Saturday, December 28, 2024
Homeಬೆಂಗಳೂರುಬೆಂಗಳೂರು ಹಬ್ಬಕ್ಕೆ ಅದ್ಧೂರಿ ತೆರೆ: 2 ಲಕ್ಷಕ್ಕೂ ಅಧಿಕ ಮಂದಿ ಭಾಗಿ

ಬೆಂಗಳೂರು ಹಬ್ಬಕ್ಕೆ ಅದ್ಧೂರಿ ತೆರೆ: 2 ಲಕ್ಷಕ್ಕೂ ಅಧಿಕ ಮಂದಿ ಭಾಗಿ

ಬೆಂಗಳೂರು: ಸಾಹಿತ್ಯ, ಕಲೆ, ನುಡಿ, ಸಂಗೀತ, ಸಾಂಸ್ಕೃತಿಕ ಸೇರಿದಂತೆ ಬೆಂಗಳೂರಿನ ಪರಂಪರೆಯನ್ನು ಸಾರುವ “ಬಿಎಲ್‌ಆರ್‌ ಹಬ್ಬ” ಎರಡನೇ ಆವೃತ್ತಿಯು ಅದ್ಧೂರಿಯಾಗಿ ತೆರೆಕಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಮ್ಮ ಜಾತ್ರೆ ಮೂಲಕ ಆರಂಭಗೊಂಡ ಬಿಎಲ್‌ಆರ್‌ ಹಬ್ಬ 16 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಮ್ಮ ಸಂಸ್ಕೃತಿಯನ್ನು ಸಾರುವ ಹಾಗೂ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಮಾಡಿತು.

ಈ 16 ದಿನಗಳ ಬಿಎಲ್‌ಆರ್‌ ಹಬ್ಬದಲ್ಲಿ ಬರೋಬ್ಬರಿ ಎರಡು ಲಕ್ಷಕ್ಕೂ ಅಧಿಕ ಜನರು ಪಾಲ್ಗೊಂಡಿದ್ದು ವಿಶೇಷ. ಫ್ರೀಡಂ ಪಾರ್ಕ್, ಬೆಂಗಳೂರು ಇಂಟರ್ನ್ಯಾಷನಲ್ ಸೆಂಟರ್ (BIC), ಮಲ್ಲೇಶ್ವರದ ಪಂಚವಟಿ, ಕಾಮರಾಜ್ ರಸ್ತೆಯಲ್ಲಿರುವ ಸಭಾ ಮತ್ತು ಎನ್‌ಜಿಎಂಎ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಿದವು. ಇದರಲ್ಲಿ ಹೆಸರಾಂತ ಕಲಾವಿದರ ಸಂಗೀತ ಕಚೇರಿಗಳು, ನಾಟಕ ಪ್ರದರ್ಶನ, ಜಾನಪದ ಕಲೆ ಪ್ರದರ್ಶನ, ಸಾಹಿತ್ಯ ಕಾರ್ಯಕ್ರಮಗಳು, ಕುವೆಂಪು ಅವರ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಗಲ-ಗಲ-ಗದ್ದಲ ಸೇರಿದಂತೆ 500ಕ್ಕೂ ಅಧಿಕ ಕಾರ್ಯಕ್ರಮಗಳು ಈ ಅವಧಿಯಲ್ಲಿ ಯಶಸ್ವಿಯಾಗಿ ನಡೆದಿವೆ. ಅಷ್ಟೆ ಅಲ್ಲದೆ, ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ “ಬೆಂಗಳೂರು ಚಾಲೆಂಜ್‌” ಸ್ಪರ್ಧೆಯು ಹೆಚ್ಚು ಆಕರ್ಷಣೀಯವಾಗಿತ್ತು. ಜೊತೆಗೆ, “ಬಿಎಲ್‌ಆರ್‌ ಗೋಡೆ” ಉಪಕ್ರಮದ ಮೂಲಕ ಬೆಂಗಳೂರು ಗೋಡೆಗಳ ಮೇಲೆ ಚಿತ್ತಾರ ಮೂಡಿಸುವ ಸರಣಿ ನಡೆಯಿತು. ಹೆಚ್ಚುವರಿಯಾಗಿ, ನಿಮ್ಮ ಉದ್ಯಾನವನದಲ್ಲಿ ಹಬ್ಬ, ರಿಚ್ಮಂಡ್ ರೋಡ್ ಮತ್ತು ಇತರವುಗಳನ್ನು ಒಳಗೊಂಡಂತೆ ಐದು ಪ್ರಮುಖ ಸ್ಥಳಗಳಲ್ಲಿ ಹಬ್ಬಗಳನ್ನು ವಿಭಿನ್ನವಾಗಿ ಆಚರಿಸಲಾಯಿತು.

ಬಿಎಲ್‌ಆರ್ ಹಬ್ಬ -2024 ಯಶಸ್ವಿಗೆ ಬೆಂಬಲ ನೀಡಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಎಂದು ಬಿಎಲ್‌ಆರ್ ಹಬ್ಬಾ ಮುಖ್ಯ ಸಂಚಾಲಕ ರವಿಚಂದರ್ ಹೇಳಿದರು. ಈ ಹಬ್ಬವು ಬೆಂಗಳೂರಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಾರುವ ಹಾಗೂ ಎಲ್ಲಾ ಸಮುದಾಯವನ್ನು ಒಟ್ಟುಗೂಡಿಸಿ ಕಾರ್ಯಕ್ರಮ ನಡೆಸಿದ್ದು ಸಂತಸ ತಂದಿದೆ. ಸ್ವಯಂ ಸೇವಕರ ಸಹಕಾರದಿಂದ ಯಾವುದೇ ಅಡೆತಡೆ ಇಲ್ಲದೇ ಬಿಎಲ್‌ಆರ್‌ ಹಬ್ಬ ಯಶಸ್ವಿಯಾಗಿ ನಡೆದಿದ್ದು, ಬೆಂಗಳೂರಿನ ನೈಜ ಪರಂಪರೆಯನ್ನು ಜಾಗತಿಕವಾಗಿಯೂ ಪ್ರಚೂರ ಪಡಿಸಿದೆ. ಈ ಹಬ್ಬವನ್ನು ಇನ್ನಷ್ಟು ಪ್ರಭಾವಶಾಲಿಯಾಗಿಸಲು ಎಲ್ಲಾ ರೀತಿಯ ಕಲಾವಿದರ ಸಹಕಾರ ಪ್ರಶಂಸನೀಯ. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಜನರಿಗೂ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು. ಒಟ್ಟಾರೆ ಬಿಎಲ್‌ಆರ್‌ ಹಬ್ಬ ಎರಡನೇ ಆವೃತ್ತಿಯೂ ತೆರೆ ಕಂಡಿದ್ದು, ಇದರ ಭಾಗವಾದ ಪ್ರತಿಯೊಬ್ಬರಿಗೂ ಧನ್ಯವಾದ ಎಂದರು.

ಅನ್‌ಬಾಕ್ಸಿಂಗ್‌ಬಿಎಲ್‌ಆರ್‌ ಫೌಂಡೇಶನ್‌ನ ಸಹ-ಸಂಸ್ಥಾಪಕಿ ಮಾಲಿನಿ ಗೋಯಲ್ ಮಾತನಾಡಿ, ಬಿಎಲ್‌ಆರ್‌ ಹಬ್ಬ ಬೆಂಗಳೂರಿನ ಶ್ರೀಮಂತ ವೈವಿಧ್ಯತೆ, ಸೃಜನಶೀಲತೆ, ಸಾಂಸ್ಕೃತಿಕ ವೈಭವವನ್ನು ಎತ್ತಿ ಹಿಡಿಯುತ್ತದೆ. ನಮ್ಮ ದೃಷ್ಟಿ ನಗರದ ಸಾಂಪ್ರದಾಯಿಕ ಪರಂಪರೆಯನ್ನು ಅದರ ಆಧುನಿಕ ಗುರುತಿನೊಂದಿಗೆ ಸುಂದರವಾಗಿ ಜೋಡಿಸುವ ಈ ಹಬ್ಬವು ನಮ್ಮೆಲ್ಲರನ್ನೂ ಮನಸೂರೆಗೊಳಿಸಿತು. ಪ್ರತಿಯೊಬ್ಬರೂ ಬಿಎಲ್‌ಆರ್‌ ಹಬ್ಬದಲ್ಲಿ ಪಾಲ್ಗೊಂಡು ನಮ್ಮ ಸಾಂಸ್ಕೃತಿಕ ಅನುಭವವನ್ನು ಪಡೆದುಕೊಂಡಿರುವುದು ಸಂತಸ. ನಗರದ ವಿಶಿಷ್ಟ ಚೈತನ್ಯವನ್ನು ಆಚರಿಸಲು ಒಗ್ಗೂಡಿದ ಬೆಂಗಳೂರಿನ ಜನರಿಗೆ ಅಭಿನಂದನೆಗಳು ಎಂದರು.


ಬಿಎಲ್‌ಆರ್‌ ಹಬ್ಬದ ಮೂಲಕ ಬೆಂಗಳೂರನ್ನು ದಕ್ಷಿಣ ಏಷ್ಯಾದಲ್ಲಿಯೇ ಸಾಂಸ್ಕೃತಿಕ ಕೇಂದ್ರವನ್ನಾಗಿ ಗುರುತಿಸಿ ಪ್ರವಾಸಿಗರನ್ನು ಇತ್ತ ಆಕರ್ಷಿಸುವುದು ಹಾಗೂ ಸ್ಥಳೀಯ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಮ್ಮ ಆದ್ಯತೆ. ಜೊತೆಗೆ, ಬೆಂಗಳೂರನ್ನು ಜಾಗತಿಕ ನಕ್ಷೆಯಲ್ಲಿ ಸಾಂಸ್ಕೃತಿಕ ಕೇಂದ್ರಬಿಂದುವಾಗಿ ಗುರುತಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಬಿಎಲ್‌ಆರ್‌ ಹಬ್ಬದ ಪ್ರಾಯೋಜಕರಲ್ಲಿ ಗೋ ನೇಟಿವ್, ಝೆರೋಧಾ, ಮಣಿಪಾಲ್ ಫೌಂಡೇಶನ್ ಮತ್ತು ಪ್ರೆಸ್ಟೀಜ್ ಗ್ರೂಪ್ ಸೇರಿವೆ. ಕಾರ್ಯಕ್ರಮದ ಪ್ರಾಯೋಜಕರು ಗೀತಾಂಜಲಿ ವಿಕ್ರಮ್ ಕಿರ್ಲೋಸ್ಕರ್, ಪ್ರೊಸಸ್ ಮತ್ತು ಕ್ವೆಸ್ ಕಾರ್ಪೊರೇಷನ್ ಸೇರಿವೆ. ಹೆಚ್ಚಿನ ಮಾಹಿತಿಗಾಗಿ ಮತ್ತು BLR ಹಬ್ಬಾದ ಸಂಕ್ಷಿಪ್ತ ಮಾಹಿತಿಗಾಗಿ https://www.instagram.com/blrhubba/?hl=en ವೆಬ್‌ಸೈಟ್‌ಗೆ ಭೇಟಿ ನೀಡಿ

RELATED ARTICLES

Latest News