ಬೆಂಗಳೂರು, ಫೆ.24- ವಿಧಾನಸಭೆ ಸಚಿವಾಲಯದ ವತಿಯಿಂದ ಫೆಬ್ರವರಿ 27 ರಿಂದ ಮಾರ್ಚ್ 3ರ ವರೆಗೆ ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.27ರಂದು ಸಂಜೆ 5 ಗಂಟೆಗೆ ಪುಸ್ತಕ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಉದ್ಘಾಟನೆ ನಂತರ
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಸಚಿವರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಅವರು
ಹೇಳಿದರು. ಫೆ.28 ಮತ್ತು ಮಾ.2ರಂದು ಸಂಜೆ 5 ಗಂಟೆ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಮಾ.2ರಂದು ಖ್ಯಾತ ಗಾಯಕರಾದ ಸಾಧುಕೋಕಿಲ ಅವರಿಂದ ಸಂಗೀತ ರಸಸಂಜೆ ರ್ಪಡಿಸಲಾಗುತ್ತದೆ ಎಂದು ಅವರು ತಿಳಿಸಿದರು.
ಫೆ.28ರಿಂದ ಮಾ.2ರ ವರೆಗೆ ವಿಧಾನಸೌಧದ ಆವರಣದಲ್ಲಿ ಪ್ರತಿದಿನ ಎರಡು ವೇದಿಕೆಗಳಲ್ಲಿ ವಿವಿಧ ವಿಷಯಗಳ ಸಂವಾದ ಕಾರ್ಯಕ್ರಮಗಳು, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ಜರುಗಲಿವೆ. ಈ ಸಂವಾದ ಕಾರ್ಯಕ್ರಮಗಳಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರು ವಿವಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಅಲ್ಲದೆ ವಿವಿಧ ಲೇಖಕರ ಪುಸ್ತಕಗಳ ಬಿಡುಗಡೆಗೂ ಅವಕಾಶ ಮಾಡಿಕೊಡಲಾಗುತ್ತದೆ. ಫೆ.28 ರಿಂದ ಮಾ.2ರ ವರೆಗೆ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.
ಮಾ.3ರಂದು ರಾಜ್ಯಪಾಲರಾದ ಥಾವರ್‌ಚಂದ್ ಗೆಹೋಟ್ ಅವರು ಪುಸ್ತಕ ಮೇಳ ವೀಕ್ಷಿಸಲಿದ್ದಾರೆ. ವಿಧಾನಮಂಡಲದ ಉಭಯ ಸದನಗಳ ಸದಸ್ಯರು ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪ್ರಸಕ್ತ ಸಾಲಿನ ಅನುದಾನದಲ್ಲಿ 2 ಲಕ್ಷ ರೂ.ಗಳ ಮಿತಿಯೊಳಗೆ ಶಾಸಕರ ಪುಸ್ತಕಗಳನ್ನು ಖರೀದಿಸಿ ಆಯಾ ಕ್ಷೇತ್ರ ವ್ಯಾಪ್ತಿಯ
ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ.
216ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲು ಬೇಡಿಕೆ ಇದೆ. 150 ಮಳಿಗೆ ತೆರೆಯಲು ಮಾತ್ರ ಅವಕಾಶವಿದ್ದು, ವಿವಿಧ ಅಕಾಡೆಮಿಗಳ ಮಳಿಗೆಗಳು, ಖಾಸಗಿ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ.
ರಾಜ್ಯ, ಹೊರರಾಜ್ಯ, ಅಂತಾರಾಷ್ಟ್ರೀಯ ಮಟ್ಟದ ಪ್ರಕಾಶಕರು ಮಳಿಗೆ ತೆರೆಯಲು ಅವಕಾಶ ಕೋರಿದ್ದಾರೆ. ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟಕ್ಕೆ ಅವಕಾಶವಿರುತ್ತದೆ. ಮೇಳದ ಅಂಗವಾಗಿ ಐದು ಮಂದಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.