Sunday, November 24, 2024
Homeರಾಜಕೀಯ | Politicsಭ್ರಷ್ಟ ಸರ್ಕಾರವೆಂದು ಬಿಂಬಿಸಲು ಬಿಜೆಪಿ ವ್ಯರ್ಥ ಪ್ರಯತ್ನ : ಸಿದ್ದು ವಾಗ್ದಾಳಿ

ಭ್ರಷ್ಟ ಸರ್ಕಾರವೆಂದು ಬಿಂಬಿಸಲು ಬಿಜೆಪಿ ವ್ಯರ್ಥ ಪ್ರಯತ್ನ : ಸಿದ್ದು ವಾಗ್ದಾಳಿ

ಮೈಸೂರು,ಜು.29- ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ನಿರಂತರವಾಗಿ ಅನ್ಯಾಯ ಮುಂದುವರೆದಿದೆ. ಇದರ ನಡುವೆ ಬಿಜೆಪಿಯ ನಾಯಕರು ಕರ್ನಾಟಕವನ್ನು ಅನಗತ್ಯವಾಗಿ ಭ್ರಷ್ಟ ಸರ್ಕಾರ ಎಂದು ಬಿಂಬಿಸುವ ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್‌ ಪೂರ್ವಭಾವಿ ಸಭೆ ನಡೆಸಿದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಈ ಮೊದಲು ಘೋಷಿಸಲಾಗಿದ್ದ 5300 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿಲ್ಲ. 15ನೇ ಹಣಕಾಸು ಆಯೋಗದ ಮಧ್ಯಂತರ ಶಿಫಾರಸಿನಲ್ಲಿ ಪೆರಿಫಿರಲ್‌ ರಿಂಗ್ ರಸ್ತೆಗೆ ಹಾಗೂ ಕೆರೆಗಳ ಪುನಶ್ಚೇತನಕ್ಕೆ ತಲಾ 3000 ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿತ್ತು. ಅದರ ಪ್ರಸ್ತಾಪವೇ ಬಜೆಟ್‌ನಲ್ಲಿಲ್ಲ. ಇದು ಅನ್ಯಾಯ ಅಲ್ಲವೇ? ಎಂದರು.

ನಿರ್ಮಲಾ ಸೀತಾರಾಮನ್‌ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಕುಮಾರಸ್ವಾಮಿಯವರು ಕೂಡ ಮಂಡ್ಯದ ಸಂಸದರಾಗಿ ಕೇಂದ್ರಸಚಿವರಾಗಿದ್ದಾರೆ. ಮಂಡ್ಯಕ್ಕಾದರೂ ಯಾವುದಾದರೂ ಯೋಜನೆ ಬಜೆಟ್‌ನಲ್ಲಿ ಪ್ರಕಟಿಸಬೇಕಿತ್ತು. ಕೈಗಾರಿಕಾ ಕಾರಿಡಾರ್‌ ಘೋಷಣೆ ಮಾಡಬಹುದಿತ್ತು. ಮೇಕೆದಾಟು ಯೋಜನೆ, ಏಮ್ಸೌ, ಐಐಟಿ ಸೇರಿದಂತೆ ಹಲವು ವಿಚಾರಗಳಿಗೆ ರಾಜ್ಯಸರ್ಕಾರ ಮನವಿ ಸಲ್ಲಿಸಿತ್ತು. ಯಾವುದೂ ಈಡೇರಿಲ್ಲ. ಇದು ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.

ನಿರ್ಮಲಾ ಸೀತಾರಾಮನ್‌ ಬಂದಾಗಲೆಲ್ಲಾ ಸುಳ್ಳು ಹೇಳಿ ಹೋಗುತ್ತಾರೆ. ಈ ಬಾರಿಯೂ ಅದೇ ರೀತಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸಿದ್ದಾರೆ. 15ನೇ ಹಣಕಾಸು ಆಯೋಗದಲ್ಲಿ ನಮಗೆ ಭಾರಿ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು.

ರಾಜ್ಯದಲ್ಲಿ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗುತ್ತಿವೆ ಎಂದು ನಿರ್ಮಲಾ ಸೀತಾರಾಮನ್‌ ದೂರಿದ್ದಾರೆ. ಇವರ ಅವಧಿಯಲ್ಲಿ ಭಾರತಕ್ಕೆ ವಿದೇಶಿ ಬಂಡವಾಳ ಹೂಡಿಕೆಯೇ ತಗ್ಗಿದೆ. ಅದಕ್ಕೆ ಮೂಲ ಕಾರಣ ಕೇಂದ್ರ ಹಣಕಾಸು ಸಚಿವರು ರೂಪಿಸಿದ ನೀತಿಗಳು ಎಂದು ಹೇಳಿದರು.

ರಾಜ್ಯಸರ್ಕಾರ ತನ್ನ ಪಾಲಿನ ಹಣ ನೀಡದೇ ಕೇಂದ್ರದಿಂದ ಅನುದಾನ ಕೇಳುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿರುವುದನ್ನು ಆಕ್ಷೇಪಿಸಿದ ಸಿದ್ದರಾಮಯ್ಯನವರು, ದೇಶದಲ್ಲೇ ಮಹಾರಾಷ್ಟ್ರದ ನಂತರ ಅತೀ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವುದು ಕರ್ನಾಟಕ ರಾಜ್ಯ. ನಮಗೆ ನ್ಯಾಯಯುತವಾದ ಪಾಲು ನೀಡಬೇಕಿದೆ. ಇವರೇ ಘೋಷಣೆ ಮಾಡಿದ ಭದ್ರಾ ಮೇಲ್ದಂಡೆ ಯೋಜನೆ ಹಣ ಬಾಕಿ ಇರುವಾಗಲೂ ರಾಜ್ಯಕ್ಕೆ ಯಾವುದೇ ಹಣ ಕೊಡಬೇಕಿಲ್ಲ ಎಂದು ನಿರ್ಮಲಾ ಸೀತಾರಾಮನ್‌ ಹೇಳುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ನೀತಿ ಆಯೋಗದ ಸಭೆಗೆ ಭಾಗವಹಿಸದೇ ಇರುವ ಬಗ್ಗೆ ಮಾಡಲಾಗುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರದ ಅನ್ಯಾಯವನ್ನು ವಿರೋಧಿಸಿಯೇ ನಾವು ಸಭೆಯನ್ನು ಬಹಿಷ್ಕರಿಸಿದ್ದೇವೆ. ನಮಂತೆಯೇ ತಮಿಳುನಾಡು, ತೆಲಂಗಾಣ ಸೇರಿದಂತೆ ಬಿಜೆಪಿಯೇತರ ಆಡಳಿತವಿರುವ ಎಲ್ಲಾ ರಾಜ್ಯಗಳು ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸಿವೆ.

ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸಿದ್ದರು. ಕೊನೆಗೂ ಅವರಿಗೂ ಮಾತನಾಡಲು ಅವಕಾಶ ಸಿಕ್ಕಿಲ್ಲ ಎಂದು ಸಭಾತ್ಯಾಗ ಮಾಡಿದ್ದಾರೆ ಎಂದು ಹೇಳಿದರು.ರಾಜ್ಯದಲ್ಲಿ ಭ್ರಷ್ಟಾಚಾರ ಪೂರ್ತಿ ಹೋಗಿದೆ ಎಂದು ಹೇಳುವುದಿಲ್ಲ. ಆದರೆ ತಗ್ಗಿದೆ. ಆದರೂ ಕರ್ನಾಟಕವನ್ನು ಭ್ರಷ್ಟ ಸರ್ಕಾರ ಎಂದು ಬಿಂಬಿಸಲು ಯತ್ನಿಸುತ್ತಿದ್ದಾರೆ. ನಾವು ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಕರ್ನಾಟಕ ಭ್ರಷ್ಟ ಸರ್ಕಾರವಲ್ಲ ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಬಿಜೆಪಿಯ ಅವಧಿಯಲ್ಲಿ ನಡೆದಿದ್ದ 21 ಹಗರಣಗಳನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ಗುರುರಾಘವೇಂದ್ರ ಬ್ಯಾಂಕಿನ ವಂಚನೆ ಸೇರಿದಂತೆ ಹಲವು ಹಗರಣವನ್ನು ಸಿಬಿಐಗೆ ನೀಡಿದ್ದೇವೆ. ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಒಂದನ್ನೂ ಕೂಡ ಸಿಬಿಐ ತನಿಖೆಗೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮುಡಾ ಪ್ರಕರಣದಲ್ಲಿ ನಾವೂ ಕೂಡ ಪಾದಯಾತ್ರೆ ಮಾಡುತ್ತೇವೆ. ಯಾವ ಕಾರಣಕ್ಕಾಗಿ ಬಿಜೆಪಿ ಮತ್ತು ಜೆಡಿಎಸ್‌‍ನವರು ಪಾದಯಾತ್ರೆ ಮಾಡುತ್ತಿದ್ದಾರೆ?, ಬಿಜೆಪಿಯವರು ಹಲವಾರು ಹಗರಣವನ್ನು ನಡೆಸಿದ್ದಾರೆ. ಒಂದನ್ನೂ ಅವರು ತನಿಖೆ ನಡೆಸಲಿಲ್ಲ. ನಮ ಅವಧಿಯಲ್ಲಿ ಜನರಲ್ಲಿ ಅನುಮಾನ ಇರಬಾರದು ಎಂಬ ಕಾರಣಕ್ಕೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇವೆ ಎಂದು ತಿಳಿಸಿದರು.

ಬಿಜೆಪಿ-ಜೆಡಿಎಸ್‌‍ನವರಿಗೆ ನಮ ಪೊಲೀಸ್‌‍ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ, ಬ್ಲಾಕ್‌ಮೇಲ್‌ ಮಾಡುವುದರಲ್ಲಿ ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದರು. ಬಂಡವಾಳ ಹೂಡಿಕೆ ಹಿನ್ನಡೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ಟೀಕೆ ಮಾಡಿರುವುದಕ್ಕೆ ಸವಿಸ್ತಾರವಾದಂತಹ ಹೇಳಿಕೆ ನೀಡಲು ಸಚಿವರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಕುಮಾರಸ್ವಾಮಿ ಬಹಳಷ್ಟು ಮಾತನಾಡುತ್ತಿದ್ದಾರೆ. 1984 ರಲ್ಲಿ ಮುಡಾದಿಂದ ಕೈಗಾರಿಕಾ ನಿವೇಶನ ಪಡೆದಿದ್ದಾರೆ. ಸ್ವಾಧೀನಪತ್ರ ತೆಗೆದುಕೊಂಡಿದ್ದಾರೆ. ಆದರೆ ಕೈಗಾರಿಕೆಯನ್ನೇ ಮಾಡಿಲ್ಲ. ಈಗ ನಿವೇಶನವನ್ನೇ ಪಡೆದಿಲ್ಲ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಪುಟ್ಟಯ್ಯ ಅಧ್ಯಕ್ಷರಾಗಿದ್ದಾಗ ದೇವೇಗೌಡರ ಕುಟುಂಬಕ್ಕೆ ಎಷ್ಟು ನಿವೇಶನ ಕೊಡಿಸಲಾಗಿದೆ ಎಂದು ನಾವು ವಿವರ ನೀಡುವ ಮೂಲಕ ರಾಜಕೀಯವಾಗಿಯೇ ಪ್ರತಿಕ್ರಿಯೆ ನೀಡುತ್ತೇವೆ ಎಂದರು.

ಮಳೆ ಸುರಿಯುತ್ತಿರುವುದರಿಂದ ಕಾವೇರಿ ನೀರು ಬಿಡಲಾಗುತ್ತಿದ್ದು, ಮೆಟ್ಟೂರು ಜಲಾಶಯ ತುಂಬಿಹೋಗುವ ಸಾಧ್ಯತೆಯಿದೆ. ನೀರು ವ್ಯರ್ಥವಾಗುವುದನ್ನು ತಪ್ಪಿಸಲು ತಮಿಳುನಾಡಿನ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ. ಆದರೆ ತಮಿಳುನಾಡಿನವರು ಮಾತುಕತೆಗೆ ಸಿದ್ಧರಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ಮೇಕೆದಾಟು ಅಣೆಕಟ್ಟು ನಿರ್ಮಿಸಲು ನಾವು ಸಿದ್ಧರಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಬಾಂಗ್ಲಾ ದೇಶದಿಂದ ಅಕ್ರಮ ವಲಸಿಗರು ಆಗಮಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಸಿದ್ದರಾಮಯ್ಯ ಹೇಳಿದರು.

RELATED ARTICLES

Latest News