ಬೆಂಗಳೂರು,ಮಾ.21- ಸಕ್ರೀಯ ರಾಜಕರಾಣದಿಂದ ದೂರ ಉಳಿಯಲು ತೀರ್ಮಾನಿಸಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಕಳೆದ ವರ್ಷದ ಆಗಸ್ಟ್‍ನಲ್ಲಿ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದ ಬಚ್ಚೇಗೌಡ ಈಗ ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದು, ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ನನ್ನ ಸ್ವ ಇಚ್ಛೆಯಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಅಂಗೀಕರಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2008ರಲ್ಲಿ ಬಿಜೆಪಿ ಪಕ್ಷದಲ್ಲಿ ಪ್ರಾಥಮಿಕ ಸದಸ್ಯತ್ವ ಪಡೆದು ಶಾಸಕನಾಗಿ, ಸಚಿವನಾಗಿ ಮತ್ತು 2019ರಲ್ಲಿ ಸಂಸದನಾಗಿ ಸಾರ್ವಜನಿಕ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಬಿಜೆಪಿ ಪಕ್ಷಕ್ಕೆ ಮತ್ತು ಪಕ್ಷದ ಹಿರಿಯ ಮುಖಂಡರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಹೇಳಿದ್ದಾರೆ.
ಚುನಾವಣಾ ರಾಜಕೀಯದಿಂದ ದೂರ ಇರಲು ನಿರ್ಧಾರ ಮಾಡಿದ್ದರೂ ಸಕ್ರಿಯ ರಾಜಕಾರಣದಲ್ಲಿಯೇ ಬಚ್ಚೇಗೌಡ ಇರಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಯಾರ ಪರವಾಗಿಯೂ ಕೆಲಸ ಮಾಡದಿರಲು ಬಚ್ಚೇಗೌಡ ನಿರ್ಧರಿಸಿದ್ದಾರೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಚ್ಚೇಗೌಡರ ಗೆಲುವಿನ ಮೂಲಕವೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿತ್ತು. ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆಯಾಗಿದ್ದು ಹೊಸಕೋಟೆ ಶಾಸಕರಾಗಿ ಆಯ್ಕೆಯಾಗಿದ್ದರು.
2019ರ ಲೋಕಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಕಾಂಗ್ರೆಸ್‍ನ ವೀರಪ್ಪ ಮೊಯ್ಲಿ ಅವರನ್ನು 1,82,110 ಮತಗಳ ಅಂತರದಿಂದ ಸೋಲಿಸಿದ್ದರು. ಬಚ್ಚೇಗೌಡ ಅವರಿಗೆ 7,45,912 ಮತಗಳು ಬಿದ್ದರೆ ಮೊಯ್ಲಿ ಅವರಿಗೆ 5,63,802 ಮತಗಳು ಬಂದಿದ್ದವು.