ನವದೆಹಲಿ, ನ.27- ಅದಾನಿ ಹಾಗೂ ಉತ್ತರ ಪ್ರದೇಶದ ಸಾಂಬಲ್ನಲ್ಲಿ ನಡೆದ ಹಿಂಸಾಚಾರ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ ಗದ್ದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸದನವನ್ನು ನಾಳೆಗೆ ಮುಂದೂಡಲಾಗಿದೆ.
ಬೆಳಿಗ್ಗೆ 11.00 ಗಂಟೆಗೆ ಸದನ ಆರಂಭಗೊಳ್ಳುತ್ತಿದ್ದಂತೆಯೇ ವಿಪಕ್ಷದ ಸಂಸದರು ಸ್ಪೀಕರ್ ಮುಂದೆ ಧಾವಿಸಿ, ಕೂಡಲೇ ಅದಾನಿ ಲಂಚ ಪ್ರಕರಣ ಕುರಿತಂತೆ ಚರ್ಚೆಗೆ ಅವಕಾಶ ನೀಡಬೇಕೆಂದು ಘೋಷಣೆಗಳನ್ನು ಕೂಗಿದರೆ, ಇನ್ನೂ ಕೆಲವರು ಸಾಂಬಾಲ್ನಲ್ಲಿ ನಡೆದ ಹಿಂಸಾಚಾರ ಘಟನೆಯನ್ನು ಪ್ರಸ್ತಾಪಿಸಿದರು. ಸ್ಪೀಕರ್ ಓಂ ಬಿರ್ಲಾ ಅವರು ಸದಸ್ಯರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದಾದರೂ ಯಾವುದೇ ಪ್ರಯೋಜನ ವಾಗದ ಹಿನ್ನಲೆಯಲ್ಲಿ ಸದನವನ್ನು 12 ಗಂಟೆಗೆ ಮುಂದೂಡಿದರು.
ನಂತರ ಸದನ ಶುರುವಾದರೂ ಪರಿಸ್ಥಿತಿ ತಿಳಿಗೊಳ್ಳದ ಕಾರಣ ಸ್ಪೀಕರ್ ಆಸನಲ್ಲಿದ್ದ ದಿಲೀಪ್ ಅವರು ಕೆಲ ವಿಷಯಗಳನ್ನು ಪ್ರಸ್ತಾಪಿಸಿ, ಸದನವನ್ನು ನಾಳೆಗೆ ಮುಂದೂಡಿದ್ದರು.
ರಾಜ್ಯಸಭೆಯಲ್ಲೂ ಕೂಡ ಅದಾನಿ ಪ್ರಕರಣ ಸೇರಿದಂತೆ ವಿವಿಧ ವಿಷಯಗಳು ಪ್ರಸ್ತಾಪವಾಗಿ ಸದನದಲ್ಲಿ ವಿಪಕ್ಷ ಸದಸ್ಯರು ಸರ್ಕಾರದ ನಡೆಯನ್ನು ಕಟುವಾಗಿ ಠೀಕಿಸಿದರು.
ರಾಜ್ಯ ರಾಜಧಾನಿ ನವದೆಹಲಿಯಲ್ಲಿ ಅಪರಾಧಗಳು ಹೆಚ್ಚುತ್ತಿರುವುದು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಪಟ್ಟುಹಿಡಿದಾಗ ಸದನದಲ್ಲಿ ಕೋಲಾಹಲ ಉಂಟಾಗಿತ್ತು.
ಸಭಾಪತಿ ಹಾಗೂ ಉಪ ರಾಷ್ಟ್ರಪತಿ ಜಗದದೀಪ್ ಅವರು ಮೊದಲು ಸದನವನ್ನು 11.30ಕ್ಕೆ ಮುಂದೂಡಿದರು. ಆದರೆ ನಂತರ ಕಾಂಗ್ರೆಸ್ನಿಂದ ಸುಮಾರು 18 ನೋಟೀಸ್ಗಳು ಸಲ್ಲಿಕೆಯಾಗಿ ಚರ್ಚೆಗೆ ಪಟ್ಟು ಹಿಡಿದು, ಸದನದ ಭಾವಿಗಿಳಿದು ಘೋಷಣೆ ಕೂಗದಾಗ ಪರಿಸ್ಥಿತಿ ಕೈಮೕರಿ ಸದನವನ್ನು ನಾಳೆಗೆ ಮುಂದೂಡಲಾಯಿತು.