ಬೆಂಗಳೂರು,ಜು.22– ನಗರದ ಮತ್ತೊಂದು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಗುಂಜೂರು ಮುಖ್ಯರಸ್ತೆಯಲ್ಲಿರುವ ಖಾಸಗಿ ಶಾಲೆಗೆ ಬಾಂಬ್ ಇಟ್ಟಿರುವುದಾಗಿ ಇಂದು ಬೆಳಗ್ಗೆ ಇ-ಮೇಲ್ ಸಂದೇಶ ಬಂದಿದೆ.
ಇ-ಮೇಲ್ ಪರಿಶೀಲಿಸುತ್ತಿದ್ದ ಸಿಬ್ಬಂದಿ ಈ ಸಂದೇಶ ಗಮನಿಸಿ ಗಾಬರಿಯಾಗಿ ಶಾಲಾ ಆಡಳಿತ ಮಂಡಳಿಗೆ ತಿಳಿಸಿದ್ದಾರೆ.ಶಾಲಾ ಆಡಳಿತ ಮಂಡಳಿ ತಕ್ಷಣ ಮಕ್ಕಳನ್ನು ಮನೆಗೆ ಕಳುಹಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರೀಯದಳ ಹಾಗೂ ಶ್ವಾನದಳದೊಂದಿಗೆ ಶಾಲೆ ಕಟ್ಟಡ ಹಾಗೂ ಸುತ್ತಮುತ್ತ ಪರಿಶೀಲಿಸಿದಾದರೂ ಯಾವುದೇ ಬಾಂಬ್ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ.
ನಂತರ ಇದು ಹುಸಿ ಸಂದೇಶ ಎಂದು ತಿಳಿದು ಶಾಲಾ ಆಡಳಿತ ಮಂಡಳಿ ನಿಟ್ಟುಸಿರುಬಿಟ್ಟಿದ್ದು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ.ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇ-ಮೇಲ್ ಸಂದೇಶ ಎಲ್ಲಿಂದ ಯಾರು ಕಳುಹಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಕಳೆದ ಶುಕ್ರವಾರ ನಗರದ 40 ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶಗಳು ಬಂದಿದ್ದವು. ಅದೇ ರೀತಿ ದೆಹಲಿಯಲ್ಲಿಯೂ ಸಹ ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಸಂದೇಶಗಳು ಬಂದಿದ್ದರಿಂದ ವಿದ್ಯಾರ್ಥಿಗಳು ಆತಂಕಗೊಂಡಿದ್ದರು.ಈ ರೀತಿಯ ಬಾಂಬ್ ಬೆದರಿಕೆ ಸಂದೇಶಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಶಾಲಾ ಆಡಳಿತ ಮಂಡಳಿಗಳು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲೆಗಳಿಗೆ ಹುಸಿಬಾಂಬ್: ಪೋಷಕರು ಆತಂಕಗೊಳ್ಳಬೇಡಿ
ಶಾಲೆಗಳಿಗೆ ಹುಸಿ ಬಾಂಬ್ ಇಮೇಲ್ ಸಂದೇಶಗಳು ಬರುತ್ತಿರುವುದರಿಂದ ಪೋಷಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬೇಡಿ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡುತ್ತಿದ್ದ ಅವರು, ಇತ್ತೀಚೆಗೆ 40 ಶಾಲೆಗಳಿಗೆ, ಇಂದು ಒಂದು ಶಾಲೆಗೆ ಹುಸಿಬಾಂಬ್ ಇಮೇಲ್ ಸಂದೇಶಗಳು ಬಂದಿವೆ ಎಂದು ವಿವರಿಸಿದರು. ಈ ಹಿಂದೆ ಈ ರೀತಿ ಹುಸಿ ಬಾಂಬ್ ಇಮೇಲ್ ಸಂದೇಶಗಳು ಮತ್ತು ಕರೆಗಳು ಮಾಡುತ್ತಿದ್ದವರನ್ನು ಬಂಧಿಸಿದ್ದೇವೆ. ಈಗ ಈ ಸಂದೇಶಗಳನ್ನು ಕಳುಹಿಸಿರುವ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುತ್ತೇವೆ ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಗ್ಗೆ ಸೈಬರ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಐಎಸ್‌ಡಿ ಅಧಿಕಾರಿಗಳ ಜೊತೆ ಚರ್ಚೆ ಸಹ ಮಾಡಿದ್ದೇವೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆಹಚ್ಚುತ್ತೇವೆ ಎಂದು ಆಯುಕ್ತರು ಹೇಳಿದರು.
ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣವನ್ನು ನಾವು ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಸುತ್ತಿದ್ದೇವೆ. ಇದುವರೆಗೂ 7 ಮಂದಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಆಯುಕ್ತರು ವಿವರಿಸಿದರು. ಈ ಪ್ರಕರಣದಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯಾರೇ ಭಾಗಿಯಾಗಿದ್ದರೂ ಸಹ ಅವರನ್ನು ಮುಲಾಜಿಲ್ಲದೆ ಬಂಧಿಸುತ್ತೇವೆ ಎಂದು ಆಯುಕ್ತರು ಹೇಳಿದರು.
- ಅಂಡಾಣು ಸಂರಕ್ಷಣೆ ಬಗ್ಗೆ ವೃತ್ತಿಪರ ಮಹಿಳೆಯರಲ್ಲಿ ಹೆಚ್ಚಿದ ಒಲವು
- ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಲ್ಲಿ ನೆಲೆಸಿದ್ದ 9 ವಿದೇಶಿ ಪ್ರಜೆಗಳ ಬಂಧನ
- ಧನ್ಕರ್ ರಾಜೀನಾಮೆಗೆ ಕಾರಣವಾಯ್ತೇ ನ್ಯಾ.ವರ್ಮಾ ಪ್ರಕರಣ..?
- ಯುಎಸ್ಡಿಟಿ ಕರೆನ್ಸಿಗೆ ಪರಿವರ್ತನೆ ಆಮಿಷ : 15 ಮಂದಿ ಸೆರೆ, 1.11 ಕೋಟಿ ರೂ. ನಗದು ಜಪ್ತಿ
- ಬೆಂಗಳೂರಿನ ಮತ್ತೊಂದು ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ