ತಿ.ನರಸೀಪುರ.ಏ.21 ಮದುವೆ ಮಂಟಪದಿಂದ ತಂಗಿಯೊಂದಿಗೆ ಕಾಣೆಯಾಗಿದ್ದ ವಧು ಪತ್ತೆಯಾಗಿದ್ದು ಪೋಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾಳೆ. ನಿನ್ನೆ ಹಸೆಮಣೆ ಏರಬೇಕಿದ್ದ ಬೆನಕನಹಳ್ಳಿ ಗ್ರಾಮದ ಯುವತಿ ಕಲ್ಯಾಣಮಂಟಪದಿಂದ ಏಕಾಏಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಮದುವೆ ಮುರಿದು ಬಿದ್ದಿತ್ತು.
ಈ ಸಂಬಂಧ ಪಟ್ಟಣ ಪೋಲಿಸ್ ಠಾಣೆಯಲ್ಲಿ ವಧುವಿನ ತಂದೆ ತನ್ನ ಮಗಳು ಕಾಣೆಯಾದ ಬಗ್ಗೆ ದೂರು ನೀಡಿ ಅದೇ ಗ್ರಾಮದ ಜಗದೀಶ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.ಆದರೆ ನಿನ್ನೆ ಸಂಜೆ ಜಗದೀಶನೊಂದಿಗೆ ಹಾಜರಾದ ವಧು ನಾನು ಆತನೊಂದಿಗೆ ಹೋಗಿರಲಿಲ್ಲ.ಮದುವೆಯಾಗಬೇಕಿದ್ದ ವರನಿಗೆ ಐವರು ಸಹೋದರಿಯರು ಇದ್ದದ್ದರಿಂದ ಅಲ್ಲಿ ನಾನು ಸಂಸಾರ ಮಾಡುವುದು ಕಷ್ಟ ಎಂದು ಭಾವಿಸಿ ಕಲ್ಯಾಣ ಮಂಟಪದಿಂದ ಹೊರಹೋಗಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.
ನನ್ನ ತಂಗಿ ಸಹ ನಾನೇನಾದರೂ ವ್ಯತ್ಯಾಸ ಮಾಡಿಕೊಳ್ಳಬಹುದೆಂಬ ಆತಂಕದಿಂದ ನನ್ನೊಂದಿಗೆ ಬಂದಿದ್ದಳು ಎನ್ನುವ ಮೂಲಕ ಇಡೀ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.ನನ್ನ ಮಗಳು ಕಲ್ಯಾಣ ಮಂಟಪದಿಂದ ಹೋಗಲು ಜಗದೀಶ್ ಎಂಬಾತನೇ ಕಾರಣ ಎಂದು ಪೋಲೀಸರಿಗೆ ದೂರು ನೀಡಿದ್ದ ವಧುವಿನ ತಂದೆ ಇಬ್ಬರು ಮಕ್ಕಳು ಠಾಣೆಗೆ ಹಾಜರಾಗುತ್ತಿದ್ದಂತೆ ಯೂಟರ್ನ್ ಹೊಡೆದಿದ್ದು, ನನ್ನ ಮಕ್ಕಳಿಬ್ಬರೂ ಬಂದಿದ್ದಾರೆ. ನಮಗೇ ಯಾವುದೇ ಕೇಸ್ ಬೇಕಿಲ್ಲ.
ಮಕ್ಕಳನ್ನು ನಮ್ಮೊಂದಿಗೆ ಕಳುಹಿಸಿಕೊಡಿ ಎಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಪೋಲೀಸರು ಪ್ರಕರಣವನ್ನು ಮುಕ್ತಾಯಗೊಳಿಸಿ ಮಕ್ಕಳಿಬ್ಬರನ್ನು ತಂದೆಯೊಂದಿಗೆ ಕಳುಹಿಸಿಕೊಟ್ಟರು. ಆದರೆ ಈ ಪ್ರಕರಣದಲ್ಲಿ ಜಗದೀಶ್ ಎಂಬಾತನ ಪಾತ್ರವೇನು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದುಕೊಂಡಿತು.