ಬೆಂಗಳೂರು,ನ.9- ಕೋವಿಡ್ 19 ಸಂದರ್ಭದಲ್ಲಿ ಪಿಪಿಇ ಕಿಟ್ ಹಾಗೂ ಇತರೆ ಸಾಮಾಗ್ರಿ ಖರೀದಿಯಲ್ಲಿ ಅಕ್ರಮ ನಡೆದಿರುವ ಕಾರಣ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ನ್ಯಾಯಮೂರ್ತಿ ಮೈಕಲ್ ಖುನ್ನಾ ಆಯೋಗ ಶಿಫಾರಸ್ಸು ಮಾಡಿದೆ.
ಇದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ಶ್ರೀರಾಮುಲುಗೆ ಕಾನೂನಿನ ಸಂಕಷ್ಟ ಎದುರಾಗಿದೆ. ಅಲ್ಲದೆ ಅಧಿಕಾರಿಗಳ ವಿರುದ್ದವೂ ಕಾನೂನು ಕ್ರಮ ಜರುಗಿಸಬೇಕೆಂದು ಆಯೋಗ ಶಿಫಾರಸ್ಸು ಮಾಡಿದೆ.ಕೋವಿಡ್ 19ರ ಕಿಟ್ ಖರೀದಿ ಹಾಗೂ ಇತರೆ ವೈದ್ಯಕೀಯ ಸಾಮಾಗ್ರಿಗಳ ಖರೀದಿಯಲ್ಲಿ ಒಟ್ಟು 769 ಕೋಟಿಗೂ ಅಧಿಕ ಅವ್ಯವಹಾರ ನಡೆದಿರುವುದರಿಂದ ಯಡಿಯೂರಪ್ಪ , ಶ್ರೀರಾಮುಲು ಅವರನ್ನು ಪ್ರಾಸಿಕ್ಯೂಷನ್‌ಗೆ ಒಳಪಡಿಸಲು ಆಯೋಗ ಶಿಫಾರಸ್ಸು ಮಾಡಿದೆ.
ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಖುನ್ನಾ ನೇತೃತ್ವದ ಆಯೋಗವು ಪಿಪಿಇ ಕಿಟ್ ಮತ್ತು ಇತರೆ ಸಾಮಾಗ್ರಿಗಳ ಖರೀದಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ ಎಂದು ಹೇಳಿದೆ.
ಅಂದಿನ ಸರ್ಕಾರ ಚೀನಾ ಕಂಪನಿಗಳಿಂದ ಪಿಪಿಇ ಕಿಟ್ ಖರೀದಿ ಮಾಡಿತ್ತು. ಇದರ ದರ ನಮೂನೆಯಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿದ್ದು, ಕಿಟ್ ಪೂರೈಕೆದಾರರಿಗೆ 14.2 ಕೋಟಿ ಲಾಭವಾಗಿದೆ. ಪೂರೈಕೆದಾರರಿಗೆ ಲಾಭ ಮಾಡಿಕೊಡುವ ದುರದ್ದೇಶದಿಂದ ಅಕ್ರಮ ಎಸಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2023, ಆ.25ರಂದು ರಾಜ್ಯ ಸರ್ಕಾರ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮೈಕಲ್ ಖುನ್ನಾ ನೇತೃತ್ವದಲ್ಲಿ ಕೋವಿಡ್ ಅಕ್ರಮ ಕುರಿತು ಆಯೋಗ ರಚನೆ ಮಾಡಿತ್ತು. ಚೀನಾ ಸಂಸ್ಥೆಗಳಿಂದ ಪಿಪಿಇ ಕಿಟ್‌ಗಳನ್ನು ಖರೀದಿ ಮಾಡಲು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಫಾರಸ್ಸು ಮಾಡಿದ್ದರು.
ಎರಡು ಚೀನಾ ಸಂಸ್ಥೆಗಳಿಂದ ಪಿಪಿಇ ಕಿಟ್‌ಗಳನ್ನು ದುಬಾರಿ ದರದಲ್ಲಿ ಖರೀದಿ ಮಾಡಲಾಗಿದೆ. ಇದರಲ್ಲಿ ಭಾರೀ ಪ್ರಮಾಣದ ಅಕ್ರಮ ಎಸಗಿರುವುದನ್ನು ವರದಿಯಲ್ಲಿ ಪತ್ತೆಹಚ್ಚಿದೆ.ಚೀನಾ ಜೊತೆ ವಹಿವಾಟು ನಿರ್ಬಂಧ ಸಂದರ್ಭದಲ್ಲೇ ದೇಶೀಯ ಸಂಸ್ಥೆಗಳು ಸರಬರಾಜು ಮಾಡಲು ಅವಕಾಶ ಇದ್ದರೂ ಹೆಚ್ಚು ಹಣ ನೀಡಿ ಚೀನಾದಿಂದ ಪಿಪಿಇ ಕಿಟ್ ಖರೀದಿ ಮಾಡಲಾಗಿತ್ತು. 3 ಲಕ್ಷ ಪಿಪಿಇ ಕಿಟ್ ಖರೀದಿಯಲ್ಲಿ 14.2 ಕೋಟಿ ಭ್ರಷ್ಟಾಚಾರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ದೇಶಿ ಕಂಪನಿಗಳಿಗಿಂತ ಮೂರು ಪಟ್ಟು ಹೆಚ್ಚಳ ದರ ನೀಡಿ ಖರೀದಿ ಮಾಡಲಾಗಿತ್ತು. ಸಪ್ಲೈನಲ್ಲೂ ಕಡಿಮೆ ಸರಬರಾಜು, ಹಣ ಪಾವತಿ ಮಾಡಿದ ಮೇಲೆಯೂ ಮರು ಪರಿಷ್ಕರಣೆ ಮಾಡಿ ಮತ್ತೆ ಖರೀದಿ ಮಾಡಿರುವ ಆರೋಪವನ್ನು ಅಂದಿನ ರಾಜ್ಯ ಸರ್ಕಾರ ಎದುರಿಸಿತ್ತು.
ಕೋವಿಡ್ ನಿರ್ವಹಣೆ ಹೆಸರಿನಲ್ಲಿ ನಡೆದ ಅವ್ಯವಹಾರಗಳ ಕುರಿತು ತನಿಖೆ ನಡೆಸಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಆಯೋಗವು ಒಟ್ಟು 3,741.36 ಕೋಟಿ ಮೊತ್ತದ ಖರೀದಿಯಲ್ಲಿ 769 ಕೋಟಿಯ ಅವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಿದೆ.
ಕೋವಿಡ್ ಸಾಂಕ್ರಾಮಿಕವು ರಾಜ್ಯವನ್ನು ಕಾಡಿದಾಗ, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿತ್ತು. ಈ ಅವಧಿಯಲ್ಲಿ ಅಕ್ರಮ ನಡೆದಿದೆ ಎಂದು ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿ ನೀಡಿತ್ತು.
ಆಯೋಗ ಕಳೆದ ಆಗಸ್ಟ್ 31ರಂದು ಮಧ್ಯಂತರ ವರದಿ ಸಲ್ಲಿಸಿದೆ. ಈ ವರದಿಯನ್ನು ಅಧ್ಯಯನ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳುವ ಕುರಿತು ವಿವರಣೆ ನೀಡಲು ಸಂಬಂಧಪಟ್ಟ ಇಲಾಖೆಗಳಾದ ಆರೋಗ್ಯ, ವೈದ್ಯಕೀಯ ಶಿಕ್ಷಣ ಮತ್ತು ನಗರಾಭಿವೃದ್ಧಿ ಇಲಾಖೆಗಳ ಮುಖ್ಯಸ್ಥರಿಗೆ ಸೆ. 9ರಂದು ಹಸ್ತಾಂತರಿಸಲಾಗಿತ್ತು. ತಪ್ಪಿತಸ್ಥರಿಂದ ಹಣ ವಸೂಲಿ, ಶಿಸ್ತು ಕ್ರಮ ಮತ್ತು ಅಪರಾಧ ಮೊಕದ್ದಮೆ ದಾಖಲಿಸಲು ಈ ಇಲಾಖೆಗಳು ಸೂಚಿಸಿವೆ.
160.25 ಕೋಟಿ ಮೊತ್ತದ ವೈದ್ಯಕೀಯ ಉಪಕರಣಗಳು, ತಪಾಸಣಾ ಕಿಟ್‌ಗಳನ್ನು ಯಾವುದೇ ಅನುಮೋದನೆ ಇಲ್ಲದೇ ಖರೀದಿಸಲಾಗಿದೆ.ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆಗೆ ಅನಗತ್ಯವಾಗಿ 84.71 ಕೋಟಿ ಮೊತ್ತದ ಕಾಮಗಾರಿಗಳನ್ನು ನಡೆಸಲಾಗಿದೆ. ಈ ಕಾಮಗಾರಿಗಳು ಪೂರ್ಣವಾಗಿಲ್ಲ. ಪಿಎಂ.ಕೇರ್ಸ್ ನಿಧಿ ಅಡಿಯಲ್ಲಿ ಕೈಗೊಳ್ಳಲಾದ ಕಾಮಗಾರಿಗಳಿಗೆ ನಿಧಿಯಿಂದ ಹಣ ಬಿಡುಗಡೆಯಾಗಿದೆ. ಹೀಗಿದ್ದೂ ಆರೋಗ್ಯ ಇಲಾಖೆಯಿಂದ ?12 ಕೋಟಿ ಅಕ್ರಮವಾಗಿ ಬಿಡುಗಡೆ ಮಾಡಲಾಗಿದೆ.17.28 ಲಕ್ಷ ಡೋಸ್‌ಗಳಷ್ಟು ಕೋವಿಡ್ ತಡೆ ಲಸಿಕೆಗಳು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಇಲಾಖೆಯ ಲಸಿಕಾ ಕೇಂದ್ರಗಳಿಂದ ಕಾಣೆಯಾಗಿವೆ.
ಸುಮಾರು 1,000 ಬೆಲೆಯ ಇನ್‌ಫ್ರಾರೆಡ್ ಥರ್ಮಾಮೀಟರ್ಗಳಿಗೆ ತಲಾ 15,000 ಪಾವತಿಸಲಾಗಿದೆ. 15.82 ಲಕ್ಷ ಅವಧಿ ಮುಗಿದ ಆರ್‌ಟಿಪಿಸಿಆರ್ ಕಿಟ್‌ಗಳನ್ನು 3.11 ಕೋಟಿ ವೆಚ್ಚದಲ್ಲಿ ಖರೀದಿಸಲಾಗಿದೆ. ಕಿದ್ವಾಯಿ ಸಂಸ್ಥೆಯಲ್ಲಿ ಕಾರ್ಯದೊತ್ತಡದ ಕಾರಣ ಖಾಸಗಿ ಸಂಸ್ಥೆಗಳಿಗೆ ಸೋಂಕು ತಪಾಸಣೆಗೆ ಮಾದರಿಗಳು ಮತ್ತು ಚಿಕಿತ್ಸೆಗೆ ರೋಗಿಗಳನ್ನು ಕಳುಹಿಸಲಾಗಿದೆ. ಇದರಲ್ಲೇ 264.35 ಕೋಟಿಯಷ್ಟು ಅಕ್ರಮ ನಡೆದಿದೆ.
ಕೊರೋನ ವೈದ್ಯಕೀಯ ಕಿಟ್ ಖರೀದಿಯಲ್ಲಿಯೇ ಬೃಹತ್ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪಗಳು ಕೇಳಿಬಂದಿತ್ತು. 2021ರ ಜುಲೈ-ಆಗಸ್ಟ್‌ನಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಬಿಡುಗಡೆ ಮಾಡಿದ ವರದಿಯಲ್ಲಿ ಕೋವಿಡ್ ಹಗರಣದ ಬಗ್ಗೆ ಗಂಭೀರ ಆರೋಪಗಳಿದ್ದವು. 2023ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚನೆ ಮಾಡಿತ್ತು. ಅಂತೆಯೇ ಕೋವಿಡ್ ಹಗರಣದ ಬಗ್ಗೆ ತನಿಖೆಗಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗವನ್ನು ರಚಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದರು.