Friday, September 20, 2024
Homeಬೆಂಗಳೂರುಹ್ಯಾಂಡ್‌ ಬ್ರೇಕ್‌ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್‌ ಬೈಕ್‌ಗೆ ಡಿಕ್ಕಿಯಾಗಿ ಸಹೋದರರ ದುರ್ಮರಣ

ಹ್ಯಾಂಡ್‌ ಬ್ರೇಕ್‌ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್‌ ಬೈಕ್‌ಗೆ ಡಿಕ್ಕಿಯಾಗಿ ಸಹೋದರರ ದುರ್ಮರಣ

ಬೆಂಗಳೂರು, ಆ.17- ಇಳಿಜಾರು ಪ್ರದೇಶದಲ್ಲಿ ಹ್ಯಾಂಡ್‌ ಬ್ರೇಕ್‌ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್‌ ವಾಹನ ಏಕಾಏಕಿ ಚಲಿಸಿದ ಪರಿಣಾಮ ಸ್ಕೂಟರ್‌ಗೆ ಡಿಕ್ಕಿ ಹೊಡೆದು ನಂತರ 7 ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿದ ಪರಿಣಾಮ ಸರಣಿ ಅಪಘಾತವಾಗಿ ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ಬನಾರಸ್‌‍ ಮೂಲದ ಶಾಹಿದ್‌ ರಾಜ್‌(21) ಮತ್ತು ರಿಯಾಜ್‌ರಾಜ್‌(14) ಮೃತಪಟ್ಟ ಸಹೋದರರು.ಗುಡದಹಳ್ಳಿಯ ಎಫ್‌ ಸ್ಟ್ರೀಟ್‌ನಲ್ಲಿ ಈ ಇಬ್ಬರು ಸಹೋದರರು ವಾಸವಾಗಿದ್ದುಕೊಂಡು ಸೀರೆ ನೇಯುವ ವೃತ್ತಿ ಮಾಡುತ್ತಿದ್ದರು.

ಗುಡದಹಳ್ಳಿಯ ಎಫ್‌ ಸ್ಟ್ರೀಟ್‌ನಲ್ಲಿ ಮನೆಯೊಂದನ್ನು ನಿರ್ಮಿಸುತ್ತಿದ್ದು, ಈ ಜಾಗಕ್ಕೆ ಇಂದು ಕ್ಯಾಂಟರ್‌ನಲ್ಲಿ ಹಾಲೋಬ್ರಿಕ್ಸ್ ತರಲಾಗಿತ್ತು. ಚಾಲಕ ಹ್ಯಾಂಡ್‌ ಬ್ರೇಕ್‌ ಹಾಕದೇ ತರಾತುರಿಯಲ್ಲಿ ವಾಹನ ನಿಲ್ಲಿಸಿ ತೆರಳಿದ್ದಾನೆ.

ಇಂದು ಬೆಳಗ್ಗೆ 8.30ರಲ್ಲಿ ಈ ಇಬ್ಬರು ಸಹೋದರರು ಹಾಲು ತರಲು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಿದ್ದ ಕ್ಯಾಂಟರ್‌ ಏಕಾಏಕಿ ಮುಂದೆ ಸಾಗಿ ಸಹೋದರರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ಕ್ಯಾಂಟರ್‌ ಮುಂದಕ್ಕೆ ಸಾಗಿ ಮತ್ತೆ ಏಳು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ಇದರಿಂದಾಗಿ ಸಾರ್ವಜನಿಕರು ಆತಂಕಗೊಂಡರು. ಈ ಮಾರ್ಗದಲ್ಲಿ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

ಸುದ್ದಿ ತಿಳಿದು ಬ್ಯಾಟರಾಯನಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಸಹೋದರರ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.ನಂತರ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News