ಹೈದರಾಬಾದ್, ಮಾ 15- ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ-ಇಡಿ ಶುಕ್ರವಾರ ಬಿಆರ್ಎಸ್ ಪಕ್ಷದ ಎಂಎಲ್ಸಿ ಮತ್ತು ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ಅವರನ್ನು ವಶಕ್ಕೆ ತೆಗೆದುಕೊಂಡಿದೆ.
ಈ ಹಿಂದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆಕೆ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ್ದರು. ಕವಿತಾ ಅವರನ್ನು ಇಂದು ರಾತ್ರಿ ದೆಹಲಿಗೆ ಕರೆದೊಯ್ಯಲಾಗುವುದು ಎಂದು ಇಡಿ ಅಧಿಕಾರಿಗಳನ್ನು ತಮಗೆ ತಿಳಿಸಿದರು ಎಂದು ಬಿಆರ್ಎಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಪ್ರಶಾಂತ್ ರೆಡ್ಡಿ ಹೇಳಿದ್ದಾರೆ.
ಕವಿತಾ ಅವರನ್ನು ರಾತ್ರಿ 8.45 ರ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಜಾರಿ ನಿರ್ದೇಶನಲಾಯದ ಅಧಿಕಾರಿಗಳು ಮನೆಯಲ್ಲಿ ನಮಗೆ ತಿಳಿಸಿದ್ದರು. ಅಧಿಕಾರಿಗಳು ಇಲ್ಲಿಗೆ ಬರುವ ಮುನ್ನವೇ ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ಬಂದಿದ್ದಾರೆ. ಕವಿತಾ ಅವರನ್ನು ವಶಕ್ಕೆ ತೆಗೆದುಕೊಳ್ಳುವುದು ಅವರ ಪೂರ್ವ ನಿಯೋಜಿತ ಆಲೋಚನೆಯಾಗಿತ್ತು ಎನಿಸುತ್ತದೆ ಎಂದು ಪ್ರಶಾಂತ್ ಹೇಳಿದ್ದಾರೆ.
ಬಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, ಮಾಜಿ ಸಚಿವ ಹರೀಶ್ ರಾವ್ ಹಾಗೂ ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಕವಿತಾ ಅವರ ನಿವಾಸದಲ್ಲಿ ಜಮಾಯಿಸಿ ಘೋಷಣೆ ಕೂಗಿದರು. ಕವಿತಾ ಅವರನ್ನು ಯಾವ ಪ್ರಕರಣದಲ್ಲಿ ಪ್ರಶ್ನಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ದೆಹಲಿ ಅಬಕಾರಿ ನೀತಿ ಸಂಬಂಧಿತ ಪ್ರಕರಣಕ್ಕೂ ಇಂದಿನ ವಿಚಾರಣೆಗೂ ಸಂಬಂಧವಿದೆಯೇ ಎಂಬುದು ಸ್ಪಷ್ಟವಾಗಿಲ್ಲ. 2021-22 ರ ದೆಹಲಿಯ ಅಬಕಾರಿ ನೀತಿಯ ಅಡಿಯಲ್ಲಿ ದೊಡ್ಡ ಲಾಭ ಪಡೆಯಲು ಯತ್ನಿಸುತ್ತಿರುವ ಮದ್ಯದ ವ್ಯಾಪಾರಿಗಳ ಲಾಬಿಯೊಂದಿಗೆ ಕವಿತಾ ಸಂಪರ್ಕ ಹೊಂದಿದ್ದಾರೆ ಎಂದು ಇಡಿ ಹೇಳಿಕೊಂಡಿತ್ತು.