ಹಾಸನ,ಮೇ 23-ತಾಳಿ ಕಟ್ಟುವ ಶುಭವೇಳೆ ಕೈಯಲ್ಲಿ ಹೂವಿನ ಮಾಲೆ ಅನ್ನೋ ಸಿನಿಮಾ ಹಾಡಿಗೆ ವಿರುದ್ಧವಾಗಿ ಇಲ್ಲೋಬ್ಬಳು ಪುಣ್ಯಾತ್‌ಗಿತ್ತಿ ತಾಳಿ ಕಟ್ಟುವ ಸಮಯಕ್ಕೆ ಸರಿಯಾಗಿ ನನಗೆ ಈ ವರ ಇಷ್ಟ ಇಲ್ಲ ಎಂದು ಮದುವೆ ಕ್ಯಾನ್ಸಲ್ ಮಾಡಿಕೊಂಡಿರುವ ಘಟನೆ ಬೂವನಹಳ್ಳಿಯಲ್ಲಿ ನಡೆದಿದೆ.
ಪ್ರಿಯಕರನ ಜೊತೆ ಸಪ್ತಪದಿ ತುಳಿಯಲು ಕೊನೆ ಘಳಿಗೆಯಲ್ಲಿ ನಿರ್ಧರಿಸಿ ತಾಳಿ ಕಟ್ಟುವ ವೇಳೆ ಮದುವೆ ಒಲ್ಲೆ ಎಂದ ಯುವತಿಯನ್ನು ಬೂವನಹಳ್ಳಿಯ ಸ್ನಾತಕೋತ್ತರ ಪದವೀಧರೆ ಪಲ್ಲವಿ ಎಂದು ಗುರುತಿಸಲಾಗಿದೆ. ಪಲ್ಲವಿಯ ವಿವಾಹ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಶಿಕ್ಷಕ ವೇಣುಗೋಪಾಲ ಎಂಬುವವರ ಜೊತೆ ನಿಶ್ಚಿಯವಾಗಿದ್ದು, ಇಂದು ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು.
ವರ ಮತ್ತು ವಧುವಿನ ಕಡೆಯ ಸಂಬಂಧಿಕರು, ಬಂಧು-ಬಳಗದವರು, ಸ್ನೇಹಿತರು ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಿದ್ದರು. ಇನ್ನೇನು ತಾಳಿ ಕಟ್ಟಿದರೆ ಮದುವೆ ಮುಗಿಯಿತು. ಊಟ ಮಾಡಿಕೊಂಡು ಮನೆಗೆ ಹೋಗೋಣ ಅಂದುಕೊಂಡವರಿಗೆ ಶಾಕ್ ಕಾದಿತ್ತು. ಎಲ್ಲಾ ಮದುವೆ ಶಾಸ ಮುಗಿದು ವರ ಕೈಯಲ್ಲಿ ತಾಳಿ ಹಿಡಿದು ಪಲ್ಲವಿಗೆ ಕಟ್ಟಲು ಮುಂದಾಗುತ್ತಿದ್ದಂತೆ ಏಕಾಏಕಿ ನನಗೆ ಈ ಮದುವೆ ಬೇಡವೇಬೇಡ ಎಂದು ನಿರಾಕರಿಸುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾರೆ.
ತಾಳಿ ಕಟ್ಟಿಸಿಕೊಳ್ಳುವ ವೇಳೆ ವಧುವಿಗೆ ಮೊಬೈಲ್ ಕರೆಯೊಂದು ಬಂದಿದ್ದು, ಕರೆ ಬಂದ ಬೆನ್ನಲ್ಲೇ ನಾನು ಬೇರೆ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಈ ಮದುವೆ ಬೇಡ ಎಂದು ಹಠ ಹಿಡಿದು ಸೀದಾ ರೂಂಗೆ ಹೋಗಿ ಚಿಲಕ ಹಾಕಿಕೊಂಡಿದ್ದಾಳೆ.
ಪೋಷಕರು, ಸಂಬಂಧಿಕರು ಹಾಗೂ ಹಿರಿಯರು ಮುಹೂರ್ತದ ಸಮಯ ಮೀರುವ ಮುನ್ನ ತಾಳಿ ಕಟ್ಟಿಸಿಕೊಳ್ಳಬೇಕೆಂದು ಪಲ್ಲವಿಗೆ ಎಷ್ಟೇ ಬುದ್ದಿವಾದ ಹೇಳಿ ಮನವೊಲಿಸಲು ಯತ್ನಿಸಿದರಾದರೂ ವಿದ್ಯಾವಂತೆ ಪಲ್ಲವಿ ಯಾರ ಮಾತನ್ನೂ ಕಿವಿ ಮೇಲೆ ಹಾಕಿಕೊಳ್ಳಲೇ ಇಲ್ಲ.ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಸಂಬಂ ಕರನ್ನು ಸಮಾಧಾನ ಪಡಿಸಿ ನಂತರ ಪಲ್ಲವಿಗೆ ಮದುವೆ ಮಾಡಿಕೊಳ್ಳಲು ಮನವೊಲಿಸಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ.
ಪಲ್ಲವಿ ಮದುವೆ ಬೇಡ ಎಂದು ಹಠ ಹಿಡಿದಾಗ, ಆಕೆಗೆ ಇಷ್ಟವಿಲ್ಲದಿದ್ದರೆ ನನಗೂ ಈ ಮದುವೆ ಬೇಡವೆಂದು ಸರ್ಕಾರಿ ಶಾಲಾ ಶಿಕ್ಷಕ ವೇಣುಗೋಪಾಲ್ ತಿಳಿಸಿದ್ದರಿಂದ ವಿವಾಹ ರದ್ದಾಗಿದ್ದು ಮದುವೆಗೆ ಬಂದು ಧಾರೆ ಎರೆದು ಹರಸಬೇಕಿದ್ದ ಬಂಧು-ಬಳಗದವರು ಕಣ್ಣೀರಧಾರೆ ಹರಿಸಿ ಹೋಗುವಂತಾಯಿತು.
ಮದುವೆ ನಿಶ್ಚಯಕ್ಕೂ ಮುನ್ನವೇ ವಧು ತನ್ನ ಪ್ರೀತಿಯ ಬಗ್ಗೆ ತಿಳಿಸಿದ್ದರೆ ನಾವು ಈ ಮದುವೆ ಮಾಡುತ್ತಿರಲಿಲ್ಲ. ಆದರೆ ತಾಳಿ ಕಟ್ಟುವ ಸಮಯದವರೆಗೂ ಸುಮನಿದ್ದು ಕೊನೆ ಕ್ಷಣದಲ್ಲಿ ಪಲ್ಲವಿ ಕೈಕೊಟ್ಟು ಹೋಗಿದ್ದು ಸರಿಯಲ್ಲ ಎನ್ನುತ್ತಾರೆ ವಧುವಿನ ಸಂಬಂಧಿ ಮಂಜುನಾಥ್. ಆಕೆ ಮೊದಲೆ ತಮ ಪ್ರೀತಿ ವಿಚಾರ ತಿಳಿಸಿದ್ದರೆ ನಾವೇ ಮುಂದೆ ನಿಂತು ವಿವಾಹ ಮಾಡಿಕೊಡುತ್ತಿದ್ದೆವು. ಏನು ಮಾಡೋದು ಎಲ್ಲಾ ದೈವಿಚ್ಚೆ ಎಂದು ಅವರು ತಲೆ ಮೇಲೆ ಕೈಹೊತ್ತಿಕೊಂಡರು.