Friday, November 22, 2024
Homeರಾಜ್ಯಚುನಾವಣಾ ಆಯೋಗ ಕಾಂಗ್ರೆಸ್‌‍ ಪಕ್ಷವನ್ನು ಬೆದರಿಸುವುದನ್ನು ಬಿಟ್ಟು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲಿ : ಹರಿಪ್ರಸಾದ್‌

ಚುನಾವಣಾ ಆಯೋಗ ಕಾಂಗ್ರೆಸ್‌‍ ಪಕ್ಷವನ್ನು ಬೆದರಿಸುವುದನ್ನು ಬಿಟ್ಟು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲಿ : ಹರಿಪ್ರಸಾದ್‌

ಬೆಂಗಳೂರು, ಮೇ 23- ಚುನಾವಣಾ ಆಯೋಗ ಕಾಂಗ್ರೆಸ್‌‍ ಪಕ್ಷವನ್ನು ಬೆದರಿಸುವುದು, ಕಿವಿ ಹಿಂಡುವುದನ್ನು, ಬುದ್ದಿ ಹೇಳುವುದನ್ನು ಬಿಟ್ಟು, ನ್ಯಾಯ ಸಮ್ಮತ, ನಿಷ್ಪಕ್ಷಪಾತವಾಗಿ ತನ್ನ ಜವಾಬ್ದಾರಿ ನಿರ್ವಹಿಸಿಲಿ ಎಂದು ಕಾಂಗ್ರೆಸ್‌‍ನ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯೂ ಹಿಂದೆಂದೂ ನಡೆಯದ ದ್ವೇಷ, ಅರಾಜಕತೆ, ಪಕ್ಷಪಾತಿತನದಿಂದಲೇ ನಡೆಯುತ್ತಿರುವುದನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬಾರಿಯ ಚುನಾವಣೆ ಪ್ರಜಾಪ್ರಭುತ್ವ, ಸಂವಿಧಾನದ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಇಂತಹ ಅಪಾಯವನ್ನು ದೇಶದ ಜನರಿಂದ ಮುಚ್ಚಿಡಬೇಕೆಂದು ಚುನಾವಣಾ ಆಯೋಗ ತಾಕೀತು ಮಾಡಿರುವುದು ಆಶ್ಚರ್ಯ ಎಂದು ಹೇಳಿದ್ದಾರೆ.

ಬಿಜೆಪಿ ಸಂಸದರು, ಹಿರಿಯ ನಾಯಕರುಗಳು ಈ ಬಾರಿ ಅಧಿಕಾರಕ್ಕೆ ಬಂದರೆ ನಾವು ಸಂವಿಧಾನ ಬದಲಾವಣೆ ಮಾಡಿಯೇ ಸಿದ್ಧ ಎಂದು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ. ದೇಶದ ಹಿತಕ್ಕಾಗಿ ಸಂವಿಧಾನ ಬದಲಾವಣೆ ಮಾಡುವುದು ಅನಿವಾರ್ಯ ಎಂದು ಬಹಿರಂಗ ಚುನಾವಣಾ ಪ್ರಚಾರದಲ್ಲಿ ರಾಜಸ್ತಾನದ ನಾರ್ಗೌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜ್ಯೋತಿ ಮಿರ್ಧಾ ಹೇಳಿಕೆ ನೀಡಿದ್ದಾರೆ.

ಮತ್ತೆ ಅಧಿಕಾರಕ್ಕೆ ಬಂದರೆ ದೇಶಕ್ಕೆ ಹೊಸ ಸಂವಿಧಾನ ನೀಡುತ್ತೇವೆ ಎಂದು ಅಯೋಧ್ಯೆಯ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಲಲ್ಲೂ ಸಿಂಗ್‌ ಕೂಡಿ ಹೇಳಿಕೆ ನೀಡಿದ್ದಾರೆ. ಇನ್ನೂ ಮುಂದುವರೆದು ಹಾಲಿ ಸಂಸದ, ಕೇಂದ್ರದ ಮಾಜಿ ಮಂತ್ರಿ ಅನಂತ್‌ ಕುಮಾರ್‌ ಹೆಗಡೆ ಸಂವಿಧಾನ ಬದಲಾವಣೆ ಮಾಡಲು 400 ಸ್ಥಾನಗಳು ಬಿಜೆಪಿಗೆ ಅನಿವಾರ್ಯ ಎಂದು ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಇಂತಹ ಅಪಾಯಕಾರಿ ಹೇಳಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿಯಾಗಲಿ, ಬಿಜೆಪಿ ಪಕ್ಷವಾಗಲಿ ಕನಿಷ್ಟ ಸ್ಪಷ್ಟನೆಯನ್ನೂ ನೀಡಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಪ್ರಧಾನಿ ಮೋದಿಯ ಸುತ್ತಮುತ್ತ ಸಂವಿಧಾನ ಬದಲಾಯಿಸುವವರನ್ನೇ ಆರ್ಥಿಕ ಸಲಹೆಗಾರರನ್ನಾಗಿ ಮಾಡಿಕೊಂಡಿದ್ದಾರೆ. ಪ್ರಧಾನಿಯ ಆರ್ಥಿಕ ಮುಖ್ಯ ಸಲಹೆಗಾರ ಬಿಬೇಕ್‌ ದೇಬ್ರಾಯ ಹೊಸ ಸಂವಿಧಾನದ ಅಗತ್ಯವಿದೆ ಎಂದು ಅಂಕಣವೇ ಬರೆದಿದ್ದು ಜಗಜ್ಜಾಹೀರಾಗಿದೆ. ಸಂವಿಧಾನ ಹಾಗೂ ಮೀಸಲಾತಿ ವಿರೋಧಿ ಮನಸ್ಥಿತಿ ಬಿಜೆಪಿಯ ಹುಟ್ಟಿನಿಂದಲೇ ಇರುವುದು ಗೌಪ್ಯ ವಿಷಯವಲ್ಲ. ಆದರೆ ಸಂವಿಧಾನದಡಿಯಲ್ಲಿ ಕಾರ್ಯ ನಿರ್ವಹಿಸಬೇಕಾದ ಚುನಾವಣಾ ಆಯೋಗದ ಮೌನದ ಹಿಂದಿನ ಉದ್ದೇಶವೇನು? ಈ ಕ್ಷಣದವರೆಗೂ ನೋಟಿಸ್‌‍ ನೀಡಲು ಕೂಡ ಯಾರ ಒಪ್ಪಿಗೆಗೆ ಕಾಯುತ್ತಿದೆ? ದೇಶದ ಅತಿದೊಡ್ಡ ವಿರೋಧ ಪಕ್ಷವನ್ನು ಬೆದರಿಸುತ್ತಿರುವುದು ಯಾರ ಅಣತಿಯಂತೆ? ಎಂದು ಪ್ರಶ್ನಿಸಿದ್ದಾರೆ.

ದೇಶದ ಸಂವಿಧಾನವನ್ನು ರದ್ದುಪಡಿಸಬಹುದು ಎಂಬಂತಹ ತಪ್ಪು ಭಾವನೆ ಮೂಡಿಸುವ ಹೇಳಿಕೆಗಳನ್ನು ನೀಡಬಾರದು ಎಂದು ಕಾಂಗ್ರೆಸ್‌‍ ಪಕ್ಷವನ್ನು ತಾಕೀತು ಮಾಡುತ್ತಿರುವುದನ್ನು ನೋಡಿದರೆ ಸಂವಿಧಾನ ಬದಲಾವಣೆ ಮಾಡುವ ಬಿಜೆಪಿಯ ಉದ್ದೇಶಕ್ಕೆ ಚುನಾವಣಾ ಆಯೋಗದ ಸಮಿತಿ ಇದೆಯೇ? ಸಂವಿಧಾನ ಅಪಾಯದಲ್ಲಿರುವುದು ದೇಶದ ಜನರಿಗೆ ತಿಳಿಸುವುದು ತಪ್ಪೇ? ಧರ್ಮದ ಆಧಾರದಲ್ಲಿ ಪ್ರಧಾನಿಯಾದಿಯಾಗಿ ಬಿಜೆಪಿಯ ನಾಯಕರು ಬಹಿರಂಗವಾಗಿ ದ್ವೇಷ ಭಾಷಣವನ್ನು ಮಾಡುತ್ತಿದ್ದರೂ ಚುನಾವಣಾ ಆಯೋಗ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಭಾರತದ ಚುನಾವಣಾ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಚುನಾವಣಾ ಆಯೋಗದ ಪಕ್ಷಪಾತಿತನ ಹಾಗೂ ನಿಷ್ಕ್ರಿಯತೆಯನ್ನು ದೇಶ ನೋಡುತ್ತಿದೆ. ದೇಶದ ಮತದಾರರೂ ಚುನಾವಣಾ ಆಯೋಗದ ಮೇಲಿನ ಸಂಪೂರ್ಣ ಭರವಸೆ ಕಳೆದುಕೊಳ್ಳುವ ಮೊದಲು, ತನ್ನ ಘನತೆ, ಪರಂಪರೆಗೆ ಪೂರಕವಾಗಿ ಕಾರ್ಯ ನಿರ್ವಹಿಸಲಿ ಎಂದು ಒತ್ತಾಯಿಸಿದ್ದಾರೆ.

RELATED ARTICLES

Latest News