದ ನಾಯಕ ಹಲವು ಹೋರಾಟಗಳ ಮೂಲಕ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಸಮುದಾಯಗಳಿಗೂ ಕಾರ್ಯಕ್ರಮ ಕೊಟ್ಟರು ಎಂದು ಕೊಂಡಾಡಿದರು. ಕೆಳಲಸ್ತರವರಿಗೆ, ಬಡವರಿಗೆ, ಮಹಿಳೆಯರು, ಮಕ್ಕಳಿಗೆ, ರೈತರಿಗೆ ಕಾರ್ಯಕ್ರಮ ನೀಡಿದ್ದರಿಂದಲೇ ಜನ ಯಡಿಯೂರಪ್ಪ ಅವರ ಕಾರ್ಯಕ್ರಮಗಳನ್ನು ಬಯಸುತ್ತಿದ್ದಾರೆ.
ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ಒಂದಾಗಿ ಮತ್ತೆ ಪಕ್ಷ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಹೇಳಿದರು. ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿ ಕಟ್ಟಿ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ.
ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹೋರಾಟ ಆರಂಭ ಮಾಡಲಿದ್ದಾರೆ. ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಅಧಿಕಾರಕ್ಕೆ ತರುತ್ತೇವೆ ಎಂದರು ಬಿಜೆಪಿಯಲ್ಲಿ ಲಿಂಗಾಯತ ಸಮರ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಎಸ್. ಆರ್ ವಿಶ್ವನಾಥ್ ಅವರು, ಶಾಸಕ ಯತ್ನಾಳ್ ಗೆ ಟಾಂಗ್ ನೀಡಿದರು.
ವೀರಶೈವ ಲಿಂಗಾಯತರ ನಾಯಕ ಯಾರು ಎಂದು ಮಠಾಧೀಶರು, ಸಮುದಾಯದ ಹಿರಿಯರು ತೀರ್ಮಾನ ಮಾಡಲಿದ್ದಾರೆ. ಯಾವತ್ತೂ ಲಿಂಗಾಯತರ ನಾಯಕ ಯಡಿಯೂರಪ್ಪ ಅವರೇ ಎಂದು ಸಮರ್ಥನೆ ಮಾಡಿಕೊಂಡರು. ಯಾರೋ 40-50 ಜನರನ್ನ ಸೇರಿಸಿ ಲಿಂಗಾಯತ ನಾಯಕ ಅಂದರೆ ಆಗಲ್ಲ. ನಾನೂ ಒಕ್ಕಲಿಗ ಮುಖಂಡರನ್ನ ಸೇರಿಸಿ ನಾಯಕ ಅಂದರೆ ಆಗುತ್ತಾ?.ಕುರುಬರಿಗೆ ಸಿದ್ದರಾಮಯ್ಯ ನಾಯಕ ಹೇಗೋ ಹಾಗೇ ವೀರಶೈವ ಲಿಂಗಾಯತರಿಗೆ ಯಡಿಯೂರಪ್ಪ ನಾಯಕ ಯತ್ನಾಳ್ ಸಮುದಾಯದ ಒಂದು ಭಾಗ ಅಷ್ಟೇ. ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್‌ಗೆ ತಿರುಗೇಟು ನೀಡಿದರು.