ಬೆಂಗಳೂರು,ಆ.8- ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ಹಣಕ್ಕಾಗಿ ಪೀಡಿಸುತ್ತಿದ್ದ ಸಹೋದರಿಯ ಮಗನನ್ನೇ ಮಾವ ಕೊಲೆ ಮಾಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಅಮೋಘ ಕೀರ್ತಿ (14) ಸೋದರ ಮಾವನಿಂದಲೇ ಕೊಲೆಯಾದ ಬಾಲಕ.
ನಾಗಪ್ರಸಾದ್ ಹಾಗೂ ಸಹೋದರಿಯರು ಒಂದೇ ಮನೆಯಲ್ಲಿ ವಾಸವಿದ್ದರು. ಇತ್ತೀಚೆಗಷ್ಟೆ ನಾಗಪ್ರಸಾದ್ ಕುಂಬಾರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಹೋಗಿದ್ದು ವಿವಾಹ ಮಾಡಿಕೊಂಡಿರಲಿಲ್ಲ.
ನಾಗಪ್ರಸಾದ್ (50) ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದು, ಇವರ ಸಹೋದರಿ ಶಿಲ್ಪಾ ಅವರ ಪುತ್ರ ಅಮೋಘ ಕೀರ್ತಿಯನ್ನು 11 ತಿಂಗಳಿನಿಂದ ತನ್ನ ಮನೆಯಲ್ಲೇ ಇರಿಸಿಕೊಂಡಿದ್ದಾನೆ.ಅಮೋಘಕೀರ್ತಿ ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ಹಣಕ್ಕಾಗಿ ಮಾವನೊಂದಿಗೆ ಪ್ರತಿನಿತ್ಯ ಹಠ ಮಾಡುತ್ತಿದ್ದನು. ಹಣ ಇಲ್ಲವೆಂದಾಗ ವಿನಾಕಾರಣ ಮನೆಯಲ್ಲಿ ಕೂಗುವುದು,ಕಿರುಚುವುದು ಮಾಡುತ್ತಿದ್ದನು. ಇದರಿಂದ ನಾಗಪ್ರಸಾದ್ ರೋಸಿ ಹೋಗಿದ್ದರು.
ಆನ್‌ಲೈನ್ ಗೇಮ್‌ನಿಂದಾಗಿ ಅಮೋಘಕೀರ್ತಿಯ ಹಠ ಸ್ವಭಾವವನ್ನು ಗಮನಿಸಿದ ಮಾವ ಅಮೋಘಕೀರ್ತಿಯನ್ನು ಸಾಯಿಸಲು ನಿರ್ಧಾರ ಮಾಡಿದ್ದಾನೆ. ಅದರಂತೆ ಆ.4 ರಂದು ಬೆಳಗಿನ ಜಾವ 5.50 ರ ಸುಮಾರಿನಲ್ಲಿ ನಾಗಪ್ರಸಾದ್ ಎದ್ದು ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ರೂಮಿಗೆ ಹೋಗಿದ್ದಾನೆ.
ಗಾಢ ನಿದ್ರೆಯಲ್ಲಿದ್ದ ಅಮೋಘಕೀರ್ತಿಯ ಮುಖವನ್ನು ಬಟ್ಟೆಯಿಂದ ಸುತ್ತಿ, ಕೈಯಿಂದ ಬಾಯಿಮುಚ್ಚಿ ಚಾಕುವಿನಿಂದ ಕತ್ತು ಕೊಯ್ದು ಮಾವ ಕೊಲೆ ಮಾಡಿದ್ದಾನೆ.ನಂತರ ನೇಣು ಹಾಕಿಕೊಂಡು ಆತಹತ್ಯೆಗೆ ಯತ್ನಿಸಿದಾಗ ಅದು ಸಾಧ್ಯವಾಗದಿದ್ದಾಗ ಬ್ಯಾಗಿಗೆ ಬಟ್ಟೆಗಳನ್ನು ತುಂಬಿಕೊಂಡು ಮನೆಯಿಂದ ಹೊರಗೆ ಹೋದ ನಾಗಪ್ರಸಾದ್ ಯಾವುದಾದರೂ ನದಿಗೆ ಹಾರಲು ನಿರ್ಧರಿಸಿದ್ದಾನೆ.
ಮೆಜೆಸ್ಟಿಕ್‌ಗೆ ಹೋಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೂರು ದಿನ ಕಾಲ ಕಳೆದಿದ್ದಾನೆ. ಆ ವೇಳೆ ಆತನ ಬಳಿ ಇದ್ದ ಬ್ಯಾಗ್ ಹಾಗೂ ಮೊಬೈಲ್ ಕಳ್ಳತನವಾಗಿದೆ. ಮುಂದೇನು ಮಾಡುವುದೆಂದು ತೋಚದೆ ಸೀದಾ ಪೊಲೀಸ್ ಠಾಣೆಗೆ ಹೋಗಿ ಶರಣಾಗಿ ನಡೆದ ಘಟನೆಯನ್ನು ವಿವರಿಸಿದ್ದಾನೆ.
ಪೊಲೀಸರು ಆತನನ್ನು ವಶಕ್ಕೆ ಪಡೆದು ಮನೆ ಬಳಿ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಬಾಲಕನ ಮೃತದೇಹ ಕಂಡುಬಂದಿದೆ.ಪೊಲೀಸರು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.