ಕಲಬುರಗಿ, ನ.1– ಕಲಬುರಗಿ ಜಲ್ಲೆಯ ಸಮಸ್ತ ಅಭಿವೃದ್ದಿಗೆ ನೀಲಿ ನಕ್ಷೆ ತಯಾರಾಗಿದ್ದು ಅದರ ಅಡಿಯಲ್ಲಿ ಮುಂದಿನ ವರ್ಷದೊಳಗೆ ಜಿಲ್ಲೆಯನ್ನು ಅಭಿವೃದ್ದಿಪಡಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಗಂಜ್ ಪ್ರದೇಶದಲ್ಲಿರುವ ನಗರೇಶ್ವರ ಪ್ರೌಢಶಾಲೆಯಲ್ಲಿ ನಡೆದ 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಲಬುರಗಿ ಜಿಲ್ಲೆಯಲ್ಲಿ ನವೋದ್ಯಮಕ್ಕೆ ಉತ್ತೇಜನ, ಪ್ರವಾಸೋದ್ಯಮ ಅಭಿವೃದ್ದಿ, ಯುವ ಸಬಲೀಕರಣ, ಶೈಕ್ಷಣಿಕ ಹಾಗೂ ಆರ್ಥಿಕ ಸಬಲತೆ ಹೊಂದುವ ಸಮಗ್ರ ಅಭಿವೃದ್ದಿಗಾಗಿ ನವ ಕಲಬುರಗಿ ನಿರ್ಮಾಣದ ನೀಲಿನಕ್ಷೆ ತಯಾರಾಗಿದ್ದು ಮುಂದಿನ ಎರಡು ವಾರದಲ್ಲಿ ಸಾರ್ವಜನಿಕರ ಮುಂದೆ ಇಡಲಿದ್ದೇವೆ ಎಂದು ಅವರು ಹೇಳಿದರು.
ಕಲಬುರಗಿ ಜಿಲ್ಲೆಯನ್ನು ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ ಅಡಿಯಲ್ಲಿ ಪ್ರವಾಸೋದ್ಯಮ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಎಲೆಕ್ಟ್ರಾನಿಕ್, ಉದ್ಯಮಶೀಲತೆ ಕ್ಷೇತ್ರಗಳ ಅಭಿವೃದ್ದಿ ಪಡಿಸಲಾಗುವುದು ಎಂದರು.ಕನ್ನಡಿಗರು ಕನ್ನಡವನ್ನು ಪ್ರೀತಿಸುತ್ತಾರೆ ಹಾಗೂ ಗೌರವಿಸುತ್ತಾರೆ. ಕನ್ನಡವನ್ನು ಯಾವುದೇ ಕಾರಣಕ್ಕೆ ಬಿಟ್ಟುಕೊಡುವುದಿಲ್ಲ. ಕನ್ನಡಿಗರ ಸೌಹಾರ್ದತೆಯೇ ಕರ್ನಾಟಕದ ಮಾನವ ಸಂಪನೂಲದ ಬಗ್ಗೆ ವಿಶ್ವದಲ್ಲೇ ಹೆಚ್ಚಿನ ಗೌರವವಿದೆ ಎಂದು ಹೇಳಿದರು.
ಜರ್ಮನ್ ಮೂಲದ ಮರ್ಸಿಡೀಸ್ ಬೆಂಜ್ ಅಧ್ಯಕ್ಷರು ತಾವು ಕರ್ನಾಟಕಕ್ಕೆ ಹೋಗಿಬಂದ ಮೇಲೆ ಹೊಸ ಚೈತನ್ಯ ಮೂಡುತ್ತದೆ. ಬೆಂಗಳೂರಿನ ತಮ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಕೆಲಸ ಮಾಡುವವರು ಜರ್ಮನಿಯನ್ನು ಸುಲಲಿತವಾಗಿ ಮಾತನಾಡುತ್ತಾ ಕೆಲಸ ಮಾಡುತ್ತಿದ್ದರು ಅದನ್ನು ನೋಡಿ ಖುಷಿಯಾಯಿತು ಎಂದು ಮಾಧ್ಯಮಗಳ ಸಂದರ್ಶನವೊಂದರಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಘಟನೆಯನ್ನು ಮೆಲುಕು ಹಾಕಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಅವರು, ರಾಜ್ಯದ ಜಿಡಿಪಿಗೆ ಬೆಂಗಳೂರು ಶೇ.40 ಕೊಡುಗೆ ನೀಡಿದ್ದರೆ, ದಕ್ಷಿಣಕನ್ನಡ ಶೇ.4.5, ಬೆಂಗಳೂರು ಗ್ರಾಮೀಣ ಶೇ.1 ಹಾಗೂ ಕಲಬುರಗಿ ಶೇ.1.9 ಕೊಡುಗೆ ನೀಡುತ್ತಿವೆ. ನವೋದ್ಯಮ ಸ್ಥಾಪನೆ, ಕೈಗಾರಿಕೆಗಳ ಅಭಿವೃದ್ದಿ, ಉದ್ಯೋಗ ಸೃಷ್ಟಿ, ಮಾನವ ಸಂಪನೂನ ಬೆಳವಣಿಗೆ, ಕೌಶಲ್ಯ ಅಭಿವೃದ್ದಿ, ಆವಿಷ್ಕಾರ ಕೇಂದ್ರ, ಕೃಷಿ ವಲಯದ ಸ್ಥಿರತೆ, ಪ್ರವಾಸೋದ್ಯಮದ ಬಲಪಡಿಸುವ ಗುರಿಯೊಂದಿಗೆ ನವಕಲಬುರಗಿಯನ್ನು ಅಭಿವೃದ್ದಿಪಡಿಸಲಾಗುವುದು ಎಂದರು.
ಕಲಬುರಗಿಯ ಜಿಡಿಪಿಯನ್ನು ಶೇ.1.9 ನಿಂದ ಶೇ.2.15ಗೆ ಎತ್ತರಿಸಲು ಪ್ರಯತ್ನಿಸಲಾಗುವುದು. ಬಿಯಾಂಡ್ ಬೆಂಗಳೂರು ಕಾರ್ಯಕ್ರಮ ಅಡಿಯಲ್ಲಿ ಬೆಂಗಳೂರು ಹೊರತುಪಡಿಸಿ ಕಲಬುರಗಿಯಲ್ಲಿ ನವೋದ್ಯಮದ ಉತ್ತೇಜನಕ್ಕೆ ಕ್ರಮವಹಿಸಲಾಗುತ್ತಿದೆ ಎಂದರು.
