ಮುಂಬೈ : ಕಳೆದ ಹಲವು ದಿನಗಳಿಂದ ತೀವ್ರ ಆನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್‍ನ ಹೀ ಮ್ಯಾನ್, ಎವರ್‍ಗ್ರೀನ್ ಸ್ಟಾರ್, ಆಕ್ಷನ್ ಕಿಂಗ್ ಎಂದು ಜನಪ್ರಿಯರಾಗಿದ್ದ ಹಿರಿಯ ನಟ ಧರ್ಮೇಂದ್ರ (89) ಅವರು ಸೋಮವಾರ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಧರ್ಮೇಂದ್ರ ಅವರು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಸೋಮವಾರ ಬೆಳಿಗ್ಗೆ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. , ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಉಳಿಸಿಕೊಳ್ಳುವ ವೈದ್ಯರ ಪ್ರಯತ್ನ ಫಲಕೊಡಲಿಲ್ಲ.
ರಾಷ್ಟ್ರಪರಿ ದ್ರೌಪತಿ ಮುರ್ಮು, ಉಪ ರಾಷ್ಟ್ರಪತಿ ರಾಧಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೇ ಡಿಸೆಂಬರ್ 8ರಂದು 90ನೇ ವಸಂತಕ್ಕೆ ಕಾಲಿಡಲಿರುವ ನಟ ಧರ್ಮೇಂದ್ರ ಅವರನ್ನು ಕಳೆದ ವಾರವಷ್ಟೇ ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಲ್ಲದೇ ಏಪ್ರಿಲ್‍ನಲ್ಲಿ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು.
ಆರು ದಶಕಗಳ ವೃತ್ತಿಜೀವನದಲ್ಲಿ ಧರ್ಮೇಂದ್ರ ಅವರು ಹಿಂದಿ ಚಿತ್ರರಂಗದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಮನೋಹರಕ ಅಭಿನಯದಿಂದಾಗಿ ಬೇಗನೆ ಜನಪ್ರಿಯತೆಯನ್ನು ಪಡೆದರು.
1960ರಲ್ಲಿ ದಿಲ್ ಭೀ ತೇರಾ ಹಮ್ ಭೀ ತೇರೆ? ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಪ್ರಾರಂಭವಾಗಿ ಬಂದಿನಿ , ಅನುಪಮಾ, ಶೋಲೆ, ಚುಪ್ಕೆ ಚುಪ್ಕೆ, ಮೇರಾ ಗಾಂವ್ ಮೇರಾ ದೇಶ್ ಮತ್ತು ಡ್ರೀಮ್ ಗರ್ಲ್ ಸೇರಿದಂತೆ ಹಲವುಗಳಲ್ಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
2025ರ ಆರಂಭದಲ್ಲಿ ಧರ್ಮೇಂದ್ರ ಅವರು ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ನಟನೆಯ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ? ಸಿನಿಮಾದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಇನ್ನೂ ಡಿಸೆಂಬರ್ 25ರಂದು ತೆರೆಕಾಣಲಿರುವ ಇಕ್ಕಿಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಬಾಲಿವುಡ್ ನ ಮೂಲ ‘ ಹೀ-ಮ್ಯಾನ್ ‘ ಖ್ಯಾತಿಯ ಧರ್ಮೇಂದ್ರ , ತಮ್ಮ ಮನಮೋಹಕ ನಟನೆ, ಆಕರ್ಷಕ ರೂಪ ಮತ್ತು ಯಶಸ್ವಿ ಚಿತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದರು.
ಪಂಜಾಬ್ ನ ಸಾಮಾನ್ಯ ಹಿನ್ನೆಲೆಯಿಂದ ಬಂದು, ಭಾರತೀಯ ಚಿತ್ರರಂಗದ ದಿಗ್ಗಜರಾಗಿ ಬೆಳೆದ ಧರ್ಮೇಂದ್ರ ಅವರ ಜೀವನವು ಉತ್ಸಾಹ, ಕುಟುಂಬ ಮತ್ತು ಸಿನಿಮಾದಿಂದ ತುಂಬಿತ್ತು. 1935ರಲ್ಲಿ ಜನಿಸಿದ ಧರ್ಮೇಂದ್ರ ದೇವಲ್ ಅವರು 1950ರ ದಶಕದ ಕೊನೆಯಲ್ಲಿ ತಮ್ಮ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿ, ಶೀಘ್ರದಲ್ಲೇ ಭಾರತೀಯ ಚಿತ್ರರಂಗದ ಅಗ್ರ ತಾರೆಯಾದರು.
ಶೋಲೆ’, ‘ಸತ್ಯಕಾಮ್’, ‘ಚುಪ್ಕೆ ಚುಪ್ಕೆ’, ಮತ್ತು ‘ಯಾದೋನ್ ಕಿ ಬಾರಾತ್’ ನಂತಹ ಯಶಸ್ವಿ ಚಿತ್ರಗಳ ಮೂಲಕ ಅವರು ಮನೆಮಾತಾದರು. ಆದರೆ ತೆರೆಹಿಂದೆ, ಕುಟುಂಬದ ಬಾಂಧವ್ಯ, ಪ್ರೀತಿ ಮತ್ತು ಪರಂಪರೆಯಿಂದ ತುಂಬಿದ ಅವರ ನಿಜ ಜೀವನದ ಕಥೆಯೂ ಅಷ್ಟೇ ರೋಚಕವಾಗಿದೆ. ಧರ್ಮೇಂದ್ರ ಅವರು ಎರಡು ವಿವಾಹಗಳಾಗಿದ್ದವು. ಅವರ ಮೊದಲ ಪತ್ನಿ ಪ್ರಕಾಶ್ ಕೌರ್ ಅವರು ಯಾವಾಗಲೂ ಜನಸಂದಣಿಯಿಂದ ದೂರ ಉಳಿದಿದ್ದರು. ಅವರಿಗೆ ಸನ್ನಿ ದೇವಲ್, ಬಾಬಿ ದೇವಲ್, ವಿಜೇತಾ ಮತ್ತು ಅಜೀತಾ ಎಂಬ ನಾಲ್ಕು ಮಕ್ಕಳಿದ್ದಾರೆ.
ನಂತರ, ಧರ್ಮೇಂದ್ರ ಅವರು ಬಾಲಿವುಡ್ ನ ‘ಡ್ರೀಮ್ ಗರ್ಲ್’ ಹೇಮಾ ಮಾಲಿನಿ ಅವರನ್ನು ವಿವಾಹವಾದರು. ಅವರಿಬ್ಬರಿಗೂ ಎಶಾ ದೇವಲ್ ಮತ್ತು ಅಹಾನಾ ದೇವಲ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ದೇವಲ್ ಕುಟುಂಬವು ನಿಜಕ್ಕೂ ಬಾಲಿವುಡ್ ರಾಜಮನೆತನಕ್ಕೆ ಸಮಾನವಾಗಿದೆ. ಧರ್ಮೇಂದ್ರ ಅವರ ಹಿರಿಯ ಮಗ ಸನ್ನಿ ದೇವಲ್, ತಮ್ಮ ತಂದೆಯ ಹೆಜ್ಜೆಗಳನ್ನು ಅನುಸರಿಸಿ ಭಾರತದ ಅತ್ಯಂತ ಪ್ರೀತಿಯ ಆಕ್ಷನ್ ಹೀರೋಗಳಲ್ಲಿ ಒಬ್ಬರಾದರು. ತಮ್ಮ ಶಕ್ತಿಶಾಲಿ ಅಭಿನಯ ಮತ್ತು ಐಕಾನಿಕ್ ಸಂಭಾಷಣೆಗಳಿಗೆ ಹೆಸರುವಾಸಿಯಾದ ಸನ್ನಿ, ‘ಘಾಯಲ್’, ‘ಗಾದರ್: ಏಕ್ ಪ್ರೇಮ್ ಕಥಾ’, ಮತ್ತು ‘ಬಾರ್ಡರ್’ ನಂತಹ ಸೂಪರ್ ಹಿಟ್ ಚಿತ್ರಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದರು.
ಅವರು ರಾಜಕೀಯಕ್ಕೂ ಪ್ರವೇಶಿಸಿ, ಚಿತ್ರರಂಗದಲ್ಲಿ ಗೌರವಾನ್ವಿತ ತಾರೆಯಾಗಿ ಮುಂದುವರೆದಿದ್ದಾರೆ. ಧರ್ಮೇಂದ್ರ ಅವರ ಕಿರಿಯ ಮಗ ಬಾಬಿ ದೇವಲ್, 90ರ ದಶಕದಲ್ಲಿ ತಮ್ಮ ಚಾಕೊಲೇಟ್ ಬಾಯ್ ಲುಕ್ ನಿಂದ ಪ್ರೇಕ್ಷಕರನ್ನು ಮೋಡಿ ಮಾಡಿದರು. ‘ಬರ್ಸಾತ್’, ‘ಗುಪ್ತ್’, ಮತ್ತು ‘ಸೋಲ್ಜರ್’ ನಂತಹ ಚಿತ್ರಗಳು ಅವರನ್ನು ಯುವಕರ ಐಕಾನ್ ಆಗಿ ರೂಪಿಸಿದವು. ಒಂದು ಸಣ್ಣ ವಿರಾಮದ ನಂತರ, ಬಾಬಿ ‘ಆಶ್ರಮ್’ ಮತ್ತು ‘ಅನಿಮಲ್’ ಚಿತ್ರಗಳ ಮೂಲಕ ಅದ್ಭುತ ಪುನರಾಗಮನಗೈದು, ತಮ್ಮ ಕುಟುಂಬದ ಪ್ರತಿಭೆ ನಿಜಕ್ಕೂ ಅನನ್ಯ ಎಂದು ಸಾಬೀತುಪಡಿಸಿದರು.
ಧರ್ಮೇಂದ್ರ ಅವರ ಮೊದಲ ಪತ್ನಿಯ ಮಕ್ಕಳಾದ ವಿಜೇತಾ ಮತ್ತು ಅಜೀತಾ ಅವರು ಜನಸಂದಣಿಯಿಂದ ದೂರ ಉಳಿದು, ವಿದೇಶಗಳಲ್ಲಿ ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ, ಖಾಸಗಿ ಜೀವನ ನಡೆಸುತ್ತಿದ್ದಾರೆ. ಹೇಮಾ ಮಾಲಿನಿ ಅವರೊಂದಿಗಿನ ವಿವಾಹದಿಂದ ಜನಿಸಿದ ಧರ್ಮೇಂದ್ರ ಅವರ ಇಬ್ಬರು ಸುಂದರ ಹೆಣ್ಣು ಮಕ್ಕಳೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಎಶಾ ದೇವಲ್ 2000ರ ದಶಕದ ಆರಂಭದಲ್ಲಿ ಬಾಲಿವುಡ್ ಗೆ ಪಾದಾರ್ಪಣೆ ಮಾಡಿ ‘ಧೂಮ್’ ಮತ್ತು ‘ಯುವಾ’ ನಂತಹ ಚಿತ್ರಗಳಲ್ಲಿ ನಟಿಸಿದರು. ನಂತರ ಅವರು ತಮ್ಮ ಕುಟುಂಬ ಮತ್ತು ಇತರ ಸೃಜನಾತ್ಮಕ ಕೆಲಸಗಳ ಮೇಲೆ ಗಮನಹರಿಸಲು ಚಿತ್ರರಂಗದಿಂದ ದೂರ ಸರಿದರು. ಅಹಾನಾ ದೇವಲ್, ಮತ್ತೊಂದೆಡೆ, ತೆರೆಹಿಂದೆ ಉಳಿಯಲು ಇಷ್ಟಪಡುತ್ತಾರೆ ಮತ್ತು ತಮ್ಮ ತಾಯಿಯಂತೆ ನೃತ್ಯದ ಬಗ್ಗೆ ಅಪಾರ ಒಲವು ಹೊಂದಿದ್ದರು.
ಅರ್ಜುನ್ ಹಿಂಗೋರಾಣಿಯವರ ದಿಲ್ ಭಿ ತೇರಾ ಹಮ್ ಭಿ ತೇರೆ ಚಿತ್ರದ ಮೂಲಕ ಕಲಾ ಬದುಕನ್ನು ಪ್ರಾರಂಭಿಸಿದ ಧರ್ಮೇಂದ್ರ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದು, ತಮ್ಮ ವೃತ್ತಿಜೀವನದಲ್ಲಿ 238 ಚಿತ್ರಗಳಲ್ಲಿ ನಟಿಸಿದ್ದಾರೆ. ಇದರಲ್ಲಿ 93 ಚಿತ್ರಗಳು ಹಿಟ್ ಆಗಿವೆ.
ಶೋಲೆ (1975):
ಶೋಲೆ ಚಿತ್ರ ಅಂದಿನ ಒಂದು ಟೈಮ್ಲೆಸ್ ಕ್ಲಾಸಿಕ್ ಚಿತ್ರವಾಗಿದ್ದು, ಇಂದಿಗೂ ಸಹ ಸಿನಿ ಪ್ರೇಕ್ಷಕರಿಗೆ ಈ ಚಿತ್ರ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ ಮತ್ತು ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಈ ಚಲನಚಿತ್ರದಲ್ಲಿ ಬಾಲಿವುಡ್ ಅಂಗಳದ ಖ್ಯಾತ ನಟರುಗಳ ದೊಡ್ಡ ತಾರಾ ಬಳಗವೇ ಇತ್ತು. ನಟ ಧರ್ಮೇಂದ್ರ, ಸಂಜೀವ್ ಕುಮಾರ್, ಅಮಿತಾಭ್ ಬಚ್ಚನ್, ಅಮ್ಜದ್ ಖಾನ್, ಹೇಮಾ ಮಾಲಿನಿ, ಜಯಾ ಬಚ್ಚನ್ ಮುಂತಾದ ಅಪ್ರತಿಮ ತಾರೆಗಳನ್ನು ಶೋಲೆ ಚಿತ್ರ ಒಳಗೊಂಡಿತ್ತು. ಇವೆರೆಲ್ಲರ ಮಧ್ಯೆ ಧರ್ಮೇಂದ್ರ ಅವರ ಅಮೋಘವಾದ ನಟನೆ ಸಿನಿ ರಸಿಕರಿಗೆ ತುಂಬಾನೇ ಇಷ್ಟವಾಗಿತ್ತು. ಇಂದಿಗೂ ಅವರ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.
