ಬೆಂಗಳೂರು,ಜ.27– ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿ ನಿರ್ಮಿಸಲಾಗಿರುವ 25 ಅಡಿ ಎತ್ತರದ ನಾಡದೇವಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣ ಇಂದು ಸಂಜೆ ನಡೆಯಲಿದೆ. ಸಂಜೆ ಆರು ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಣ್ಯರ ಸಮುಖದಲ್ಲಿ ಭುವನೇಶ್ವರಿ ಕಂಚಿನ ಪ್ರತಿಮೆ ಅನಾವರಣಗೊಳಿ ಸಲಿದ್ದಾರೆ.
ಪ್ರತಿಮೆಯನ್ನು ವಿಶೇಷವಾಗಿ ಅಲಂಕಾರ ಗೊಳಿಸಲಾಗಿದೆ. ಕನ್ನಡ ಹಬ್ಬದ ವಾತಾವರಣ ಕಂಡುಬರುತ್ತಿದೆ. ನಾಡದೇವಿ ಪ್ರತಿಮೆಯ ಹಿಂದೆ ಕರ್ನಾಟಕ ನಕ್ಷೆ ಹಾಗೂ ಉಬ್ಬು ಶಿಲ್ಪ ಇದ್ದು, ಮುಂಭಾಗದಲ್ಲಿ ಭೌಗೋಳಿಕ ನಕ್ಷೆ ಇದ್ದರೆ, ಹಿಂಬದಿಯಲ್ಲಿ ನಾಡಗೀತೆಯನ್ನು ಕೆತ್ತಲಾಗಿದೆ.
ಕರ್ನಾಟಕದ ಪ್ರಸಿದ್ಧ ಶಿಲ್ಪಕಲಾ ಶೈಲಿಗಳಾದ ಹೊಯ್ಸಳ, ಚಾಲುಕ್ಯ, ಕದಂಬ ಹಾಗೂ ಆಧುನಿಕ ನೈಜ ಶಿಲ್ಪಗಳ ಶೈಲಿಗಳನ್ನು ಅಳವಡಿಸಿ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಇದರಲ್ಲಿ ರಾಜಲಾಂಛನಗಳಾದ ಹೊಯ್ಸಳ ಲಾಂಛನ, ವೈಜಯಂತಿ ಮಾಲೆ, ಕಂಠೀಹಾರ, ಗಂಡಭೇರುಂಡ ಇರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಪ್ರತಿಮೆಯ ಸುತ್ತಲೂ ಉದ್ಯಾನವನ, ಆವರಣದ ಸುತ್ತಲೂ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಪಶ್ಚಿಮದ ದ್ವಾರಕ್ಕೆ ಇರುವ ನಾಡದೇವಿ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವನ್ನು ಕಲ್ಪಿಸಲಾಗಿದೆ. ಇದಕ್ಕೆಂದೇ ಪಶ್ಚಿಮಕ್ಕೆ ಪ್ರತ್ಯೇಕ ಗೇಟ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ಇರಲಿದೆ ಎಂದು ಹೇಳಿದ್ದಾರೆ.
ಪ್ರತಿಮೆ ಅನಾವರಣದ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ 4 ದಿಕ್ಕುಗಳಿಂದ ಹತ್ತಾರು ಕಲಾ ತಂಡಗಳ ಮೆರವಣಿಗೆ ಹಮಿಕೊಳ್ಳಲಾಗಿದೆ. ನಾಡದೇವಿ ಭುವನೇಶ್ವರಿ ಪ್ರತಿಮೆ ಅನಾವರಣದ ಬಳಿಕ ಕನ್ನಡ ಗೀತೆಗಳ ಕಾರ್ಯಕ್ರಮ ಮತ್ತು ಹೊನ್ನ ಬಿತ್ತೇವು ¬ ನೃತ್ಯ ರೂಪಕ ಕಾರ್ಯಕ್ರಮ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ ಎಂದು ಸಚಿವರು ವಿವರಿಸಿದ್ದಾರೆ.
ಕರ್ನಾಟಕ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಹೆಸರಾಯಿತು ಕರ್ನಾಟಕ ಹಾಗೂ ಉಸಿರಾಗಲಿ ಕನ್ನಡ ಎಂಬ ಶೀರ್ಷಿಕೆಯಡಿ ವರ್ಷವಿಡೀ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಅದರಂತೆ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಲು ನಿರ್ಧರಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.