ಬೆಂಗಳೂರು, ಸೆ.18– ಕೇರಳದಲ್ಲಿ ಕಾಣಿಸಿ ಕೊಂಡಿರುವ ಮೆದುಳು ತಿನ್ನುವ ಅಮೀಬಾ ಕಾಯಿಲೆ ಬಗ್ಗೆ ರಾಜ್ಯದ ಜನ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿಕೊಂಡಿದೆ.
ನೆರೆಯ ಕೇರಳದಲ್ಲಿ ಅಮೀಬಾ ಸೋಂಕಿಗೆ 19 ಮಂದಿ ಪ್ರಾಣ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನರು ಕೆರೆ, ಕುಂಟೆಗಳಲ್ಲಿ ಈಜಾಡುವ ಮುನ್ನ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳು ಕೇಳಿಕೊಂಡಿದ್ದಾರೆ.
ನೆಗ್ಲೇರಿಯಾ ಫೊವ್ಲೆರಿ ಎನ್ನುವ ಈ ಸೋಂಕು ಇಲ್ಲಿಯವರೆಗೂ 61 ಜನರಲ್ಲಿ ಕಾಣಿಸಿಕೊಂಡಿದ್ದು, ಇದುವರೆಗೂ 19ಜನರನ್ನು ಬಲಿ ಪಡೆದುಕೊಂಡಿದೆ.ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ಸೋಂಕು ಪತ್ತೆಯಾಗಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಸೋಂಕು ಪತ್ತೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಜನರು ಎಲ್ಲೇಂದರಲ್ಲಿ ಈಜಾಡುವುದು, ಸ್ನಾನ ಮಾಡುವುದನ್ನು ತಪ್ಪಿಸಬೇಕು ಎಂದು ಇಲಾಖೆ ಮನವಿ ಮಾಡಿಕೊಂಡಿದೆ.
ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಲ್ಲಿ ಕಂಡುಬರುವ ಈ ಅಮೀಬಾ ಸೋಂಕಿನಿಂದ ನೇರವಾಗಿ ಕೇಂದ್ರ ನರವ್ಯೂಹದ ಮೇಲೆ ಪರಿಣಾಮ ಬೀರುತ್ತದೆ. ಮೂರು ತಿಂಗಳ ಶಿಶುವಿನಿಂದ ಹಿಡಿದು 90 ವರ್ಷದ ವೃದ್ಧರವರೆಗೂ ಈ ಸೋಂಕ ಪತ್ತೆಯಾಗಿದೆಯಂತೆ.
ಸೋಂಕು ಹರಡುವ ಅಮೀಬಾವು ಸಾಮಾನ್ಯವಾಗಿ ನಿಂತ ನೀರು, ಕೊಳಗಳು ಮತ್ತು ಸರೋವರಗಳಂತಹ ಬೆಚ್ಚಗಿನ ನೀರಿನಲ್ಲಿ ಕಂಡುಬರುತ್ತದೆ. ಈ ನೀರಿನಲ್ಲಿ ಸ್ನಾನ ಮಾಡುವಾಗ ಅಥವಾ ಈಜುವಾಗ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿ ಮೆದುಳಿನ ನರವ್ಯೂಹದ ಮೇಲೆ ಪರಿಣಾಮ ಬೀರುತ್ತೆ.
ಆದರೆ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ. ತಲೆನೋವು, ಜ್ವರ, ವಾಕರಿಕೆ ಬರುವುದು ಮತ್ತು ವಾಂತಿ ಈ ಸೋಂಕಿನ ಲಕ್ಷಣವಾಗಿರುತ್ತದೆ.ಸೋಂಕು ತಗುಲಿದ 1 ರಿಂದ 9 ದಿನಗಳಲ್ಲಿ ರೋಗಲಕ್ಷಣಗಳು ಕಂಡು ಬರಲಿದೆ. ಮೂಗಿನ ಮೂಲಕ ಮೆದುಳಿಗೆ ವೇಗವಾಗಿ ಪ್ರವೇಶಿಸುವ ಈ ಅಮೀಬಾ, ಕೆಲವೇ ಗಂಟೆಗಳಲ್ಲಿ ರೋಗವನ್ನು ತೀವ್ರಗೊಳಿಸುತ್ತದೆ. ಒಂದು ವೇಳೆ ನಿಂತ ನೀರಿನ ಸಂಪರ್ಕಕ್ಕೆ ಬಂದ ನಂತರ ಜ್ವರ ಅಥವಾ ತಲೆನೋವಿನಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಆರೋಗ್ಯ ಇಲಾಖೆ ಕೇಳಿಕೊಂಡಿದೆ.